

ಬೆಂಗಳೂರು: ಅಗತ್ಯ ಮೂಲಭೂತ ಸೌಕರ್ಯ ಒದಗಿಸಬೇಕು, ಸಂಚಾರ ದಟ್ಟಣೆ ನಿವಾರಣೆ ಮಾಡಬೇಕು ಎಂಬಿತ್ಯಾದಿ ಬೇಡಿಕೆ ಈಡೇರಿಸುವಂತೆ ವೈಟ್ ಫೀಲ್ಡ್ ಹಾಗೂ ಸುತ್ತಮುತ್ತಲ ನಿವಾಸಿಗಳು ಸೋಮವಾರ `ಸೇವ್ ವೈಟ್ ಫೀಲ್ಡ್' ಪ್ರತಿಭಟನೆ ಹಮ್ಮಿಕೊಂಡಿದ್ದರು.
ಬೆಳಗ್ಗೆ 11ರ ಸುಮಾರಿಗೆ ಹೂಡಿ ಜಂಕ್ಷನ್, ಮಾರತ್ ಹಳ್ಳಿ ಬ್ರಿಡ್ಜ್ , ಕಂದನಹಳ್ಳಿ ಗೇಟ್-ಕೆಟಿಪಿಓ, ನಲ್ಲೂರಹಳ್ಳಿ, ಐಟಿಪಿಎಲ್‍ನ ನಿವಾಸಿಗಳು ತಮ್ಮ ಬಡಾವಣೆಗಳಲ್ಲಿ ಸೇರಿ ನಂತರ ಅಲ್ಲಿಂದ ಐಟಿಪಿಎಲ್ ವರೆಗೆ ಮೆರವಣಿಗೆ ಸಾಗಿ, ಮಾನವ ಸರಪಳಿ ನಿರ್ಮಿಸಿ ಸರ್ಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು. ಸ್ಥಳೀಯ ಜನಪ್ರತಿನಿಧಿಗಳು ಮಹದೇವಪುರ ಕ್ಷೇತ್ರದ ಎಲ್ಲಾ ಬಡಾವಣೆಗಳನ್ನು ಪರಿಶೀಲಿಸಬೇಕು, ಕೂಡಲೇ ಈ ಭಾಗದ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯ ನಿವಾಸಿ ಶ್ರೀನಿವಾಸ ರೆಡ್ಡಿ, ಸಂಚಾರ ದಟ್ಟಣೆ ಸಮಸ್ಯೆಯಿಂದ ದಿನದ ಹೆಚ್ಚಿನ ಸಮಯವನ್ನು ಕಚೇರಿ ಬಿಟ್ಟರೆ ರಸ್ತೆಯಲ್ಲೇ ಕಳೆಯುತ್ತಿದ್ದೇವೆ. ಧೂಳು, ಕಸದ ವಾಸನೆ ಸಹಿಸಿಕೊಂಡು ಕಚೇರಿಗೆ ಹೋಗಿಬರುವಾಗ ಜೀವ ಹೈರಾಣಾಗುತ್ತಿದೆ ಎಂದು ಬೇಸರಿಸಿದರು. ಗುಂಡಿ ಬಿದ್ದ ರಸ್ತೆಗಳಿಂದ ಅತಿಯಾದ ಧೂಳು
ಆವರಿಸುತ್ತಿರುವ ಪರಿಣಾಮ ಇಲ್ಲಿನ ನಿವಾಸಿಗಳು ಅನಾರೋಗ್ಯ ಪೀಡಿತರಾಗುತ್ತಿದ್ದೇವೆ. ಶೀತ, ತಲೆನೋವು, ಕೆಮ್ಮಿನಿಂದ ಬಳಲುತ್ತಿದ್ದೇವೆ. ಇಲ್ಲಿನ ರಸ್ತೆ ಗುಂಡಿ ಮುಚ್ಚಲು ಇನ್ನೆಷ್ಟು ದಿನಬೇಕೋ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಭಾಗಕ್ಕೆ ಭೇಟಿ ನೀಡಿ ಇಲ್ಲಿನ ಜನರ ಅಳಲು ಆಲಿಸುವಂತೆ ನಗರಾಭಿವೃದ್ಧಿಸಚಿವ ಕೆ.ಜೆ.ಜಾರ್ಜ್ ಅವರಲ್ಲಿ ಮನವಿ ಮಾಡಲಾಗಿತ್ತು. ಆದರೆ, ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ, ನಂತರ ಭೇಟಿ ಮಾಡುವು ದಾಗಿ ತಿಳಿಸಿದ್ದಾರೆ. ಅದಕ್ಕೂ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಸಮಸ್ಯೆಗಳನ್ನು ಈಡೇರಿಸಬೇಕು. ಗುಂಡಿ ಮುಚ್ಚಿ ಆಗಿರುವ ಅವ್ಯವಸ್ಥೆ ಸರಿಪಡಿಸಬೇಕು. ನಂತರ ಕ್ರಮೇಣವಾಗಿ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಿದರು.