ಬೆಂಗಳೂರು ಗ್ರಾಮಾಂತರ

ಅಕ್ರಮ ಟೋಲ್ ಗೇಟ್ ತೆರವು

Published On :

ಕ.ಪ್ರ. ವಾರ್ತೆ ಆನೇಕಲ್ಲು ಜು.24
ಅತ್ತಿಬೆಲೆ ಗ್ರಾಮಕ್ಕೆ ಹೊಂದಿಕೊಂಡಂತೆ ಬಿಇಟಿಎಲ್ ಕಂಪನಿಯವರು ಹೆದ್ದಾರಿ ಪ್ರಾಧಿಕಾರದ ನಿಯಮ ಮೀರಿ ಟೋಲ್ಗೇಟ್ ನಿರ್ಮಿಸಿದ್ದರು. ಕೇವಲ 100 ರಿಂದ 200 ಮೀಟರ್ ದೂರ ಕ್ರಮಿಸಲು ಅಕ್ರಮವಾಗಿ ಟೋಲ್ ಚಾರ್ಜ್ ವಸೂಲು ಮಾಡುತ್ತಿದ್ದರು. ಈ ಬಗ್ಗೆ ಗ್ರಾಮಸ್ಥರಿಂದ ಬಂದ ದೂರನ್ನು ಪರಿಶೀಲಿಸಿ ಸರ್ವೀಸ್ ರಸ್ತೆಯಲ್ಲಿ ಓಡಾಡಲು ತೊಂದರೆಯಾಗದಂತೆ ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಡಾ. ಜಿ.ಸಿ. ಪ್ರಕಾಶ್ ತಿಳಿಸಿದರು.
ಅವರು ಹೆದ್ದಾರಿ ಪ್ರಾಧಿಕಾರದ ಅಣತಿಯಂತೆ ಟೋಲ್ ನಿರ್ಮಿಸಿ ಮೇಲ್ಸೇತುವೆ ಬಳಸಿದವರ ಬಳಿ ಟೋಲ್ ಸಂಗ್ರಹಿಸಲು ಅಭ್ಯಂತರವಿರುವುದಿಲ್ಲ. ಆದರೆ ನಿಯಮದಂತೆ ಸರ್ವೀಸ್ ರಸ್ತೆ ಬಿಡದೆ ಸುಂಕ ವಸೂಲಿ ಮಾಡಿ ಗ್ರಾಮಸ್ಥರ ಕೋಪಕ್ಕೆ ಗುರಿಯಾಗಿದ್ದರು. ಈ ದಿನ ಅಕ್ರಮವಾಗಿ ನಿರ್ಮಿಸಿದ್ದ ಟೋಲ್ ಗೇಟ್ ತೆರವುಗೊಳಿಸಿ ಪಾದಾಚಾರಿ ರಸ್ತೆ ಹಾಗೂ ದ್ವಿಚಕ್ರ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಹಾಗೆಯೇ 3 ವರ್ಷದಿಂದ ವಸೂಲು ಮಾಡಿರುವ ಟೋಲ್ ಹಣವನ್ನು ಸರ್ಕಾರದ ಬೊಕ್ಕಸಕ್ಕೆ ಮರುಪಾವತಿ ಮಾಡಲು ಸೂಚಿಸಲಾಗಿದೆ ಎಂದರು.
 ಟಿಪ್ಪರ್ ಲಾರಿ ಚಾಲಕರ ಸಂಘದ ಅಧ್ಯಕ್ಷ ಗೋಪಾಲರೆಡ್ಡಿ ಮತ್ತು ಕಾರ್ಯದರ್ಶಿ ವಿಶ್ವನಾಥ್ ಮಾತನಾಡಿ ಟೋಲ್ ಪ್ಲಾಜಾ ನಿರ್ಮಾಣ ಮಾಡಿ ಸ್ಥಳೀಯರಿಂದ ಹಣ ವಸೂಲು ಮಾಡುತ್ತಿದ್ದರು. ಗಂಟೆಗಟ್ಟಲೇ ಕಾದರೂ ವಾಹನಗಳ ಸಂಚಾರಕ್ಕೆ ಅವಕಾಶವಿರಲಿಲ್ಲ. ನಮ್ಮ ತೋಟ, ಮನೆ ಹೊಲ ಗದ್ದೆಗಳಿಗೆ ಹೋಗಲು ಇವರಿಗೆ ಗುರ್ತಿನ ಚೀಟಿ ತೋರಿಸಬೇಕಿತ್ತು. ಮಾನ್ಯ ಜಿಲ್ಲಾಧಿಕಾರಿಗಳು ಸಹಸ್ರಾರು ಗ್ರಾಮಸ್ಥರ ನೋವಿಗೆ ಸ್ಪಂದಿಸಿ ಉತ್ತಮ ಆದೇಶ ನೀಡಿದ್ದಾರೆ. ಅತ್ತಿಬೆಲೆ ಗ್ರಾಮಸ್ಥರು ಹಾಗೂ ವಾಹನ ಮಾಲಿಕರ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ ಎಂದರು. ಇದೇ ಸಂದರ್ಭದಲ್ಲಿ ತಮಿಳುನಾಡಿನಿಂದ ತರುವ ಉತ್ತಮ ಮರಳನ್ನು ಕಡಿಮೆ ಬೆಲೆಗೆ ರಾಜ್ಯದವರಿಗೆ ಮಾರಾಟ ಮಾಡಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು. ಈ ಬಗ್ಗೆ ಕಾನುನು ತಜ್ಞರ ಅಭಿಪ್ರಾಯ ಪಡೆದು ಚರ್ಚಿಸುವುದಾಗಿ ತಿಳಿಸಿದರು.
ತೆರವು ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ನಾಗರಾಜ್, ಡಿವೈಎಸ್ಪಿ ಕುಮಾರಸ್ವಾಮಿ, ತಹಸೀಲ್ದಾರ್ ಎಚ್.ಎನ್. ಶಿವೇಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.