ಬೆಂಗಳೂರು ಗ್ರಾಮಾಂತರ

ಫ್ಲೆಕ್ಸ್ ತೆರವು ಭರಾಟೆ

Published On :

ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ ಗ್ರಾಮೀಣ ಭಾಗದಲ್ಲಿರುವ ಪ್ರಚಾರ ಸಾಮಗ್ರಿಗಳ ತೆರವು
-ಮತ್ತೀಕೆರೆ ಜಯರಾಮ್
ಕ.ಪ್ರ. ವಾರ್ತೆ, ರಾಮನಗರ, ಮಾ.22

ವಿಧಾನಸಭೆ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿ ಬೆನ್ನಲ್ಲೇ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಅಳವಡಿಸಿದ್ದ ಫ್ಲೆಕ್ಸ್‌ಗಳ ತೆರವು ಕಾರ್ಯಾಚರಣೆ ಭರದಿಂದ ಸಾಗಿದೆ.
ಆದರೆ, ಗ್ರಾಮೀಣ ಭಾಗದಲ್ಲಿರುವ ಪ್ರಚಾರ ಸಾಮಗ್ರಿಗಳ ತೆರವು ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಚುನಾವಣೆ ಸನ್ನಿಹಿತವಾಗುತ್ತಿದ್ದಂತೆಯೇ ಸ್ಪರ್ಧಾಕಾಂಕ್ಷಿ ರಾಜಕಾರಣಿಗಳು ತಮ್ಮ ಸಾಧನೆ ಬಿಂಬಿಸುವ ಪ್ರಚಾರ ಸಾಮಗ್ರಿಗಳನ್ನು ಎಲ್ಲೆಂದರಲ್ಲಿ ಹರಡಿದ್ದಾರೆ. ಶೇಕಡ 90ರಷ್ಟು ಪ್ರಚಾರ ಸಾಮಗ್ರಿಗಳನ್ನು ಅನುಮತಿ ಇಲ್ಲದೆ ಹಾಗೂ ನಿಗದಿತ ಶುಲ್ಕ ಪಾವತಿಸದೆ ಅಳವಡಿಸಲಾಗಿದೆ. ಇವುಗಳ ತೆರವು ಜಿಲ್ಲಾಡಳಿತಕ್ಕೆ ಸಾಕಷ್ಟು ತಾಪತ್ರಯದ ಕೆಲಸವಾಗಿದೆ.
ಮಾದರಿ ನೀತಿ ಸಂಹಿತೆ ಪ್ರಕಾರ ಮತದಾನ ನಡೆಯುವ ಕ್ಷೇತ್ರ ವ್ಯಾಪ್ತಿಯಲ್ಲೆಲ್ಲೂ ರಾಜಕೀಯ ಪಕ್ಷಗಳು, ಸ್ಪರ್ಧಾಕಾಂಕ್ಷಿಗಳು ಮತ್ತು ಮುಖಂಡರ ಪ್ರಚಾರ ಸಾಮಗ್ರಿಗಳು ಇರುವಂತಿಲ್ಲ. ಜಿಲ್ಲಾದ್ಯಂತ ಹೆಜ್ಜೆ ಹೆಜ್ಜೆಗೂ ಪ್ರಚಾರ ಸಾಮಗ್ರಿಗಳು ರಾರಾಜಿಸುತ್ತಿವೆ. ಈ ಪೈಕಿ ಒಂದನ್ನೂ ಉಳಿಸದಂತೆ ತೆರವು ಮಾಡಲು ಜಿಲ್ಲಾಡಳಿತವು ಆಯಾ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳಿಗೆ ಸ್ಪಷ್ಟ ಸೂಚನೆ ನೀಡಿದೆ.
ಚನ್ನಪಟ್ಟಣದಲ್ಲೇ ಅಧಿಕ: ರಾಮನಗರ ಜಿಲ್ಲೆಯ ಉಳಿದೆಡೆಗೆ ಹೋಲಿಸಿದರೆ ಚನ್ನಪಟ್ಟಣ ಕ್ಷೇತ್ರ ವ್ಯಾಪ್ತಿಯಲ್ಲೇ ಅತಿ ಹೆಚ್ಚು ಪ್ರಚಾರ ಸಾಮಗ್ರಿಗಳು ಹರಡಿಕೊಂಡಿವೆ. ನೀರಾವರಿ ಮಂತ್ರ ಜಪಿಸುತ್ತಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪರವಾದ ಭಿತ್ತಿಪತ್ರಗಳು ಮತ್ತು ಅವಕ್ಕೆ ಪ್ರತಿಯಾಗಿ ಕ್ಷೇತ್ರದ ನೀರಾವರಿ ಕೊಡುಗೆ ತಮ್ಮದೆಂದು ಬಿಜೆಪಿ ಅಳವಡಿಸಿರುವ ಭಿತ್ತಿಪತ್ರಗಳು ತಾಲೂಕಿನಾದ್ಯಂತ ಹಳ್ಳಿ, ಗಲ್ಲಿಗಳಲ್ಲೂ ಕಣ್ಣಿಗೆ ರಾಚುವಂತಿವೆ.
ಇನ್ನುಳಿದಂತೆ, ಕನಕಪುರದಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹಮ್ಮಿಕೊಂಡಿದ್ದ ಜನಪರ ಕಾರ್ಯಕ್ರಮಗಳು ಮತ್ತು ವಿವಿಧ ಸಮಾವೇಶಗಳಿಗೆ ಸಂಬಂಧಿಸಿದ ಭಿತ್ತಿಪತ್ರಗಳದ್ದೇ ಅಬ್ಬರ. ಈ ಎರಡು ಕ್ಷೇತ್ರಗಳಿಗೆ ಹೋಲಿಸಿದರೆ, ಮಾಗಡಿ ಮತ್ತು ರಾಮನಗರದಲ್ಲಿ ಭಿತ್ತಿಪತ್ರಗಳ ಹಾವಳಿ ಅಷ್ಟಾಗಿ ಕಂಡು ಬಂದಿಲ್ಲ.
ಭಿತ್ತಿಪತ್ರಗಳನ್ನು ಅಂಟಿಸಲು ರಾಜಕೀಯ ಕಾರ್ಯಕರ್ತರು ಮಾಡಿದಷ್ಟೇ ಖರ್ಚು ಹಾಗೂ ಶ್ರಮ ಅವನ್ನು ತೆರವುಗೊಳಿಸಲು ಸ್ಥಳೀಯ ಸಂಸ್ಥೆಗಳಿಗೂ ಆಗುತ್ತಿದೆ. ಈವರೆಗೆ ಪ್ರಚಾರ ಸಾಮಗ್ರಿಗಳಿಗೆ ಭರಿಸಿರುವ ಖರ್ಚು ಚುನಾವಣಾ ವೆಚ್ಚದ ಮಿತಿಗೆ ಬರುವುದಿಲ್ಲ. ಸ್ಥಳೀಯ ಸಂಸ್ಥೆಗಳಿಗೆ ಮಾತ್ರ ವಣಥಾ ಖರ್ಚು. ಈ ಕೆಲಸವೂ ಸಣ್ಣಪುಟ್ಟ ಅಧಿಕಾರಿ, ನೌಕರರ ಪಾಲಿಗೆ ರಾಮ-ಕೃಷ್ಣನ ಲೆಕ್ಕ ಕೊಟ್ಟು ದುಡ್ಡು ಮಾಡಿಕೊಳ್ಳಲು ದಾರಿ ಮಾಡಿಕೊಟ್ಟಿದೆ.
ಫಲಕಗಳ ಹಾವಳಿ: ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರ ಪಾಲಿನ ಕ್ಷೇತ್ರಾಭಿವೃದ್ಧಿ ನಿಧಿಯಿಂದ ನಿರ್ಮಿಸಿರುವ ಬಸ್ ನಿಲ್ದಾಣ, ಕಟ್ಟಡ, ಕಾಂಪೌಂಡ್, ಕೊಠಡಿ, ನೀರು ಸರಬರಾಜು ಟ್ಯಾಂಕ್ ಸಹಿತ ನಾನಾ ಕಾಮಗಾರಿಗಳ ಮೇಲೆ ಸಂಬಂಧಿಸಿದ ಜನಪ್ರತಿನಿಧಿಯ ಹೆಸರಿನೊಂದಿಗೆ ಫಲಕಗಳನ್ನು ಅಳವಡಿಸಲಾಗಿದೆ.
ಇಂತಹ ಕಾಮಗಾರಿಗಳ ಮೇಲೆ ಅನುದಾನ ನೀಡಿದ ಜನಪ್ರತಿನಿಧಿಯ ಹೆಸರು, ಕಾಮಗಾರಿ ವಿವರ ಪ್ರಕಟಿಸುವುದು ನಿಯಮವಾಗಿದೆ. ಚುನಾವಣೆ ಸಂದರ್ಭದಲ್ಲಿ ಸದರಿ ಫಲಕಗಳನ್ನು ಮುಚ್ಚಬೇಕಿದೆ. ಇದಲ್ಲದೆ, ಸರ್ಕಾರದ ಕಾರ್ಯಕ್ರಮಗಳನ್ನು ಪ್ರಚುರಪಡಿಸುವ ಫ್ಲೆಕ್ಸ್‌ಗಳನ್ನೂ ತೆರವುಗೊಳಿಸಬೇಕು ಇಲ್ಲವೆ ಮುಚ್ಚಬೇಕು.
ಪೌರ ಸಂಸ್ಥೆಗಳ ಚುನಾವಣೆ ಸಂದರ್ಭದಲ್ಲಿ ಸರ್ಕಾರದ ಅದೆಷ್ಟೋ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿರಲಿಲ್ಲ. ಬಿಎಸ್‌ಆರ್ಕಾಂಗ್ರೆಸ್ಪ್‌ಕ್ಷದ ಚಿಹ್ನೆ ಎನ್ನುವ ಕಾರಣಕ್ಕೆ ಮತಗಟ್ಟೆಗಳಲ್ಲಿದ್ದ ಫ್ಯಾನ್‌ಗಳನ್ನು ಮುಚ್ಚಿಟ್ಟ ಅಧಿಕಾರಿಗಳು ಸಾರ್ವಜನಿಕ ಸ್ಥಳಗಳಲ್ಲಿ ರಾರಾಜಿಸುತ್ತಿದ್ದ ಪ್ರಚಾರ ಸಾಮಗ್ರಿಗಳತ್ತ ತಿರುಗಿ ನೋಡುವ ಗೋಜಿಗೆ ಹೋಗಿರಲಿಲ್ಲ.
ಆ ಚುನಾವಣೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಪಾಲಿಸಿರಲಿಲ್ಲ. ಇಷ್ಟಾಗಿಯೂ ಹೇಳೋರು ಕೇಳೋರು ಇರಲಿಲ್ಲ. ಆದರೆ, ಪ್ರಸಕ್ತ ಚುನಾವಣೆಯಲ್ಲಿ ಹಾಗಾಗದು. ರಾಜ್ಯ ಮತ್ತು ಕೇಂದ್ರ ಚುನಾವಣಾ ಆಯೋಗದ ಹದ್ದಿನ ಕಣ್ಣು ಇರುತ್ತದೆ. ಸಹಜವಾಗಿಯೇ ಅಧಿಕಾರಿಗಳು ಪೇಚಿಗೆ ಸಿಲುಕಿದ್ದಾರೆ.
ಇಷ್ಟಕ್ಕೆ ಮುಗಿಯದು: ಭಿತ್ತಿಪತ್ರಗಳು, ಫ್ಲೆಕ್ಸ್‌ಸಹಿತ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಿದರಷ್ಟೇ ಸಾಲದು. ವಿವಿಧ ಶಾಲೆಗಳ ಗೋಡೆಗಳ ಮೇಲೆ ನಲಿ-ಕಲಿ ಕಾರ್ಯಕ್ರಮದಡಿ ಹಸ್ತ, ತಕ್ಕಡಿ, ನೇಗಿಲು, ಸೂರ್ಯ, ಕೊಡೆ ಸೇರಿದಂತೆ ಚುನಾವಣಾ ಆಯೋಗದ ಪಟ್ಟಿಯಲ್ಲಿರುವ ನಾನಾ ಚಿಹ್ನೆಗಳೂ ಮೂಡಿವೆ. ಸದರಿ ಶಾಲೆಗಳು ಮತಗಟ್ಟೆ ಕೇಂದ್ರಗಳಾಗಲಿ ಬಿಡಲಿ ಅವೆಲ್ಲ ಚಿತ್ರಗಳನ್ನು ಮುಚ್ಚುವ ಫಜೀತಿ ಕೆಲಸ ಸಂಬಂಧಿಸಿದ ಅಧಿಕಾರಿಗಳಿಗೆ ತಪ್ಪಿದ್ದಲ್ಲ.

ಅಧಿಕಾರಿಗಳ ತಂಡ
ವಿಧಾನಸಭಾ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತವಾಗಿ ನಡೆಸಲು ಜಿಲ್ಲಾಡಳಿತ ಸಿದ್ಧತೆಗಳನ್ನು ಕೈಗೊಂಡಿದೆ. ಅಧಿಕಾರಿಗಳ ಸಭೆ ನಡೆಸಿರುವ ಜಿಲ್ಲಾಧಿಕಾರಿ ವಿ. ಶ್ರೀರಾಮರೆಡ್ಡಿ, ಮಾದರಿ ನೀತಿ ಸಂಹಿತೆಯ ಕಟ್ಟುನಿಟ್ಟಿನ ಪಾಲನೆಗಾಗಿ ಸೆಕ್ಟರ್ ಮ್ಯಾಜಿಸ್ಟ್ರೇಟ್ ಮತ್ತು ವಿವಿಧ ಅಧಿಕಾರಿಗಳ ತಂಡ ರಚನೆ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.  ಚುನಾವಣಾ ಕೆಲಸ ಮುತುವರ್ಜಿಯಿಂದ ನಿರ್ವಹಿಸಬೇಕು. ಸೂಕ್ಷ್ಮ, ಅತಿ ಸೂಕ್ಷ್ಮ ಮತೆಗಟ್ಟಗಳ ಶೀಘ್ರವೇ ಗುರ್ತಿಸಬೇಕು. ಮತದಾರರ ಪಟ್ಟಿಯನ್ನು ಪರಿಷ್ಕರಿಸಿ, ಮತದಾರರಿಗೆ ಭಾವಚಿತ್ರವಿರುವ ಗುರುತಿನ ಚೀಟಿಗಳ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಡೆಪಾಜಿಟ್‌ಗೆ ಆದೇಶ
ವಿಧಾನಸಭಾ ಸಾರ್ವತ್ರಿಕ ಚುನಾವಣೆ ಚುನಾವಣಾ ನೀತಿ ಸಂಹಿತೆಯು ಮಾ.20ರಿಂದಲೇ ಜಾರಿಗೆ ಬಂದಿದ್ದು, ಮೇ11ರವರೆಗೆ ಜಾರಿಯಲ್ಲಿರುತ್ತದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಎಲ್ಲಾ ರೀತಿಯ ಪರವಾನಗಿ ಹೊಂದಿರುವ ಆಯುಧಗಳನ್ನು ಲೈಸೆನ್ಸ್‌ದಾರರು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಕೂಡಲೆ ಡೆಪಾಜಿಟ್ ಮಾಡಿ, ಸ್ವೀಕೃತಿ ಪಡೆಯಬೇಕೆಂದು ಜಿಲ್ಲಾಧಿಕಾರಿ ವಿ. ಶ್ರೀರಾಮರೆಡ್ಡಿ ಆದೇಶಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.