ಕೆಲಸಕ್ಕಿದ್ದ ಮನೆಗೆ ಕನ್ನ ಹಾಕಿದ ಸಹೋದರರು!

ಕಾನ್ಕಾರ್ಡ್ ಮಿಡ್‍ವೇ ಸಿಟಿ ಅಪಾರ್ಟ್‍ಮೆಂಟ್‍ನಲ್ಲಿ ನಡೆದ ಕಳ್ಳತನ ಕೆಲಸ ಮಾಡುತ್ತಿದ್ದ ಮನೆಯಲ್ಲಿಯೇ ಚಿನ್ನಾಭರಣ ಕಳವು ಮಾಡಿದ ಆರೋಪದ ಮೇಲೆ ಇಬ್ಬರು ಸಹೋದರರನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ಕಾನ್ಕಾರ್ಡ್ ಮಿಡ್‍ವೇ ಸಿಟಿ ಅಪಾರ್ಟ್‍ಮೆಂಟ್‍ನಲ್ಲಿ ನಡೆದ ಕಳ್ಳತನ ಕೆಲಸ ಮಾಡುತ್ತಿದ್ದ ಮನೆಯಲ್ಲಿಯೇ ಚಿನ್ನಾಭರಣ ಕಳವು ಮಾಡಿದ ಆರೋಪದ ಮೇಲೆ ಇಬ್ಬರು ಸಹೋದರರನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.

ಬೇಗೂರು ಸಮೀಪದ ಬಸವಪುರ ನಿವಾಸಿ ಶಿವಪ್ರಸಾದ್ (26) ಮತ್ತು ಜನಾರ್ದನ(28) ಬಂಧಿತರು. ಇವರಿಂದ ರು.76.46 ಲಕ್ಷ ಮೌಲ್ಯದ 295 ಗ್ರಾಂ ತೂಕದ ವಜ್ರಗಳು, 884 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರು ಬಸವಪುರದ ಕಾನ್ಕಾರ್ಡ್ ಮಿಡ್‍ವೇ ಸಿಟಿ ಅಪಾರ್ಟ್‍ಮೆಂಟ್ ನಿವಾಸಿ ಸುಂದರ್‍ರಾಮ್ ರೆಡ್ಡಿ ಅವರ ಮನೆಯಲ್ಲಿ ಕಳ್ಳತನ ಮಾಡಿದ್ದರು. ಸುಂದರ್ ದಂಪತಿ ಬೆಂಗಳೂರು ಮತ್ತು ಹೊಸೂರಿನಲ್ಲಿ ಡಯಾಲಿಸಿಸ್ ಸೆಂಟರ್ ನಡೆಸುತ್ತಿದ್ದಾರೆ. ಇವರು 4 ಕಾರು, ಸ್ವಂತ ಮನೆ, ಫ್ಲ್ಯಾಟ್ ಹೀಗೆ ಸಾಕಷ್ಟು ಆಸ್ತಿ ಹೊಂದಿದ್ದರು.

ಕಾರುಗಳ ಚಾಲಕರಾಗಿ ಶಿವಪ್ರಸಾದ್ ಮತ್ತು ಜನಾರ್ದನ್ ಎಂಬುವರನ್ನು ನಿಯೋಜಿಸಿಕೊಂಡಿದ್ದರು. ಅಪಾರ್ಟ್‍ಮೆಂಟ್ ಸಮೀಪದ ಮನೆಯಲ್ಲಿ ವಾಸವಿದ್ದರು. ದಿಡೀರ್ ದುಡ್ಡು ಸಂಪಾದಿಸಬೇಕು ಎನ್ನುವ ಯೋಚನೆ ಮಾಡಿದ ಆರೋಪಿಗಳು, ತಾವು ಕೆಲಸ ಮಾಡುತ್ತಿರುವ ಸುಂದರ್ ಅವರ ಮನೆಯಲ್ಲಿ ಕಳ್ಳತನ ಮಾಡಿದರೆ ಸಾಕಷ್ಟು ಚಿನ್ನಾಭರಣ ಮತ್ತು ನಗದು ದೋಚಬಹುದು ಎಂದು ಸಂಚು ರೂಪಿಸಿದ್ದರು. ಸಂಬಂಧಿಕರ ಮದುವೆಗೆ ತೆರಳಲು ಲಾಕರ್ ನಲ್ಲಿಟ್ಟಿದ್ದ ಚಿನ್ನಾಭರಣವನ್ನು ಸುಂದರ್ ದಂಪತಿ ತೆಗೆದಿದ್ದರು.

ಮರಳಿ ಲಾಕರ್‍ನಲ್ಲಿಡುವ ಬದಲು ಮಲಗುವ ಕೋಣೆಯ ಕಬೋರ್ಡ್‍ನಲ್ಲಿರಿಸಿದ್ದರು. ಮಾ.15 ರಂದು ಸುಂದರ್ ದಂಪತಿ ಹೊಸೂರಿನ ಡಯಾಲಿಸಿಸ್ ಸೆಂಟರ್‍ಗೆ ಹೋಗಿದ್ದಾಗ, ಪರಿಚಿತರನ್ನು ಮಾತನಾಡಿಸುವ ನೆಪದಲ್ಲಿ ಅಪಾರ್ಟ್‍ಮೆಂಟ್‍ಗೆ ನುಗ್ಗಿ ನಕಲಿ ಕೀ ಬಳಸಿ ವಜ್ರ, ಚಿನ್ನಾಭರಣಗಳನ್ನು ಕದ್ದಿದ್ದರು. ಸಂಜೆ ಮನೆ ಮಾಲೀಕರು ವಾಪಸಾದಾಗ ಪ್ರಕರಣ ಬೆಳಕಿಗೆ ಬಂದಿತ್ತು.

ಬದಲಾದ ಜೀವನಶೈಲಿ:
ಕಳವು ಮಾಡಿದ ಬಳಿಕ ಸಹೋದರರು, ಆಂಧ್ರದ ರಾಯಚೋಟಿ ಮತ್ತು ಹೊಸೂರಿನಲ್ಲಿ ಸ್ವಲ್ಪ ಆಭರಣಗಳನ್ನು ಮಾರಿ, ಉಳಿದಿದ್ದನ್ನು ಮನೆಯಲ್ಲಿಯೇ ಇಟ್ಟುಕೊಂಡಿದ್ದರು. ತನಿಖೆ ಆರಂಭಿಸಿದ ಪೊಲೀಸರಿಗೆ ಅಪಾರ್ಟ್ ಮೆಂಟ್ ನ ಸಿಸಿ ಕ್ಯಾಮೆರಾದಲ್ಲಿ ಆರೋಪಿಗಳ ಸುಳಿವು ಸಿಕ್ಕಿರಲಿಲ್ಲ. ಹೀಗಾಗಿ ಮಾರುವೇಷದಲ್ಲಿ ಆರೋಪಿಗಳು ವಾಸವಿದ್ದ ಬಸವಪುರದಲ್ಲಿ ಸಹೋದರರ ಚಲನವಲನ ಮೇಲೆ ನಿಗಾ ಇಟ್ಟರು. ಈ ವೇಳೆ ಅವರ ಜೀವನಶೈಲಿಯಲ್ಲಿ ಸಾಕಷ್ಟು ಬದಲಾವಣೆ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com