ಬೆಂಗಳೂರು: ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ಹೋಟೆಲ್ ಕೆಲಸಗಾರನ ಸಾವಿರ ರುಪಾಯಿಯ ಮೊಬೈಲ್ ಫೋನ್ ಕಿತ್ತುಕೊಂಡು ಚಾಕುವಿನಂದ ಇರಿದು ಕೊಲೆ ಮಾಡಿದ ನಾಲ್ವರು ಯುವಕರನ್ನು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಮಲ್ಲೇಶ್ವರ ಪೊಲೀಸರು ಬಂಧಿಸಿದ್ದಾರೆ. ಮಲ್ಲೇಶ್ವರ 15ನೇ ಕ್ರಾಸ್ ಬಳಿ ಇರುವ `1947' ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಆಶೀಷ ಪಾಲ್ (32) ಕೊಲೆಯಾದವರು. ಈ ಸಂಬಂಧ ಶ್ರೀರಾಮಪುರ ಸಮೀಪದ ಲಕ್ಷ್ಮಿನಾರಾಯಣಪುರ ನಿವಾಸಿ ಶಿವು ಅಲಿಯಾಸ್ ಪೊರ್ಕಿ(21), ಮಣಿಕಂಠ (20), ರಾಜಗೋಪಾಲನಗರ ಸಮೀಪದ ಕೆಂಪೇಗೌಡ ಲೇಔಟ್ ನ ಸಂತೋಷ್ ರಾವ್(20), ಶ್ರೀರಾಮಪುರ ನಾಗಪ್ಪ ಬ್ಲಾಕ್‍ನ ಲಿಖಿತ್ (20) ಬಂಧಿತರು. ಆರೋಪಿಗಳಿಂದ 1 ಬಟನ್ ಚಾಕು, ಅಶೀಷ್ ಪಾಲ್‍ನಿಂದ ಸುಲಿಗೆ ಮಾಡಿದ್ದ ಸಾವಿರ ರುಪಾಯಿ ಮೌಲ್ಯದ ಮೊಬೈಲಾ ಫೋನ್, ಎರಡು ಬೈಕ್ ಗಳು , ಎರಡು ಬೈಕ್‍ಗಳು ಹಾಗೂ ರು.1,500 ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.