

ಫೆಬ್ರವರಿ: ಎಲ್ಲಾ ಇಲಾಖೆಗಳಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದ್ದು ಸರ್ಕಾರ ಕೈ ಕಟ್ಟಿ ಕುಳಿತುಕೊಂಡಿದೆ ಎಂದು ಆಮ್ ಆದ್ಮಿ ಪಾರ್ಟಿ ಗಂಭೀರ ಆರೋಪ ಮಾಡಿದೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಮ್ ಆದ್ಮಿ ಪಾರ್ಟಿ ರಾಜ್ಯ ಸಹ-ಸಂಚಾಲಕರ ಶಿವಕುಮಾರ್ ಚೆಂಗಲರಾಯ, ದೇಶದಲ್ಲೆಡೆ ಸಶಕ್ತ ಲೋಕಪಾಲ ಮಸೂದೆ ಜಾರಿಯಾಗಬೇಕು ಎಂದು ಒತ್ತಾಯ ಮಾಡಿದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಡಳಿತ ಸಂಪೂರ್ಣ ಹದಗೆಟ್ಟಿದ್ದು ಜನರು ಪರಿತಪಿಸುವಂತಾಗಿದೆ. ಲೋಕಾಯುಕ್ತವಿಲ್ಲದ ಸಂಧರ್ಭದಲ್ಲಿ ಜನಸಾಮಾನ್ಯರಿಗೆ ಸಹಾಯವಾಗುವ ನಿಟ್ಟಿನಲ್ಲಿ ಲಂಚಮುಕ್ತ ಅಭಿಯಾನವನ್ನು ಆರಂಭಿಸಿತ್ತು. ಈವರೆಗೂ ಸಾವಿರಾರು ದೂರು ಹಾಗು ಕರೆಗಳು ನಮ್ಮ ಸಹಾಯವಾಣಿಗೆ ಬರುತ್ತಿದ್ದು ಆಮ್ ಆದ್ಮಿ ಪಾರ್ಟಿ-ಕರ್ನಾಟಕದ ಕಾರ್ಯಕರ್ತರು ಅವುಗಳಲ್ಲಿ ಕೆಲವನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ನೇತ್ರತ್ವದ ರಾಜ್ಯ ಸರ್ಕಾರ ಸರ್ಕಾರಿ ಹಾಗೂ ಬಿಬಿಎಂಪಿ ಕಚೇರಿಗಳಲ್ಲಿ ಲಂಚ ಮುಕ್ತ ವಾತಾವರಣ ನಿರ್ಮಿಸಲು ಬೇಕಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳನ್ನು ಹೋರಾಟವನ್ನು ಉಗ್ರಗೊಳಿಸಲಾಗುವುದು ಎಂದು ಶಿವಕುಮಾರ್ ಎಚ್ಚರಿಸಿದ್ದಾರೆ.