

ಬೆಂಗಳೂರು: ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ತಮ್ಮ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಉತ್ತರ ಕನ್ನಡ ಜಿಲ್ಲೆಯ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ ಮತ್ತು ಸ್ತ್ರೀ ಶೋಷಣೆ ವಿರುದ್ಧದ ತಜ್ಞರ ಸಮಿತಿಗೆ ದೂರು ನೀಡಿದ್ದಾರೆ. ಜನವಾದಿ ಮಹಿಳಾ ಸಂಘಟನೆ ಕಾರ್ಯಕರ್ತರ ಜತೆ ವಿಧಾನಸೌಧಕ್ಕೆ ಆಗಮಿಸಿದ ಮಹಿಳೆ, ಸಮಿತಿ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಅವರಿಗೆ ದೂರು ನೀಡಿ ಪ್ರಕರಣದ ಬಗ್ಗೆ ವಿವರಣೆ ನೀಡಿದರು. ದೂರು ಸ್ವೀಕರಿಸಿದ ನಂತರ ಸುಮಾರು 1 ಗಂಟೆ ಕಾಲ ಮಹಿಳೆಯಿಂದ ಮಾಹಿತಿ ಪಡೆದ ಉಗ್ರಪ್ಪ, ನಗರ ಪೊಲೀಸ್ ಆಯುಕ್ತ ಮೇಘರಿಕ್ ಜತೆ ದೂರವಾಣಿ ಯಲ್ಲಿ ಮಾತುಕತೆ ನಡೆಸಿದರು. ಬಳಿಕ ಗಿರಿನಗರ ಠಾಣೆ ಇನ್‍ಸ್ಪೆಕ್ಟರ್, ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಕುಮಾರ್ ಅವರಿಗೆ ಕರೆ ಮಾಡಿ ಸಮಿತಿ ಮುಂದೆ ಹೇಳಿಕೆ ನೀಡುವಂತೆ ಸೂಚಿಸಿದ್ದಾರೆ.
ಅರಿಷಡ್ವರ್ಗ ಜಯಿಸಿದವರ ಮೇಲೆ ಆರೋಪ: ದೂರು ಸ್ವೀಕರಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ವಿ. ಎಸ್.ಉಗ್ರಪ್ಪ, ಅಗತ್ಯ ಬಿದ್ದರೆ ಸ್ವಾಮೀಜಿಗೆ ಸಮನ್ಸ್ ನೀಡಿ ವಿಚಾರಣೆ ನಡೆಸ ಲಾಗುವುದು. ಈ ವಿಚಾರದಲ್ಲಿ ನನ್ನ ಮೇಲಾಗಲಿ, ಸರ್ಕಾರದ ಮೇಲಾಗಲಿ ಒತ್ತಡವಿಲ್ಲ. ಸರ್ಕಾರಿ ಅಭಿಯೋಜಕರು ಎರಡನೇ ಆರೋಪಿಗೆ ನಿರೀ ಕ್ಷಣಾ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯದಲ್ಲಿ ಹೇಳಿಕೆ ನೀಡಿರುವ ವಿಚಾರ ಸಂಬಂಧ ಅಗತ್ಯ ಬಿದ್ದರೆ ಅವರಿಗೂ ನೋಟಿಸ್ ನೀಡುತ್ತೇವೆ. ಮಹಿಳೆಗೆ ಅಗತ್ಯ ಭದ್ರತೆ ಒದಗಿಸುತ್ತೇವೆ ಎಂದರು.
ಚಾತುರ್ಮಾಸ್ಯ ತಪ್ಪಿಸಲು ಅತ್ಯಾಚಾರ ಆರೋಪ ಎಂದ ವಕೀಲರು
ಮಹಿಳೆ ಮೇಲಿನ ಗುರಿಯಾಗಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ನಿರೀಕ್ಷಣಾ ಜಾಮೀನು ಕೋರಿ ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಚಾತುರ್ಮಾಸ್ಯ ಸಮೀಪಿಸುತ್ತಿದ್ದಂತೆ ಯುವತಿ ಗುರುಗಳ ಮೇಲೆ ದೂರು ದಾಖಲಿಸಿದ್ದಾರೆ, ಈ ಹಿಂದೆ ಪ್ರೇಮಲತಾ ಪ್ರಕರಣದಲ್ಲಿ ಸಾಕ್ಷಿ ಹೇಳಿದ ಯುವತಿ ಈ ಬಗ್ಗೆ ಎಲ್ಲಿಯೂ ಪ್ರಸ್ತಾಪಿಸಿಲ್ಲ.ಹಾಗಾಗಿ ಜಾಮೀನು ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸರ್ಕಾರಿ ವಕೀಲರು, ಆಕ್ಷೇಪಣಾ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ನ್ಯಾಯಾಲಯ ವಿಚಾರಣೆ ಯನ್ನು ಸೆ.3ಕ್ಕೆ ಮುಂದೂಡಿತು. ರಾಮಕಥಾ ಗಾಯಕಿ ನೀಡಿರುವ ಅತ್ಯಾಚಾರ ಪ್ರಕರಣದಲ್ಲಿ ರಾಘವೇಶ್ವರ ಶ್ರೀಗಳಿಗೆ ಜಾಮೀನು ದೊರೆತಿದ್ದು ಈ ಪ್ರಕರಣದಲ್ಲಿ ಬಂಧನದಿಂದ ತಪ್ಪಿಸಿಕೊಳ್ಳಲು ನ್ಯಾಯಾಲಯದ ಮೊರೆ ಹೋಗಿದ್ದಾರೆ.