ಜಿಲ್ಲೆಯ 8ನೇ ಉಸ್ತುವಾರಿ ಯಾರು?
-ಮತ್ತೀಕೆರೆ ಜಯರಾಮ್
ಕ.ಪ್ರ.ವಾರ್ತೆ ರಾಮನಗರ ಮೇ 21
ರಾಜಧಾನಿ ಮಗ್ಗುಲಲ್ಲಿರುವ ರಾಮನಗರ ಜಿಲ್ಲೆ ರಚನೆಗಿನ್ನೂ ಆರು ವರ್ಷ ತುಂಬಿಲ್ಲ. ಈಗಾಗಲೇ 7 ಉಸ್ತುವಾರಿ ಸಚಿವರನ್ನು ಕಂಡಿರುವ ಜಿಲ್ಲೆಯು ಇದೀಗ 8ನೇ ಉಸ್ತುವಾರಿ ಸಚಿವರ ಆಗಮನ ನಿರೀಕ್ಷೆಯಲ್ಲಿದೆ.
ರೇಷ್ಮೆನಾಡು ರಾಮನಗರಕ್ಕೆ ಇಲ್ಲಿವರೆಗೆ ಉಸ್ತುವಾರಿ ಸಚಿವರಾದವರ ಪೈಕಿ 6 ಮಂದಿ ಹೊರಗಿನವರೇ. ಈ ಬಾರಿ ಸಂಪುಟದಲ್ಲಿ ಜಿಲ್ಲೆಗೆ ಸ್ಥಾನ ಸಿಗದ ಪರಿಣಾಮ ಮತ್ತೊಮ್ಮೆ ಜಿಲ್ಲೆಗೆ ಹೊರಗಿನವರ ಹೆಗಲಿಗೆ ಉಸ್ತುವಾರಿಯ ಹೊರೆ ಬೀಳುವುದು ನಿಶ್ಚಿತವಾಗಿದೆ.
ಜಿಲ್ಲೆಯ ಕನಕಪುರ ಕ್ಷೇತ್ರದಿಂದ ಪ್ರಭಾವಿ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಆಯ್ಕೆಯಾಗಿದ್ದಾರಾದರೂ ಕಳಂಕದ ಹಿನ್ನೆಲೆಯಲ್ಲಿ ಸಂಪುಟದಲ್ಲಿ ಸ್ಥಾನ ಗಿಟ್ಟಿಸುವಲ್ಲಿ ವಿಫಲರಾಗಿದ್ದಾರೆ. ಜಿಲ್ಲೆಗೆ 8ನೇ ಉಸ್ತುವಾರಿ ಸಚಿವ ಯಾರು ಎನ್ನುವುದು ಯಕ್ಷಪ್ರಶ್ನೆಯಾಗಿದೆ.
ಮೊದಲು ರೇವಣ್ಣ: ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ 2007ರಲ್ಲಿ ರಾಮನಗರ ಜಿಲ್ಲೆಯನ್ನು ರಚಿಸಿದರು. ಆಗ ಆಯಕಟ್ಟಿನ ಡಬಲ್ ಖಾತೆಗಳ ಸಚಿವರಾಗಿದ್ದ ಎಚ್.ಡಿ.ರೇವಣ್ಣ ಅವರಿಗೆ ಹಾಸನದ ಜತೆಗೆ ರಾಮನಗರದ ಉಸ್ತುವಾರಿಯನ್ನು ಹೆಚ್ಚುವರಿಯಾಗಿ ನೀಡಲಾಗಿತ್ತು.
ಬಿಜೆಪಿ ಅಧಿಕಾರಾವಧಿಯಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರನ್ನು ಪದೇ ಪದೇ ಬದಲಿಸಲಾಗಿದೆ. ಮೂವರಿಗೆ ರಾಮನಗರ ಹೆಚ್ಚುವರಿ ಉಸ್ತುವಾರಿ ಹೊಣೆ ಆಗಿದ್ದನ್ನು ಗಮನಿಸಿದರೆ ಆಗಿನ ಸರ್ಕಾರಕ್ಕೆ ಈ ಜಿಲ್ಲೆ ಎಷ್ಟರ ಮಟ್ಟಿಗೆ ಕಾಳಜಿ ಇತ್ತೆನ್ನುವುದು ಸ್ಪಷ್ಟವಾಗುತ್ತದೆ.
ಆರು ಬದಲಾವಣೆಗಳು: ಬಿ.ಎಸ್.ಯಡಿಯೂರಪ್ಪ ಅಧಿಕಾರಾವಧಿಯಲ್ಲಿ ಮೊದಲಿಗೆ ಕಟ್ಟಾಸುಬ್ರಹ್ಮಣ್ಯ ನಾಯ್ಡು
ಬೆಂಗಳೂರು ಜತೆಗೆ ರಾಮನಗರದ ಹೆಚ್ಚುವರಿ ಹೊಣೆ ವಹಿಸಿಕೊಂಡರು. ನಂತರದಲ್ಲಿ ಉಮೇಶ್ ಕತ್ತಿ, ಬಿ.ಶ್ರೀರಾಮುಲು ಹಾಗೂ ಬಿ.ಎನ್.ಬಚ್ಚೇಗೌಡ ಅವರು ರಾಮನಗರದಲ್ಲಿ ಉಸ್ತುವಾರಿ ಸಚಿವರಾಗಿ ದರ್ಬಾರ್ ನಡೆಸಿದ್ದರು.
ಮುಖ್ಯಮಂತ್ರಿಯಾಗಿ ಡಿ.ವಿ.ಸದಾನಂದಗೌಡ ಅಧಿಕಾರಾದಲ್ಲಿದ್ದಾಗ ಜಿಲ್ಲೆಯವರೇ ಆದ ಸಿ.ಪಿ.ಯೋಗೇಶ್ವರ್ ಇಲ್ಲಿನ ಉಸ್ತುವಾರಿ ಸಚಿವರಾದರು. ಇವರೇ ರಾಮನಗರ ಜಿಲ್ಲೆಯ ಉಸ್ತುವಾರಿ ಹೊಣೆ ಹೊತ್ತ ಮೊಟ್ಟ ಮೊದಲ ಸ್ಥಳೀಯ ಸಚಿವ ಎನಿಸಿಕೊಂಡಿದ್ದಾರೆ.
ಜಿಲ್ಲೆ ಮರೆತ ರೇಣು: ಸದಾನಂದಗೌಡ ಪದತ್ಯಾಗದ ಬಳಿಕ ಸಿಎಂ ಹುದ್ದೆಗೇರಿದ ಜಗದೀಶ್ ಶೆಟ್ಟರ್ ಉಸ್ತುವಾರಿಗಳನ್ನು ಬದಲಿಸಿದರು. ರಾಮನಗರ ಜಿಲ್ಲೆಯ ಯೋಗೇಶ್ವರ್ ಅವರನ್ನು ನೆರೆಯ ಮಂಡ್ಯಕ್ಕೆ ಎತ್ತಂಗಡಿ ಮಾಡಿ, ಈ ಜಿಲ್ಲೆಗೆ ಹೊನ್ನಾಳಿಯವರಾದ ಸಚಿವ ಎಂ.ಪಿ.ರೇಣುಕಾಚಾರ್ಯ ಅವರನ್ನು ಪ್ರತಿಷ್ಠಾಪಿಸಿದ್ದರು.
ರೇಣುಕಾಚಾರ್ಯ ಈ ಜಿಲ್ಲೆಗೆ ಕಾಲಿಡುತ್ತಲೇ ಪ್ರತಿಪಕ್ಷವಾದ ಜೆಡಿಎಸ್ ಸಂಸದ, ಶಾಸಕರ ಆಣತಿಯಂತೆ ನಡೆಯಲಾರಂಭಿಸಿದರು. ರೇಣುಕಾಚಾರ್ಯ ಮತ್ತು ಯೋಗೇಶ್ವರ್ನ್‌ಡುವೆ ಶೀಥಲ ಸಮರ ನಡೆದಿತ್ತು. ಆರಂಭ ಶೂರತ್ವ ತೋರಿದ ರೇಣುಕಾಚಾರ್ಯ ಕಡೆಯ ಆರು ತಿಂಗಳು ಜಿಲ್ಲೆ ಕಡೆ ತಲೆ ಹಾಕಲಿಲ್ಲ.
ಇದೇ ವರ್ಷ ಜ.26 ರಂದು ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರೇಣುಕಾಚಾರ್ಯ ಧ್ವಜಾರೋಹಣ ನಡೆಸುವಷ್ಟೂ ಪುರುಸೊತ್ತಿಲ್ಲದಂತಾಗಿದ್ದರು. ಸರ್ಕಾರವು ರಾಮನಗರದಲ್ಲಿ ಧ್ವಜಾರೋಹಣಕ್ಕಾಗಿ ಸಚಿವ ಸುರೇಶ್ ಕುಮಾರ್ ಅವರನ್ನು ನಿಯೋಜಿಸಿತ್ತು.
ಮೈಲುಗಲ್ಲು ಇಲ್ಲ: ಈ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ನಿಭಾಯಿಸುವ ಸಂದರ್ಭದಲ್ಲಿ 7 ಮಂದಿಯ ಪೈಕಿ ಯಾರೊಬ್ಬರೂ ನೆನಪಿನಲ್ಲಿ ಉಳಿಯುವಂತಹ ಕೆಲಸ ಮಾಡಲೇ ಇಲ್ಲ. ಆಗೊಂದು ಹೀಗೊಂದು ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅಧಿಕಾರಿಗಳ ತಲೆ ಎಣಿಸಿದ್ದೇ ಉಸ್ತುವಾರಿ ಸಚಿವರ ಸಾಧನೆ.
ಯೋಗೇಶ್ವರ್ ಮಾತ್ರ ಒಂದಿಷ್ಟು ಯೋಜನೆಗಳನ್ನು ಚನ್ನಪಟ್ಟಣಕ್ಕೆ ಸೀಮಿತವಾಗಿ ಮಂಜೂರು ಮಾಡಿಸಿಕೊಂಡರು. ಅವರು ಇಡೀ ಜಿಲ್ಲೆಗೆ ನ್ಯಾಯ ತಂದು ಕೊಡಲಿಲ್ಲ. ಹೊರಗಿನ ಉಸ್ತುವಾರಿಗಳು ಈ ಜಿಲ್ಲೆಯ ಉಸಾಬರಿ ಬಗ್ಗೆ ಉತ್ಸಾಹವನ್ನೇ ತೋರಲಿಲ್ಲ. ಎಲ್ಲ ಹಂತದಲ್ಲೂ ಅವರು ಹೊರೆ ಎನಿಸಿಕೊಂಡರಷ್ಟೇ.
ಹೊಸಬರು ಯಾರು?
ಒಂದೊಮ್ಮೆ ಜಿಲ್ಲಾ ಉಸ್ತುವಾರಿ ಹಂಚಿಕೆ ಮುನ್ನವೇ ಸಿದ್ದರಾಮಯ್ಯ ಸಂಪುಟದಲ್ಲಿ ಖಾಲಿ ಇರುವ ಹುದ್ದೆ ಭರ್ತಿ ನಡೆದು, ಡಿ.ಕೆ.ಶಿವಕುಮಾರ್ ಅವರಿಗೆ ಸ್ಥಾನ ದೊರೆತರೆ ಈ ಜಿಲ್ಲೆಗೆ ಅವರೇ ಉಸ್ತುವಾರಿ ಸಚಿವರಾಗುವುದು ಖಚಿತ. ಖಾಲಿ ಹುದ್ದೆ ಭರ್ತಿಯನ್ನು ಮುಂದೂಡಿ ಜಿಲ್ಲಾ ಉಸ್ತುವಾರಿ ಹಂಚಿದರೆ ರಾಮನಗರಕ್ಕೆ ಹೊರಗಿನ ಸಚಿವರ ಉಸ್ತುವಾರಿ ತಪ್ಪಿದ್ದಲ್ಲ. ಸದ್ಯದ ಮಟ್ಟಿಗೆ ಬೆಂಗಳೂರಿನಲ್ಲಿರುವ ನಾಲ್ವರು ಸಚಿವರಲ್ಲಿ ಒಬ್ಬರ ಹೆಗಲಿಗೆ ರಾಮನಗರದ ಉಸ್ತುವಾರಿ ಬೀಳಲಿದೆ ಎಂದು ಅಂದಾಜಿಸಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

