

ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರ ಘೋಷಿಸಿರುವ ನೂತನ ಪಿಂಚಣಿ ಯೋಜನೆಯು ನಿರ್ದಿಷ್ಟ ಕಾನೂನುಗಳಿಂದ ರಚನೆಯಾಗಿಲ್ಲ ಹಾಗೂ ಈ ಯೋಜನೆಯಲ್ಲಿ ನೌಕರರ ಹಣಕ್ಕೆ ಯಾವುದೇ ಭದ್ರತೆಯಿಲ್ಲ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಎನ್ ಪಿಎಸ್ ನೌಕರರ ಸಂಘ ಆರೋಪಿಸಿದೆ.
ಕೇಂದ್ರ ಸರ್ಕಾರ ಜ. 1. 2004ರ ನಂತರ ಹಾಗೂ ರಾಜ್ಯ ಸರ್ಕಾರ ಜ.1. 2006 ರ ನಂತರ ಸರ್ಕಾರಿ ಸೇವೆಗೆ ನೇಮಕಗೊಳ್ಳುವ ನೌಕರರಿಗೆ ನಿಶ್ಚಿತ ಪಿಂಚಣಿ ರದ್ದುಪಡಿಸಿ ನೂತನ ಪಿಂಚಣಿ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿಯಲ್ಲಿ ಪಿಂಚಣಿ ನೀಡಲು ನೌಕರರ ವೇತನದಿಂದ ಶೇ.10 ಹಾಗೂ ಅಷ್ಟೇ ಪ್ರಮಾಣದ ಮೊತ್ತವನ್ನು ಸರ್ಕಾರ ವಂತಿಗೆ ರೂಪದಲ್ಲಿ ನೀಡುತ್ತದೆ. ಶೇಖರಣೆಯಾದ ಮೊತ್ತವನ್ನು ವಿವಿಧ ಖಾಸಗಿ ಹಣಕಾಸಿನ ಸಂಸ್ಥೆಗಳ ಮೂಲಕ ಷೇರು ಪೇಟೆಯಲ್ಲಿ ತೊಡಗಿಸಿ 30-35 ವರ್ಷಗಳ ನಂತರ ಅದರಿಂದ ಬಂದ ಲಾಭವನ್ನು ನೌಕರರಿಗೆ ಪಿಂಚಣಿ ನೀಡುವುದು ಯೋಜನೆಯ ಉದ್ದೇಶವಾಗಿದೆ. ಯೋಜನೆಯ ರಚನೆಗೆ ಯಾವುದೇಕಾನೂನುಗಳನ್ನು ಮಾಡಿಲ್ಲ ಮತ್ತು ಸರ್ಕಾರ ತೊಡಗಿಸಿದ ಹಣಕ್ಕೆ ಯಾವುದೇ ಭದ್ರತೆಯನ್ನು ಖಾಸಗಿ ಸಂಸ್ಥೆಗಳು ನೀಡಿಲ್ಲ.
ಈಗಾಗಲೇ ಫ್ರಾನ್ಸ್, ಗ್ರೀಸ್, ಡೆನ್ಮಾರ್ಕ್, ಅಮೆರಿಕ ಮತ್ತು ಬ್ರಿಟನ್‍ನಂತಹ ದೇಶಗಳಲ್ಲಿ ನೌಕರರ ಹಾಗೂ ಸಾರ್ವಜನಿಕರ ಹಣವನ್ನು ಷೇರುಗಳಲ್ಲಿ ಹೂಡಿಕೆ ಮಾಡಿದ ಉದಾಹರಣೆಗಳಿದ್ದು, ಜಾಗತಿಕ ಮಟ್ಟದಲ್ಲಿ ಆರ್ಥಿಕ ಕುಸಿತ ಉಂಟಾದಾಗ ಹಣಕಾಸು ಸಂಸ್ಥೆಗಳು ನಷ್ಟ ಅನುಭವಿಸಿ, ದಿವಾಳಿಯೆದ್ದಿವೆ. ಇದರಿಂದ ನೌಕರರ ಪಿಂಚಣಿ, ವಿಮೆ ಹಾಗೂ ಉಳಿತಾಯ ಹಣವಿಲ್ಲದೆ ಬೀದಿ ಪಾಲಾಗಿದ್ದಾರೆ. ಈಗಿದ್ದರೂ ನೌಕರರನ್ನು ಅನಿಶ್ಚಿತ ಸ್ಥಿತಿಗೆ ಸರ್ಕಾರಿ ನೌಕರರನ್ನು ನೂಕುವ ಕೆಲಸಕ್ಕೆ ಸರ್ಕಾರಗಳು ಮುಂದಾಗಿವೆ ಎಂದು ಸಂಘ ದೂರಿದೆ.