ಚಿನ್ನಾಭರಣ ಕದಿಯುತ್ತಿದ್ದವರ ಸೆರೆ

ಕೆಎಸ್‍ಆರ್‍ಟಿಸಿ ಮತ್ತು ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಓಡಾಡುತ್ತ ಪ್ರಯಾಣಿಕರ ಬ್ಯಾಗ್‍ಗಳಲ್ಲಿ ಹಣ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಬೆಂಗಳೂರು: ಕೆಎಸ್‍ಆರ್‍ಟಿಸಿ ಮತ್ತು ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಓಡಾಡುತ್ತ ಪ್ರಯಾಣಿಕರ ಬ್ಯಾಗ್‍ಗಳಲ್ಲಿ ಹಣ ಹಾಗೂ ಆಭರಣ ಕಳವು ಮಾಡುತ್ತಿದ್ದ ದಂಪತಿ ಸೇರಿ ಮೂವರನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಳವಳ್ಳಿ ಪುಟಗನ ದೊಡ್ಡಿಯ ನಾಗರಾಜು (35), ಈತನ ಪತ್ನಿ ಪದ್ಮಾ (23) ಮತ್ತು ನಾಗಮಂಗಲ ಅಗ್ರಹಾರ ಗ್ರಾಮದ ಕೃಷ್ಣ (35) ಬಂಧಿತರು. ಇವರಿಂದ ರು.28 ಲಕ್ಷ ಮೌಲ್ಯದ 1 ಕೆ.ಜಿ.ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಂಧಿತರು ಮಂಡ್ಯ ಸಮೀಪ ಕಲ್ಲುಬಂಡೆ ಒಡೆಯುವ ಕೆಲಸ ಮಾಡುತ್ತಿದ್ದರು. ಆದರೆ, ಸುಲಭವಾಗಿ ಹಣಗಳಿಸುವ ಆಸೆಗೆ ಬಿದ್ದು ಕಳ್ಳತನಕ್ಕೆ ಇಳಿದಿದ್ದರು. ಆರೋಪಿಗಳು ಮೆಜೆಸ್ಟಿಕ್
ಗೆ ಬಂದು ಬಿಎಂಟಿಸಿ ಹಾಗೂ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರಕಂತೆ ಓಡಾಡುತ್ತಿದ್ದರು. 
ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಬಸ್ ಗಳನ್ನು ಹತ್ತುತ್ತಿದ್ದ ಆರೋಪಿಗಳು ಪ್ರತ್ಯೇಕವಾಗಿ ಕಳ್ಳತನಕ್ಕೆ ಇಳಿಯುತ್ತಿದ್ದರು. ಹೆಗಲಿಗೆ ಬ್ಯಾಗ್ ಹಾಕಿಕೊಂಡಿರುವ ವ್ಯಕ್ತಿಗಳನ್ನೇ ಗುರಿಯಾಗಿಸಿ ಪ್ರಯಾಣಿಕರಂತೆ ಅವರ ಪಕ್ಕದಲ್ಲಿ ಹೋಗಿ ನಿಲ್ಲಿತ್ತಿದ್ದರು. ಪ್ರಯಾಣಿಕರು ಬಸ್ ನಿಂದ ಇಳಿಯುವಾಗ ಅವರ್ನೇ ಹಿಂಬಾಲಿಸಿ ಬ್ಯಾಗ್ ನ ಜಿಪ್ ತೆಗೆದು, ಹಣ, ಆಭರಣ ಕಳವು ಮಾಡುತ್ತಿದ್ದರು ಎಂದು ಅಧಿಕಾರಿಗಳು ವಿವರಿಸಿದರು. 
ಬಸ್‍ಗಳಲ್ಲಿ ಮಾತ್ರವಲ್ಲದೆ ಹಗಲು ವೇಳೆ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ರಾತ್ರಿ ಬಾಗಿಲು ಮುರಿದು ಕಳವು ಮಾಡುದ್ದರು ಎನ್ನಲಾಗಿದೆ. ಇತ್ತೀಚೆಗೆ ಬಸ್‍ಗಳಲ್ಲಿ ಕಳವು ಪ್ರಕರಣಗಳು ಹೆಚ್ಚಾಗಿದ್ದ ಕಾರಣ ಖದೀಮರ ಮೇಲೆ ತೀವ್ರ ನಿಗಾ ವಹಿಸಲಾಗಿತ್ತು.
ಬಾತ್ಮೀದಾರರ ಮಾಹಿತಿ ಮೇರೆಗೆ ಅ.18ರಂದು ಮಫ್ತಿಯಲ್ಲಿ ತೆರಳಿದ ಸಿಬ್ಬಂದಿ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮೂವರನ್ನು ಬಂಧಿಸಿದ್ದಾರೆ. 
ನಾಗರಾಜು ಮತ್ತು ಕೃಷ್ಣನಿಗೆ ಜೂಜಾಡುವ ಅಭ್ಯಾಸವಿದ್ದು, ಕದ್ದ ಆಭರಣ ಗಿರವಿ ಇಟ್ಟು ಅದರಿಂದ ಬಂದ ಹಣವನ್ನು ಜೂಜಾಟದಲ್ಲೇ ಕಳೆಯುತ್ತಿದ್ದರು ಎನ್ನಲಾಗಿದೆ. 
ಆರೋಪಿಗಳ ಬಂಧನದಿಂದ ಉಪ್ಪಾರಪೇಟೆ ಠಾಣೆಯಲ್ಲಿ ವರದಿಯಾಗಿದ್ದ 8 ಕಳವು ಪ್ರಕರಣಗಳು, ಕಾಟನ್‍ಪೇಟೆ ಠಾಣೆಯಲ್ಲಿ 4 ಹಾಗೂ ಜ್ಞಾನಭಾರತಿ, ಮಡಿವಾಳ ಠಾಣೆಯಲ್ಲಿ ವರದಿಯಾಗಿದ್ದ ಕನ್ನ ಕಳವು ಪ್ರಕರಣ ಸೇರಿ ಒಟ್ಟು 14 ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com