

ಬೆಂಗಳೂರು: ಜೆಪಿ ನಗರ 7ನೇ ಹಂತದ ಸನ್‍ಸಿಟಿ ಅಪಾರ್ಟ್‍ಮೆಂಟ್‍ನ ಟೆನ್ನಿಸ್ ಕ್ಲಬ್ ಕೋಚ್ ಅಶೋಕ್(26) ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಪಾರ್ಟ್‍ಮೆಂಟ್‍ನವರೇ ಒದಗಿಸಿದ್ದ
ಕೊಠಡಿ ಯೊಂದರಲ್ಲಿ ಅಶೋಕ್ ವಾಸವಿದ್ದರು.ಶುಕ್ರವಾರ ರಾತ್ರಿ ಕೊಠಡಿಯ ಹೊರಗಿರುವ ಸ್ನಾನದ ಕೋಣೆಯಲ್ಲಿ ಅಶೋಕ ನೇಣು ಹಾಕಿ ಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಬೆಳಗ್ಗೆ ಸ್ನಾನದ ಕೋಣೆಗೆ ಒಳಗಿನಿಂದ ಬಾಗಿಲು ಹಾಕಿದ್ದನ್ನು ಗಮನಿಸಿದ ಸೆಕ್ಯುರಿಟಿ ಗಾರ್ಡ್ ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಇತ್ತ ಅಶೋಕ್ ಗಾಗಿ ಅಪಾರ್ಟ್‍ಮೆಂಟ್ ವಾಸಿಗಳು ಹುಡುಕಾಟ ನಡೆಸಿ, ಆತನ ಮೊಬೈಲ್ ಫೋನ್‍ಗೆ ಕರೆ ಮಾಡಿದಾಗಲೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಹೀಗಾಗಿ, ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಹುಳಿಮಾವು ಪೊಲೀಸರು ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ಅಶೋಕ್ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.
ಅನಾರೋಗ್ಯ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದೆ ಅಶೋಕ್ ಸಹೋದರ ನಿಧನರಾಗಿದ್ದರು. ಇದರಿಂದ ಬೇಸರಗೊಂಡಿದ್ದ ಅಶೋಕ್ ಅದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಕುಟುಂಬ ಸದಸ್ಯರು ಪೊಲೀಸರಿಗೆ ತಿಳಿಸಿದ್ದಾರೆ. ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.