

ಬೆಂಗಳೂರು: ಮುಂದಿನ ಎರಡು ವರ್ಷದ ಅವಧಿಯಲ್ಲಿ ರಾಜ್ಯದ ವಿದ್ಯುತ್ ಪ್ರಮಾಣ ಈಗಿರುವುದಕ್ಕಿಂತ ಎರಡೂವರೆ ಪಟ್ಟು ಹೆಚ್ಚಾಗಲಿದ್ದು, ದೀರ್ಘಾವಧಿ ಯೋಜನೆಗಳನ್ನು ರೂಪಿಸುವುದಕ್ಕೆ ಇಂಧನ ಇಲಾಖೆ ಸಿದ್ಧತೆ ನಡೆಸಿದೆ.
ಈ ಸಂಬಂಧ ಇಂಧನ ಇಲಾಖೆ ಅಧಿಕಾರಿಗಳ ಜತೆಗೆ ಸುದೀರ್ಘ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಮುಂದಿನ ಹತ್ತು ವರ್ಷಗಳ ನಂತರ ರಾಜ್ಯದಲ್ಲಿ ಇಂಧನ ಬೇಡಿಕೆ 22200 ಮೆಗಾವ್ಯಾಟ್‍ಗೆ ತಲುಪಲಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ ಎಂದು ಹೇಳಿದರು.
ಈ ಸಂಬಂಧ ಪಿಜಿಸಿಎಲ್ ನಿರ್ದೇಶಕರ ಜತೆಯೂ ಚರ್ಚೆ ನಡೆಸಲಾಗಿದೆ. ಕೇಂದ್ರದ ಸಹಕಾರವೂ ಅಗತ್ಯವಿದೆ. ಕೆಪಿಸಿಎಲ್ ಮತ್ತು ಖಾಸಗಿ ಪಾತ್ರದ ಬಗ್ಗೆಯೂ ನಿರ್ಧಾರ ಮಾಡುತ್ತೇವೆ ಎಂದರು. 2016ರ ಮಾರ್ಚ್ ಹೊತ್ತಿಗೆ ಪವನ ಶಕ್ತಿಯಿಂದ 485 ಮೆಗಾವ್ಯಾಟ್, ಸೋಲಾರ್‍ನಿಂದ 487 ಮೆಗಾವ್ಯಾಟ್, ಬಯೋಮಾಸ್‍ನಿಂದ 20 ಮೆಗಾವ್ಯಾಟ್, ಕೋ-ಜೆನ್ ನಿಂದ 114 ಮೆಗಾವ್ಯಾಟ್, ಕಿರು ಜಲವಿದ್ಯುತ್ ಯೋಜನೆಗಳಿಂದ 43 ಮೆಗಾವ್ಯಾಟ್ ಸೇರಿದಂತೆ 1150 ಮೆಗಾವ್ಯಾಟ್ ವಿದ್ಯುತ್ ಹೆಚ್ಚುವರಿಯಾಗಿ ರಾಜ್ಯದ ಜಾಲಕ್ಕೆ ಸೇರ್ಪಡೆಯಾಗುತ್ತದೆ. ಜತೆಗೆ ದಕ್ಷಿಣದ ವಿದ್ಯುತ್ ಸಂಪರ್ಕ ಜಾಲಗಳಿಂದ ವಿದ್ಯುತ್ ಪಡೆಯುವುದಕ್ಕೆ ಸಹಕರಿಸುವಂತೆ ರಾಜ್ಯದ ಮುಖ್ಯಮಂತ್ರಿಗಳು ದಕ್ಷಿಣದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಿದ್ದಾರೆ ಎಂದು ಹೇಳಿದರು.
ಕರ್ನಾಟಕ ಮಾದರಿ: ರಾಜ್ಯದ ಸೋಲಾರ್ ನೀತಿ ಬಗ್ಗೆ ಪ್ರಧಾನಿ ಮೋದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಬುಧವಾರ ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಇಂಧನ ಇಲಾಖೆ ಅಧಿಕಾರಿಗಳ ಜತೆಗೆ ವಿಡಿಯೋ ಕಾನ್ಫರೆನ್ಸ್ ನಡೆಸಿರುವ ಪ್ರಧಾನಿ ಮೋದಿ ಸೋಲಾರ್ ಉತ್ಪಾದನಾ ಕ್ಷೇತ್ರದಲ್ಲಿ ಕರ್ನಾಟಕ ಎಲ್ಲ ರಾಜ್ಯಗಳಿಗೂ ಮಾದರಿ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನೂ 500 ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆ ಬಗ್ಗೆ ನಾವು ಚಿಂತನೆ ನಡೆಸಿದ್ದೇವೆ ಎಂದರು.