ಬೆಂಗಳೂರು ಗ್ರಾಮಾಂತರ

ಆಡಳಿತ ಮಂಡಳಿ ಚುನಾವಣೆ

Published On :

ರಾಮನಗರ: ಪ್ರಾಥಮಿಕ ಸಹಕಾರ ಸಂಘಗಳ 2013-18ನೇ ಅವಧಿಯ ಆಡಳಿತ ಮಂಡಳಿಗಳ ಚುನಾವಣೆಯನ್ನು ಲೋಕಸಭೆ ಮರು ಚುನಾವಣೆ ಹಿನ್ನೆಲೆಯಲ್ಲಿ ಮರು ನಿಗದಿಪಡಿಸಿ ಸಹಕಾರ ಸಂಘಗಳ ಉಪ ನಿಬಂಧಕ ಕೆ.ಎನ್.ನಂಜುಂಡೇಗೌಡ ಆದೇಶ ಹೊರಡಿಸಿದ್ದಾರೆ.  ಅದರಂತೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಸೆ.1, ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸೆ.7, ಇತರೆ ಸಹಕಾರ ಸಂಘಗಳಿಗೆ ಸೆ.15ಕ್ಕೆ ಚುನಾವಣೆ ಮುಗಿಯಬೇಕು ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.
 
ಗವಿರಂಗಯ್ಯ  ಆಯ್ಕೆ
ಕ.ಪ್ರ. ವಾರ್ತೆ, ಆನೇಕಲ್, ಆ.1
ಆನೇಕಲ್ ತಾಲೂಕು ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿಗೆ ಗುರುವಾರ ನಡೆದ ಚುನಾವಣೆಯಲ್ಲಿ  ಶಿಕ್ಷಣ ಇಲಾಖೆಯ ಕೆ.ವಿ. ಗವಿರಂಗಯ್ಯ 23 ಮತಗಳನ್ನು ಪಡೆಯುವ ಮೂಲಕ  ಜಯ ಗಳಿಸಿದರು.  ಪ್ರತಿಸ್ಪರ್ಧಿ ಕೃಷಿ ಇಲಾಖೆಯ ಕುಮಾರ್ ಒಟ್ಟಾರೆ 30 ಮತಗಳ ಪೈಕಿ ಕೇವಲ 7 ಮತಗಳನ್ನು ಪಡೆದರು. ಖಜಾಂಚಿ ಸ್ಥಾನಕ್ಕೆ ನೇರ ಸ್ಪರ್ಧೆ ಇದ್ದು ರೇಷ್ಮೆಯ ಇಲಾಖೆಯ ರಾಜೇಂದ್ರ 21 ಮತಗಳನ್ನು ಪಡೆದು ವಿಜಯಶಾಲಿಯಾದರು. ಅಬಕಾರಿ ಇಲಾಖೆಯ ವೀರಪ್ಪರವರು 9 ಮತಗಳನ್ನು ಪಡೆದು ಪರಾಜಿತರಾದರು. ರಾಜ್ಯ ಪರಿಷತ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಆರೋಗ್ಯ ಇಲಾಖೆಯ ಸತೀಶ್ ರೆಡ್ಡಿ 20 ಮತಗಳನ್ನು ಪಡೆದು ಜಯಗಳಿಸಿದರೇ ಪ್ರತಿಸ್ಫರ್ಧಿ ಪಿಎಂ. ಮುನಿರೆಡ್ಡಿ 10 ಮತಗಳನ್ನು ಪಡೆದು ಸೋಲನ್ನಪ್ಪಿದರು ಎಂದು ಚುನಾವಣಾಧಿಕಾರಿ ರವಿಚಂದ್ರ ತಿಳಿಸಿದರು. ನೂತನ ಅಧ್ಯಕ್ಷ ಗವಿರಂಗಯ್ಯ ತಮ್ಮ ಗೆಲವಿಗೆ ಶ್ರಮಿಸಿದ ಎಲ್ಲ ಹಿತೈಷಿಗಳಿಗೆ ಅಭಿನಂದನೆ ತಿಳಿಸಿ ಮಾತನಾಡಿ ತಾಲೂಕು ಸರ್ಕಾರಿ ನೌಕರರಿಗೆ ಸಂಬಂಧಿಸಿದ ಪ್ರಯಾಣ ಭತ್ಯೆ, ಡಿಎ ಸೇರಿದಂತೆ ಅನೇಕ ಬೇಡಿಕೆಗಳಿಗೆ ನಿರಂತರ ಹೋರಾಟ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಶಾಶ್ವತ ಪರಿಕಹಾರಕ್ಕೆ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಬೆಂಗಳೂರು ನಗರ ಜಿಲ್ಲೆಯ ಎಲ್ಲ ನೌಕರರಿಗೂ ಸಮಾನ ವೇತನ ಮತ್ತು ಭತ್ಯೆಗಾಗಿ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಬೇಡಿಕೆ ಇಡಲಾಗುವುದು ಎಂದರು.  ನೂತನ ಖಜಾಂಚಿ ರಾಜೇಂದ್ರ ಹಾಗೂ ರಾಜ್ಯ ಪರಿಷತ್ ಸದಸ್ಯ ಸತೀಶ್ ರೆಡ್ಡಿ ಕೃತಜ್ಞತೆ ಸಲ್ಲಿಸಿ ನೂತನ ಕಾರ್ಯಕಾರಿ ಸಮಿತಿ ವಿಶಿಷ್ಟ ರೀತಿಯಲ್ಲಿ ಎಲ್ಲ ನೌಕರರ ಸಮಸ್ಯೆಗಳಿಗೆ ಸ್ಪಂದಿಸುತ್ತದೆ ಎಂದರು.

ವ್ಯಕ್ತಿಗೆ ಇರಿದು ನಗದು ಮೊಬೈಲ್ ಲೂಟಿ
ಬೆಂಗಳೂರು:  ರಂಜಾನ್ ಹಬ್ಬಕ್ಕೆ ಸ್ನೇಹಿತನೊಂದಿಗೆ ಬಟ್ಟೆ ಖರೀದಿಗೆ ತೆರಳಿದ್ದ ವ್ಯಕ್ತಿಗೆ ಚಾಕುವಿನಿಂದ ಇರಿದ ದುಷ್ಕರ್ಮಿಗಳು 15 ಸಾವಿರ ನಗದು ಹಾಗೂ ಅವರ ಬಳಿ ಇದ್ದ ಮೊಬೈಲ್ ಫೋನ್‌ಗಳನ್ನು ದೋಚಿರುವ ಘಟನೆ ಶಿವಾಜಿ ನಗರ ಬಿಎಂಟಿಸಿ ಬಸ್ ನಿಲ್ದಾಣದ ಬಳಿ ನಡೆದಿದೆ.  ಆರ್.ಟಿ. ನಗರ ನಿವಾಸಿ ಮಹಮ್ಮದ್ ಹುಸೇನ್ ಹಣ ಕಳೆದುಕೊಂಡವರು. ಈ ಸಂಬಂಧ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

10 ನೀಡಿ ಯಶಸ್ವಿನಿ ಯೋಜನೆ ನಿಮ್ಮದಾಗಿಸಿಕೊಳ್ಳಿ...
ಸೂಲಿಬೆಲೆ: 10 ನೀಡಿ ಯಶಸ್ವಿನಿ ಯೋಜನೆಯನ್ನು ನಿಮ್ಮದಾಗಿಸಿಕೊಳ್ಳಿ... ಇಂಥದೊಂದು ಬಂಪರ್ ಆಫರ್ ಅನ್ನು  ಪರಿಶಿಷ್ಟ ಜಾತಿ ಮತ್ತು ಪಂಗಡದ ಅರ್ಹ ಸದಸ್ಯರಿಗೆ ಸಹಕಾರ ಸಂಘಗಳ ನಿಬಂಧಕರು ಕಲ್ಪಿಸಿದ್ದು, ಇದನ್ನು  ಹೆಚ್ಚಿನ ಸಂಖ್ಯೆಯಲ್ಲಿ  ಸದಸ್ಯರು  ಸದ್ಬಳಕೆ ಮಾಡಿಕೊಳ್ಳುವಂತೆ  ರೇಷ್ಮೆ ಬೆಳೆಗಾರರು ಹಾಗೂ ರೈತರ ಸೇವಾ ಸಹಕಾರ ಬ್ಯಾಂಕ್ ವ್ಯವಸ್ಥಾಪಕ ಶ್ರೀನಿವಾಸ ಮೂರ್ತಿ ಕೋರಿದ್ದಾರೆ. ಈ ಮೂಲಕ ಎಸ್ಸಿ,ಎಸ್ಟಿ  ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ  ಯೋಜನೆ ಸದ್ಬಳಕೆ ಮಾಡಿಕೊಳ್ಳುವಂತ ಅವಕಾಶವನ್ನು ಲಭಿಸಿದ್ದು, ಗ್ರಾಮಾಂತರ ಪ್ರದೇಶದ ಜನರು ಇದನ್ನು ಸಮರ್ಥವಾಗಿ ಬಳಿಸಿಕೊಳ್ಳಲು ಜನ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. 2013-14 ಸಾಲಿನ ಯಶಸ್ವಿನಿ ಯೋಜನೆಗೆ ಹೊಸ ಫಲಾನುಭವಿಗಳ ನೋಂದಣಿ  ಹಾಗೂ ನವೀಕರಣದ ಕಾರ್ಯವನ್ನು ವಿಳಂಬವಾಗಿ ಪ್ರಾರಂಭಿಸಿದ ಸರ್ಕಾರ ಈ ವರ್ಷ ಇಂಥ  ಯೋಜನೆಗೆ ಫಲಾನುಭವಿಗಳ ಸಂಖ್ಯೆಯನ್ನು ಹೆಚ್ಚಿಸಲು ಉದ್ದೇಶಿಸಿದೆ. ಕಳೆದ ಮೂರು ವರ್ಷಗಳಿಂದ  ಪ್ರತಿವರ್ಷ ನೋಂದಣಿಯಾಗುತ್ತಿರುವ ಫಲಾನುಭವಿಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿಲ್ಲ. ಇಂಥ ಅವಕಾಶವನ್ನು ಸಮುದಾಯದ ಜನ ಸದ್ಬಳಿಕೆ ಮಾಡಿಕೊಳ್ಳುವಂತೆ ಪ್ರಕಟಣಿಯಲ್ಲಿ ಕೋರಿದ್ದಾರೆ.

ಇಂದು ಬೆಸ್ಕಾಂನಿಂದ ಗ್ರಾಹಕರ ಸಭೆ
ರಾಮನಗರ: ಬೆಸ್ಕಾಂನಿಂದ ಆ.2ರ ಮಧ್ಯಾಹ್ನ 3ಕ್ಕೆ ಚನ್ನಪಟ್ಟಣ ಉಪ ವಿಭಾಗೀಯ ಕಚೇರಿ ಆವರಣದಲ್ಲಿ ಗ್ರಾಹಕರ ಸಭೆ ನಡೆಯಲಿದೆ. ತಾಲೂಕಿನ ಎಲ್ಲಾ ಬೆಸ್ಕಾಂ ಗ್ರಾಹಕರು ತಮ್ಮ ಕುಂದು ಕೊರತೆಗಳನ್ನು ಸಲ್ಲಿಸಬಹುದು ಎಂದು ಎಇಇ ತಿಳಿಸಿದ್ದಾರೆ.

ಯುವಕ, ಯುವತಿಯರಿಂದ ಅರ್ಜಿ ಆಹ್ವಾನ
ರಾಮನಗರ: ಭಾರತ ಸರ್ಕಾರದ 2012-13ನೇ ಸಾಲಿನ ರಾಷ್ಟ್ರೀಯ ಯುವ ಪ್ರಶಸ್ತಿಗಾಗಿ ಯುವಜನ ಸೇವೆ, ರಾಷ್ಟ್ರೀಯ ಅಭಿವೃದ್ಧಿ ಹಾಗೂ ಸಮಾಜ ಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸಿರುವ 15 ರಿಂದ 35 ವರ್ಷ ವಯೋವುತಿಯ ಯುವಕ, ಯುವತಿಯರಿಂದ ಅರ್ಜಿ ಆಹ್ವಾನಿಸಿದೆ. ವೈಯಕ್ತಿಕ ಪ್ರಶಸ್ತಿಗೆ ಯುವಕ, ಯುವತಿಯರು ಹಾಗೂ ಸಂಘಗಳ ಸಾಂಘಿಕ ಪ್ರಶಸ್ತಿಗಾಗಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕಿದೆ. ಅರ್ಜಿ ಸಲ್ಲಿಸಲು  ಆ.8 ಕೊನೆಯ ದಿನವಾಗಿದೆ. ಅರ್ಜಿ ಹಾಗೂ ಹೆಚ್ಚಿನ ವಿವರಗಳಿಗಾಗಿ ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಇಲ್ಲಿ ಖುದ್ದಾಗಿ ಅಥವಾ ದೂ 080-27274655 ಸಂಪರ್ಕಿಸಿ.

ವಾಸುದೇವಮೂರ್ತಿ ಅಧ್ಯಕ್ಷ
ಕ.ಪ್ರ.ವಾರ್ತೆ ನೆಲಮಂಗಲ ಆ. 1
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ  ತಾಲೂಕು ಅಧ್ಯಕ್ಷ ಸ್ಥಾನಕ್ಕೆ ಪಟ್ಟಣದ ಗುರುಭವನದಲ್ಲಿ  ಗುರುವಾರ ನಡೆದ ಚುನಾವಣೆಯಲ್ಲಿ  ಶಿಕ್ಷಕ ವಾಸುದೇವಮೂರ್ತಿ ಆಯ್ಕೆಯಾದರು. ಚುನಾವಣೆಯಲ್ಲಿ ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಖಜಾನೆ ಇಲಾಖೆ ನರೇಂದ್ರರವರು ಆಯ್ಕೆಯಾದರು. ಖಜಾಂಚಿ ಸ್ಥಾನಕ್ಕೆ ಸಿ.ಡಿ.ಪಿ.ಓ ಇಲಾಖೆಯ ತೇಜಸ್ವಿನಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ವೈ.ಟಿ.ಬೈಲಪ್ಪ ತಿಳಿಸಿದರು. ಸರ್ಕಾರಿ ನೌಕರರ ಸಂಘದ ನೂತನ ತಾಲೂಕು ಅಧ್ಯಕ್ಷ ಹಾಗೂ ರಾಜ್ಯ ಪರಿಷತ್ ಸದಸ್ಯರನ್ನು ನಿರ್ದೇಶಕರಾದ ಪುಟ್ಟರುದ್ರಾರಾಧ್ಯ, ನಾಗೇಶ್, ಸೂರ್ಯಪ್ರಕಾಶ್, ಗಿರೀಶ್ ಸೇರಿದಂತೆ  ವಿವಿಧ ಇಲಾಖೆಗಳ ನೌಕರರು ಅಭಿನಂದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.