ಐಐಟಿ ತಂದ ದಳ್ಳುರಿ ಎರಡು ಜಿಲ್ಲೆ ಬಂದ್

ಐಐಟಿಯನ್ನು ಧಾರವಾಡದಲ್ಲಿ ಸ್ಥಾಪಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದ್ದರಿಂದ ಎರಡು ಜಿಲ್ಲೆಗಳ ನುಡುವೆ ಆರಂಭವಾಗಿದ್ದ ಕಿತ್ತಾಟ ತಾರಕಕ್ಕೇರಿದೆ...
ಹುಬ್ಬಳ್ಳಿ ಮತ್ತು ರಾಯಚೂರಿನಲ್ಲಿ ಪ್ರತಿಭಟನೆ (ಸಂಗ್ರಹ ಚಿತ್ರ)
ಹುಬ್ಬಳ್ಳಿ ಮತ್ತು ರಾಯಚೂರಿನಲ್ಲಿ ಪ್ರತಿಭಟನೆ (ಸಂಗ್ರಹ ಚಿತ್ರ)
Updated on: 

ರಾಯಚೂರು: ಐಐಟಿಯನ್ನು ಧಾರವಾಡದಲ್ಲಿ ಸ್ಥಾಪಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದ್ದರಿಂದ ಎರಡು ಜಿಲ್ಲೆಗಳ ನುಡುವೆ ಆರಂಭವಾಗಿದ್ದ ಕಿತ್ತಾಟ ತಾರಕಕ್ಕೇರಿದೆ.

ಹೈದರಾಬಾದ್ ಕರ್ನಾಟಕ ಭಾಗಕ್ಕೆ ಐಐಟಿ ನೀಡದೆ ದ್ರೋಹ ಬಗೆಯಲಾಗಿದೆ ಎಂದು ರಾಯಚೂರು ಬಂದ್ ಮಾಡಿದರೆ, ಧಾರವಾಡಕ್ಕೆ ಐಐಟಿ ಮಂಜೂರಾಗಿದ್ದರೂ ಮತ್ತೆ ನಿರ್ಧಾರವನ್ನು ಪುನರ್ ಪರಿಶೀಲನೆ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರಕ್ಕೆ ಬರೆದಿರುವ ಪತ್ರವನ್ನು ಹಿಂಪಡೆಯಬೇಕೆಂದು ಹುಬ್ಬಳ್ಳಿಧಾರವಾಡದಲ್ಲಿ ಬಂದ್ ಮಾಡಲಾಗಿದೆ.

ಐಐಟಿ ಸ್ಥಾಪಿಸುವಂತೆ ಆಗ್ರಹಿಸಿ ರಾಯಚೂರಿನಲ್ಲಿ ನಡೆಯುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದೆ. ಬುಧವಾರ ರಾಯಚೂರಲ್ಲಿ ಪ್ರತಿಭಟನೆಯಾಗಿದೆ. ಮಾನವಿ ತಾಲೂಕಿನಲ್ಲಿ ಬಂದ್ ಮಾಡಲಾಗಿದ್ದು,  ನಾಲ್ವರು ಯುವಕರು ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. 2 ಬಸ್‍ಗಳಿಗೂ ಕಲ್ಲು ತೂರಲಾಗಿದೆ. ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರಿಗೆ  ರಕ್ತದಲ್ಲಿ ಪತ್ರ ಬರೆದಿದ್ದಾರೆ. ಆಟೋ ರಿಕ್ಷಾ ಚಾಲಕರು ರ್ಯಾಲಿ ನಡೆಸಿದ್ದಾರೆ.

ಹುಬ್ಬಳ್ಳಿ ಬಂದ್
ಕೈಗೆ ಬಂದ ತುತ್ತು ಬಾಯಿಗೆ ಬಾರದೆ ಹೋಗಿಬಿಡಬಹುದೇ ಎಂಬ ಆತಂಕ ಹುಬ್ಬಳ್ಳಿಧಾರವಾಡದ ಭಾಗದ್ದು. ಹೀಗಾಗಿ ಅವಳಿ ನಗರದಲ್ಲೂ ಬುಧವಾರ ಬಂದ್ ಆಚರಣೆಯಾಗಿದ್ದು, ಐಐಟಿ ನಿರ್ಧಾರ  ಪರಿಶೀಲಿಸುವಂತೆ ಮನವಿ ಮಾಡಿದ್ದ ಸಿಎಂ ಸಿದ್ದರಾಮಯ್ಯ ಅವರ ನಡೆಯನ್ನು ಖಂಡಿಸಲಾಗಿದೆ.

ಅವರ ಪ್ರತಿಕೃತಿ ದಹಿಸಲಾಗಿದೆ. ಬಸ್ ಗಳಿಗೆ ಕಲ್ಲು ತೂರಲಾಗಿದೆ. ಟೈರ್‍ಗಳಿಗೆ ಬೆಂಕಿ  ಹಚ್ಚಲಾಗಿದ್ದು, ಚಲಿಸುತ್ತಿದ್ದ ಕಾರೊಂದು ಪ್ರತಿಭಟನಾಕಾರರ ಆಕ್ರೋಶಕ್ಕೆ ತುತ್ತಾಗಿ ನಜ್ಜುಗುಜ್ಜಾಗಿದೆ. ಸೈಕಲ್ ಅಂಗಡಿಯೊಂದರ ಕಿಟಕಿಗಾಜುಗಳನ್ನು ಪುಡಿ ಮಾಡಲಾಗಿದೆ. ಬಂದ್ ಹಿನ್ನೆಲೆಯಲ್ಲಿ  ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

ಧಾರವಾಡದಲ್ಲಿ ಐಐಟಿ ನಿಶ್ಚಿತ
ಬೆಂಗಳೂರು:
``ಧಾರವಾಡದಲ್ಲಿ ಐಐಟಿ ಸ್ಥಾಪನೆಯಾಗುವುದು ನಿಶ್ಚಿತ. ಸ್ಥಳ ಬದಲಾವಣೆ ಸಾಧ್ಯತೆ ಕಡಿಮೆ,'' ಹೀಗೆಂದು ಉನ್ನತ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳುಹೇಳಿದ್ದಾರೆ.  ನಿಯಮದಂತೆ ಕೇಂದ್ರದ ತಂಡ ರಾಜ್ಯದ ಮೂರು ಕಡೆಗಳಲ್ಲಿ ಸ್ಥಳ ಪರಿಶೀಲಿಸಿ, ಸಾಧಕ ಬಾಧಕಗಳನ್ನು ಅವಲೋಕಿಸಿ ತೀರ್ಮಾನ ಕೈಗೊಂಡಿದೆ. ಸ್ಥಳ ಆಯ್ಕೆ ವಿಚಾರದಲ್ಲಿ ಯಾವುದೇ  ದಳಗಳೂ ಇಲ್ಲ.

ಹೋರಾಟಗಳಿಂದ ಸಮಸ್ಯೆಯಾಗುತ್ತದೆ ವಿನಃ ಸ್ಥಳ ಬದಲಾವಣೆ ಸಾದ್ಯವಿಲ್ಲದ ಮಾತು. ಕೇಂದ್ರ ಸರ್ಕಾರ ಈಗಾಗಲೇಸ್ಥಳ ನಿಗದಿ ಮಾಡಿದೆ. ಹೀಗಾಗಿ ಬದಲಾವಣೆಗೆ ಪಟ್ಟು ಹಿಡಿಯುವುದೂ ಸರಿಯಲ್ಲ. ಹೋರಾಟ ತೀವ್ರಗೊಂಡರೆ ಕರ್ನಾಟಕಕ್ಕೇ ನಷ್ಟ ವಾಗಬಹುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com