ಬೆಳಗಾವಿ: `ಹಿಂದುಳಿದ ಜಾತಿಗೆ ಸೇರಿದವನು, ಮಾಂಸ ತಿನ್ನುವವನು' ಎಂದು ಹೀಯಾಳಿಸಿ ಯೋಧರೊಬ್ಬರ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬೈಲಹೊಂಗಲ ತಾಲೂಕಿನ ದಾಸ್ತಿಕೊಪ್ಪದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಸದ್ಯ ಕೋಮಾದಲ್ಲಿರುವ ಯೋಧನಿಗೆ ಬೆಳಗಾವಿಯ ಕೆಎಲ್‍ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಂದಿಗವಾಡ ಗ್ರಾಮದ ಯೋಧ ದೇಮಪ್ಪ ತಳವಾರ(31) ಅಸ್ಸಾಂನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ರಜೆ ಮೇಲೆ ಅವರು ಇತ್ತೀಚೆಗಷ್ಟೇ ಹುಟ್ಟೂರಿಗೆ ಆಗಮಿಸಿದ್ದರು. ಡಿ.28 ರಂದು ರಾತ್ರಿ 11ಕ್ಕೆ ತಮ್ಮ ಗಬಿರ್sಣಿ ಪತ್ನಿಯನ್ನು ನೋಡಲು ಗಂದಿಗವಾಡದಿಂದ ದಾಸ್ತಿ ಕೊಪ್ಪ ಗ್ರಾಮಕ್ಕೆ ಬೈಕ್‍ನಲ್ಲಿ ಹೋಗುತ್ತಿದ್ದರು. ಮಾರ್ಗ ಮಧ್ಯೆ ದಾಸ್ತಿಕೊಪ್ಪ ಗ್ರಾಮದ ರುದ್ರಗೌಡ ಪಾಟೀಲ, ರಾಜು ತಿಗಡಿ ಮತ್ತು ದೇವರಸೀಗಿಹಳ್ಳಿಯ ಜಗದೀಶ ಗುಂಡಗಾವಿ ಸೇರಿ ಜಗಳ ತೆಗೆದಿದ್ದಾರೆ.
ಈ ವೇಳೆ ಮಾತಿಗೆ ಮಾತು ಬೆಳೆದು `ನೀನು ಹೀನ ಜಾತಿಯವ, ಮಾಂಸ ತಿನ್ನುವವ' ಎಂದು ನಿಂದಿಸಿ, ಕಬ್ಬಿನ ಜಲ್ಲೆಯಿಂದ ಥಳಿಸಿದ್ದಾರೆ. ಈ ವೇಳೆ ತಲೆಗೆ ಬಲವಾದ ಏಟು ಬಿದ್ದರೂ ದೇಮಪ್ಪ ದಾಸ್ತಿಕೊಪ್ಪದ ಬಸ್ ನಿಲ್ದಾಣದವರೆಗೆ ಬೈಕ್ ಚಲಾಯಿಸಿಕೊಂಡು ಬಂದಿದ್ದಾರೆ.
ಅಲ್ಲಿವರೆಗೂ ಬೆನ್ನುಹತ್ತಿದ ಆರೋಪಿಗಳು `ನಿನಗೆ ನಮ್ಮೂರಿನಲ್ಲಿ ಪ್ರವೇಶವಿಲ್ಲ' ಎಂದು ಹೇಳಿ ಮತ್ತೆ ಥಳಿಸಿದ್ದಾರೆ ಎಂದು ಸೈನಿಕ ದೇಮಪ್ಪನ ಅಣ್ಣ ನಾಗೇಶ ತಳವಾರ ಆರೋಪಿಸಿದ್ದಾರೆ.