

ಬೆಂಗಳೂರು: ಬಿಬಿಎಂಪಿ ಸಭಾಂಗಣದಲ್ಲಿ ಮೇಯರ್ ಚುನಾವಣೆಯ ಕಾವು ಹೆಚ್ಚಿದ್ದರೆ, ಹೊರಗೆ ಬಿಜೆಪಿ ಹಾಗೂ ಕಾಂಗ್ರೆಸ್‍ನ ಕಾರ್ಯಕರ್ತರು ಹಾಗೂ ಪಕ್ಷದ ಪ್ರತಿನಿಧಿಗಳು ಪ್ರತಿಭಟನೆಯಲ್ಲಿ ನಿರತರಾಗಿದ್ದರು. ಬಿಜೆಪಿಯಲ್ಲಿ ಕಾರ್ಪೊರೇಟರ್ ಅಲ್ಲದವರು ಮತದಾನ ಮಾಡಬಾರದು ಎಂದು ಕಾಂಗ್ರೆಸ್ ಪ್ರತಿಭಟಿಸಿದರೆ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಖಂಡಿಸಿ ಬಿಜೆಪಿ ಪ್ರತಿಭಟನೆ ನಡೆಸಿತು.
ಬಿಜೆಪಿಯ ಸಂಸದರು, ಶಾಸಕರು, ರಾಜ್ಯಸಭೆ ಮತ್ತು ವಿಧಾನಪರಿಷತ್ತಿ ನ ಸದಸ್ಯರು ಮೇಯರ್ ಆಯ್ಕೆ ಚುನಾವಣೆಯಲ್ಲಿ ಮತದಾನ ಮಾಡಬಾರದು ಎಂದು ವಿರೋಧಿಸಿ, ಕಾಂಗ್ರೆಸ್‍ನ `ಕಾನೂನು ಹಾಗೂ ಮಾನವ ಘಟಕ'ದ ಸದಸ್ಯರು ಮುಖಂಡ ಸಿ.ಎಂ. ಧನಂಜಯ ನೇತ್ರತ್ವದಲ್ಲಿ ಪ್ರತಿಭಟನೆ ನಡೆಸಿದರು.
ಬಿಜೆಪಿಯವರು ಹೇಳುವುದೊಂದು ಮಾಡುವುದೊಂದು. ಬಿಬಿಎಂಪಿ ಮೇಯರ್ ಚುನಾವಣೆಗೆ ಶಾಸಕ, ಸಂಸದರು, ವಿಧಾನಪರಿಷತ್ ಹಾಗೂ ರಾಜ್ಯಸಭಾ ಸದಸ್ಯರು ಮತದಾನ ಮಾಡುವಂತಿಲ್ಲ ಎಂದು ಬಿಜೆಪಿ ಯವರು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ. ಆದರೆ ಇಲ್ಲಿ ತಾವಾಗಿಯೇ ಬಂದು ಮತದಾನ ಮಾಡುತ್ತಿದ್ದಾರೆ. ಕೂಡಲೇ ಬಿಬಿಎಂಪಿ ಪೌರಸಭಾಂಗಣ ದಲ್ಲಿರುವ ಎಲ್ಲ ಬಿಜೆಪಿಯ ಶಾಸಕರು, ಸಂಸದರು ಹೊರಬರಬೇಕು. ಮತದಾನ ಮಾಡಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.
ಬಿಜೆಪಿ ವಿರೋಧ: ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ವಿರೋಧಿಸಿ ಪುರಭವನದ ಮುಂದೆ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ ನಡೆಸಿತು.
ಕಾಂಗ್ರೆಸ್ ವಾಮಮಾರ್ಗದಲ್ಲಿ ಹಾಗೂ ಹಿಂಬಾಗಿಲ ಮೂಲಕ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಅಧಿಕಾರ ಪಡೆಯುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಎಸಗಿರುವ ಅನ್ಯಾಯ ಎಂದು ಸದಸ್ಯರು ಪ್ರತಿಭಟಿಸಿದರು. ಪ್ರತಿಭಟನೆ ತೀವ್ರವಾಗಿದ್ದರಿಂದ ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಮುನಿರಾಜ್ ಗೌಡ, ಚಿತ್ರನಟ ಬುಲೆಟ್ ಪ್ರಕಾಶ್ ಸೇರಿದಂತೆ ಹಲವು ಕಾರ್ಯಕರ್ತರನ್ನು ಬಂಧಿಸಲಾಯಿತು. ಪುರಭವನದ ಮುಂಭಾಗ ಎರಡು ಬಿಎಂಟಿಸಿ ಬಸ್ಸುಗಳಲ್ಲಿ ಕಾರ್ಯಕರ್ತರನ್ನು ಇರಿಸಿ ಕರೆದೊಯ್ಯಲಾಯಿತು.