ಅಧಿಕಾರಿಗಳಿಗೆ ಬೆವರಿಳಿಸಿದ ಸಚಿವೆ

ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸುವ ಮಹತ್ವದ ಜವಾಬ್ದಾರಿ ಹೊಂದಿರುವ ಪುರಾತತ್ವ ಇಲಾಖೆ ಸರಿಯಾಗಿ ಕೆಲಸ ಮಾಡುತ್ತಿಲ್ಲ...
ಉಮಾಶ್ರೀ
ಉಮಾಶ್ರೀ
Updated on: 

ಬೆಂಗಳೂರು: ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸುವ ಮಹತ್ವದ ಜವಾಬ್ದಾರಿ ಹೊಂದಿರುವ ಪುರಾತತ್ವ ಇಲಾಖೆ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸಚಿವೆ ಉಮಾಶ್ರೀ ಬೆವರಿಳಿಸಿದ ಘಟನೆ ಬುಧವಾರ ನಡೆಯಿತು.

ಬೆಂಗಳೂರು ಸರ್ಕಾರಿ ವಸ್ತು ಸಂಗ್ರಹಾಲಯದ 150ನೇ ವರ್ಷಾಚರಣೆ ಸಂದರ್ಭದಲ್ಲಿ ಪುರಾತತ್ವ, ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಏರ್ಪಡಿಸಿದ್ದ ವಿಚಾರ ಸಂಕಿರಣ, ವಸ್ತು ಪ್ರದರ್ಶನ ಹಾಗೂ ನೂತನವಾಗಿ ಆರಂಭಿಸಿರುವ ತೆರೆದ ಗ್ಯಾಲರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವೆ ಉಮಾಶ್ರೀ, ಪ್ರತಿಯೊಬ್ಬ ಮನುಷ್ಯನಿಗೂ ಒಂದು ಇತಿಹಾಸವಿದೆ. ಊರು, ರಾಜ್ಯ, ಕೇರಿಗಳಿಗೂ ತನ್ನದೇ ಆದ ಇತಿಹಾಸವಿರುತ್ತದೆ.

ವೈಜ್ಞಾನಿಕ ಯುಗದಲ್ಲಿ ತಾಂತ್ರಿಕ, ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಪರಂಪರೆ, ಇತಿಹಾಸ ಕಣ್ಮರೆ ಆಗುತ್ತಿದೆ. ಇದನ್ನು ಪುನರುಜ್ಜೀವನಗೊಳಿಸುವುದು ಇಲಾಖೆ ಜವಾಬ್ದಾರಿ. ಬಜೆಟ್ ಕಡಿಮೆಯಿದ್ದರೂ ಜವಾಬ್ದಾರಿ ದೊಡ್ಡದಿದೆ. ಅಧಿಕಾರಿಗಳಿಗೆ ಕೆಲಸ ಮಾಡುವ ಮನಸ್ಸು ಇರಬೇಕೆಂದು ಕಟುವಾಗಿ ಹೇಳಿದರು.

ಅಧಿಕಾರಿಗಳ ಬೇಜವಾಬ್ದಾರಿತನ: ಇದಕ್ಕೂ ಮೊದಲು ತೆರೆದ ಶಿಲ್ಪಿ ಗ್ಯಾಲರಿ ಉದ್ಘಾಟನೆ ವೇಳೆ ಪುರಾತನ ಪಳೆಯುಳಿಕೆ ಶಿಲ್ಪಗಳ ಕೆಳಗೆ ಅದರ ಇತಿಹಾಸ ನಮೂದಿಸದ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕಾರ್ಯಕ್ರಮದ ಆರಂಭ ಹಂತದಲ್ಲಿ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸುವಾಗ ಇಲಾಖೆ ನಿರ್ದೇಶಕ ತಳವಾರ್ ಅವರು ಅತಿಥಿಗಳ ಹೆಸರು ತಿಳಿದುಕೊಳ್ಳದೆ ತಡಬಡಾಯಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವೆ ಉಮಾಶ್ರೀ, ಅತಿಥಿಗಳ ಹೆಸರು ನಿಮಗೆ ತಿಳಿದರೆ ಸಾಲದು, ಇಲ್ಲಿರುವ ಎಲ್ಲರಿಗೂ ತಿಳಿಯಬೇಕು. ಸರಿಯಾಗಿ ಮಾಹಿತಿ ನೀಡಿ ಎಂದು ತಾಕೀತು ಮಾಡಿದರು.

ಸಿಟ್ಟಿಗೆದ್ದ ಸಚಿವೆಯನ್ನು ಸಮಾಧಾನಪಡಿಸಲು ವೇದಿಕೆ ಮೇಲಿದ್ದಾಗಲೆ ಕೆಲವು ಅಧಿಕಾರಿಗಳು ಕಿವಿಯಲ್ಲಿ ಪಿಸುಗುಡಲು ಯತ್ನಿಸಿದಾಗ ಉಮಾಶ್ರೀ ಕಿವಿಗೊಡದೆ, ಕಚೇರಿಗೆ ಬಂದು ಮಾತನಾಡಿ ಎಂದು ಕೆಂಗಣ್ಣು ಬೀರಿದರು. ಇಲಾಖೆ ಪ್ರಧಾನ ಕಾರ್ಯದರ್ಶಿ ನಂದಕುಮಾರ್, ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿ ಸತ್ಯಭಾಮ, ಅರುಣ್‍ರಾಜ್, ಸಹಾಯಕ ನಿರ್ದೇಶಕಿ ಮಂಜುಳಾ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com