

ಬೆಂಗಳೂರು: ರಕ್ಷಕರೆ ಭಕ್ಷಕರಾದರೆ...! ಹೌದು, ಅಂಥದ್ದೊಂದು ಘಟನೆ ಬಿಡಿಎ ವ್ಯಾಪ್ತಿಯಲ್ಲಿ ನಡೆದಿದೆ. ನಾಡಪ್ರಭು ಕೆಂಪೇಗೌಡ ಲೇ ಔಟ್ ನಿರ್ಮಿಸಲು ಮೀಸಲಿಟ್ಟಿರುವ ಸರ್ಕಾರಿ ಜಮೀನಿನಲ್ಲಿ 5 ಎಕರೆ ಭೂಮಿಯನ್ನು ಕಂದಾಯ ಅಧಿಕಾರಿಗಳೇ ಕಾನೂನು ಬಾಹಿರವಾಗಿ ಖಾಸಗಿ ವ್ಯಕ್ತಿಗೆ ಪರಭಾರೆ ಮಾಡಿದ್ದಾರೆ. ಈ ಬಗ್ಗೆ ಕಾಚರಕನಹಳ್ಳಿಯ ಪಿ.ಮಂಜೇಶ್ ಎಂಬುವರು ದಾಖಲೆಗಳ ಸಮೇತ ಲೋಕಾಯುಕ್ತಕ್ಕೆ ಗುರುವಾರ ದೂರು ಸಲ್ಲಿಸಿದ್ದಾರೆ.
ಜಮೀನು ಕಬಳಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿ ಪರಭಾರೆ ಮಾಡಿರುವ ಬೆಂಗಳೂರು ಉತ್ತರ ತಹಸೀಲ್ದಾರ್ ಶಿವಪ್ಪ ಲಂಬಾಣಿ, ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಲೋಕಾನಾಥ್, ನವೀನ್, ಕಂದಾಯ ಅಧಿಕಾರಿ ರಮೇಶ್, ಗ್ರಾಮಲೆಕ್ಕಿಗ ರಾಜಶೇಖರ್ ಹಾಗೂ ಖಾಸಗಿ ವ್ಯಕ್ತಿ ಎಸ್.ಶಾಂತರಾಜು ವಿರುದ್ಧ ಬಿಎಂಟಿಎಫ್ ಹಾಗೂ ಲೋಕಾಯುಕ್ತ ಸಂಸ್ಥೆಗೆ ಪಿ.ಮಂಜೇಶ್ ದೂರು ಸಲ್ಲಿಸಿದ್ದಾರೆ.
ಬೆಂಗಳೂರಿನ ಉತ್ತರ ತಾಲೂಕಿನ ಯಶವಂತರಪುರ ಹೋಬಳಿಯ ಕನ್ನಲ್ಲಿ ಗ್ರಾಮದ ಸರ್ವೆ ನಂ.94ರಲ್ಲಿರುವ 25.31 ಎಕರೆ ಗೋಮಾಳ ಭೂಮಿಯಲ್ಲಿ ಬಿಡಿಎ ಪರಿಷ್ಕೃತ ಮಾಸ್ಟರ್ ಪ್ಲಾನ್ 2015ರ ಪ್ರಕಾರ ನಾಡಪ್ರಭು ಕೆಂಪೇಗೌಡ ಲೇಔಟ್ ನಿರ್ಮಿಸಲು ಜಮೀನು ಮೀಸಲಿಟ್ಟಿತ್ತು. ಈ ಭೂಮಿಯಲ್ಲಿ 5 ಎಕರೆ ಜಾಗವನ್ನು ಕನ್ನಲ್ಲಿ ಗ್ರಾಮದ ಕೊಡಿಗೇಹಳ್ಳಿ ನಿವಾಸಿ ಎಸ್.ಶಾಂತಕುಮಾರ್ ಒತ್ತುವರಿ ಮಾಡಿಕೊಂಡಿದ್ದು, ಪರಭಾರೆ ಮಾಡಲು ಅಧಿಕಾರಿಗಳೇ ಸಹಾಯ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಕಿಸಿದ್ದಾರೆ.
ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರವಾನಗಿ ಪಡೆಯದ ಶಾಂತಕುಮಾರ್, ಇಲ್ಲಿ 15 ಗೋದಾಮುಗಳನ್ನು ಅಕ್ರಮವಾಗಿ ನಿರ್ಮಿಸಿದ್ದಾರೆ. ಈ ಗೋದಾಮುಗಳನ್ನು ಬೇರೆ ಕಂಪನಿಗಳಿಗೆ ಬಾಡಿಗೆಗೆ ನೀಡಿ, ಸರ್ಕಾರಕ್ಕೆ ಮೋಸ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.