

ಮೈಸೂರು: ಮಂಗಳವಾರ ದನಗಾಹಿಯೊಬ್ಬರನ್ನು ಸಾಯಿಸಿರುವ ಹುಲಿ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ. ಕಳೆದ ತಿಂಗಳು ನಡೆದ ಪ್ರಕರಣದಲ್ಲಿ ಮನುಷ್ಯರ ಮೇಲೆ ದಾಳಿ ನಡೆಸಿ ಕೊಂದ ಹುಲಿಯೇ ಮತ್ತೆ ದಾಳಿ ನಡೆಸಿರಬಹುದೆಂಬ ಅನುಮಾನ ಇದೆ.
ಕಳೆದ ಬಾರಿ ದಾಳಿ ನಡೆಸಿದ ಹುಲಿ ಆಕಸ್ಮಿಕವಾಗಿ ತನ್ನ ರಕ್ಷಣೆ ಮಾಡಿಕೊಳ್ಳಲು ದಾಳಿ ನಡೆಸಿದೆ, ಆದರೆ ಮಂಗಳವಾರ ನಡೆಸಿದ ದಾಳಿ ನರರಕ್ತದ ರುಚಿಯಿಂದ ಆಗಿರಬಹುದು ಎಂದು ಶಂಕಿಸಲಾಗಿದೆ. ಬಳಿಕ ಇದು ಕಾಡಿನೊಳಗೆ ಹೋಗಿದೆ. ನಾಗರಹೊಳೆ ವ್ಯಾಪ್ತಿಗೆ ಬರುವ ದೂರನಕಟ್ಟೆ ಬಳಿ ನೀರು ಕುಡಿದು ಹೋಗಿರುವ ಹೆಜ್ಜೆ ಗುರುತು ಕಂಡು ಬಂದಿದೆ. ಅದನ್ನು ಬೆನ್ನಟ್ಟಿ ಪಶುವೈದ್ಯರಾದ ಡಾ.ನಾಗರಾಜು, ಶಾಂತನ್, ಎಸ್‍ಟಿಎಫ್ ತಂಡದ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಎಸಿಎಫ್ ಜಿ. ವೆಂಕಟೇಶ್ ಮಾಹಿತಿ ನೀಡಿದರು.
ಎಚ್.ಡಿ. ಕೋಟೆ ತಾಲೂಕಿನ ಹಾದನೂರು ಗ್ರಾಮದ ಶಿವಣ್ಣ ಎಂಬವರನ್ನು ಬಲಿ ತೆಗೆದುಕೊಂಡ ಅರಣ್ಯ ಪ್ರದೇಶದಸುತ್ತಮುತ್ತ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅವರು ಶಸuಉಸಜ್ಜಿತರಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಲ್ಲದೇ ಹುಲಿಯ ಸೆರೆಗೆ ಜಯಪ್ರಕಾಶ್ ನೇತೃತ್ವದ ಆನೆ ತಂಡವನ್ನು ಬಳಸಿಕೊಳ್ಳಲಾಗಿದೆ. ಅಲ್ಲಲ್ಲಿ ಹುಲಿ ಸೆರೆಗೆ ಬೋನುಗಳನ್ನು ಕೂಡ ಇಡಲಾಗಿದೆ. ಅಗತ್ಯಬಿದ್ದಲ್ಲಿ ಹುಲಿಯ ಮೇಲೆ ಗುಂಡು ಹಾರಿಸಲು ಕೂಡ ಅನುಮತಿ ನೀಡಲಾಗಿದೆ.
10 ಮಂದಿ ಬಲಿ: ನಾಗರಹೊಳೆ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಕಳೆದ ಐದು ವರ್ಷಗಳಲ್ಲಿ ಹುಲಿ ಮತ್ತು ಮಾನವ ಸಂಘರ್ಷದಲ್ಲಿ 10 ಮಂದಿ ಜೀವ ತೆತ್ತಿದ್ದಾರೆ. ಎರಡು ವರ್ಷಗಳ ಹಿಂದೆ ನಾಲ್ಕು ಮಂದಿಯ ಸರಣಿಯಾಗಿ ಹುಲಿಯ ಬಾಯಿಗೆ ಆಹಾರವಾಗಿದ್ದರು. ಈಗ ಒಂದು ತಿಂಗಳ ಅವಧಿಯಲ್ಲಿ ಇಬ್ಬರು ಬಲಿಯಾಗಿದ್ದಾರೆ. ಮತ್ತೊರ್ವ ಮಹಿಳೆಯೂ ಹುಲಿ ಬಾಯಿಗೆ ಸಿಲುಕಿರುವ ಅನುಮಾನ ಇದೆ.