ವಿದ್ಯಾರ್ಥಿ ಕೊಲೆ
ಆನೇಕಲ್ಲು: ಬಿಕಾಂ ನಂತರ ಸಿಎ ವ್ಯಾಸಂಗ ಮಾಡುತ್ತಿದ್ದ ರೈತ ಕುಟುಂಬದ ಯುವಕನೊಬ್ಬನ ಕತ್ತನ್ನು ಇರಿದು, ಪ್ಲಾಸ್ಟಿಕ್ ದಾರದಿಂದ ಕತ್ತು ಬಿಗಿದು ಭೀಕರವಾಗಿ ಹತ್ಯೆಗೈದ ಘಟನೆ ಆನೇಕಲ್ ಠಾಣಾ ವ್ಯಾಪ್ತಿಯ ಮೆಣಸಿಗನಹಳ್ಳಿ ಗಡಿ ಭಾಗದಲ್ಲಿ ನಡೆದಿದೆ.ಮೆಣಸಿಗನಹಳ್ಳಿ ವಾಸಿ ಉದಯಕುಮಾರ್(23) ಕೊಲೆಯಾದವ.
ಎಂದಿನಂತ ಕಾಲೇಜಿನಿಂದ ಮನೆಗೆ ಬಂದ ಉದಯ್ಹುಸುಗಳಿಗೆ ಮೇವನ್ನು ತರಲು ಹೊಲಕ್ಕೆ ಹೋಗಿದ್ದ. ರಾತ್ರಿಯಾದರೂ ಬರಲಿಲ್ಲ. ಇಂದು ಬೆಳಗ್ಗೆ ಪೊರಕೆ ಕಡ್ಡಿ ತರಲು ಹೋದ ಮಹಿಳೆಯರ ಕಣ್ಣಿಗೆ ನೀಲಗಿರಿ ತೋಪಿನಲ್ಲಿ ರಕ್ತ ಸಿಕ್ತವಾಗಿ ಬಿದ್ದಿದ್ದ ಯುವಕನ ದೇಹ ಕಂಡು ಊರಲ್ಲಿ ತಿಳಿಸಿದರು. ಸ್ತಳಕ್ಕೆ ಧಾವಿಸಿದ ಪೊಲೀಸರು ವಿಚಾರಿಸಲಾಗಿ ತಾಯಿ ಭಾಗ್ಯಮ್ಮ ತಮ್ಮ ಮಗ ಅಮಾಯಕನೆಂದೂ, ಯಾರ ತಂಟೆಗೂ ಹೋಗುತ್ತಿರಲಿಲ್ಲ ಎಂದು ತಿಳಿಸಿದ್ದಾರೆ. ಶವವನ್ನು ತಮಿಳುನಾಡಿನ ಗಡಿ ಪ್ರದೇಶದಲ್ಲಿ ಎಸೆದಿರುವುದರಿಂದ ನೆರೆಯ ತಮಿಳುನಾಡಿನ ಥಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೊಳಗೇರಿ ವಾಸಿಗಳ ಪ್ರತಿಭಟನೆ ಇಂದು
ದೊಡ್ಡಬಳ್ಳಾಪುರ: ನಗರದ ಸಂಜಯನಗರದ ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವ ಜನರನ್ನು ಒಕ್ಕಲೆಬ್ಬಿಸುವ ಹುನ್ನಾರ ಬೆಳೆಯುತ್ತಿರುವುದರ ವಿರುದ್ಧ ಇಲ್ಲಿನ ಕೊಳಚೆ ಪ್ರದೇಶ ಹೋರಾಟ ಸಮಿತಿ ನೇತೃತ್ವದಲ್ಲಿ ಬುಧವಾರ ಬೆಳಗ್ಗೆ 10.30ಕ್ಕೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸಂಜಯನಗರದಿಂದ ತಾಲೂಕು ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ನಂತರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಸಮಿತಿ ಪ್ರಕಟಣೆ ತಿಳಿಸಿದೆ.
ಸರ್ದಾರ್ ಪಟೇಲ್ ವಿದ್ಯಾಸಂಸ್ಥೆ ಸುವರ್ಣ ಮಹೋತ್ಸವ ಇಂದು
ಸರ್ಜಾಪುರ: ಸರ್ಜಾಪುರದ ಸರ್ದಾರ್ ವಲ್ಲಭಬಾಯ್ ಪಟೇಲ್ ವಿದ್ಯಾಸಂಸ್ಥೆಯು ನ.13ರಂದು ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭ ಹಮ್ಮಿಕೊಂಡಿದೆ.
ಬುಧವಾರ ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ರಾಮಸ್ವಾಮಿರೆಡ್ಡಿ, ಸಂಸ್ಥೆಯ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಡಾ.ಎಂ. ಮುನಿರೆಡ್ಡಿ, ಡಾ.ಎಂ.ಆರ್.ಜಯರಾಮ್ ಮತ್ತಿತರರು ಭಾಗವಹಿಸಲಿದ್ದಾರೆ.
ಮಧ್ಯಾಹ್ನ 2.30ಕ್ಕೆ ನಡೆಯಲಿರುವ ಸುವರ್ಣ ಮಹೋತ್ಸವ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ರಾಮಸ್ವಾಮಿರೆಡ್ಡಿ ವಹಿಸಲಿದ್ದು, ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಬಿ.ಶಿವಣ್ಣ, ಬಿ.ಟಿ.ದಯಾನಂದ, ಪುಟ್ಟಣ್ಣ, ಚಲನಚಿತ್ರ ನಿರ್ಮಾಪಕ ಡಾ.ಸಿ.ಆರ್.ಮನೋಹರ್, ಬೆಂಗಳೂರು ನಗರ ಜಿಪಂ ಅಧ್ಯಕ್ಷೆ ವಾಣಿವಿಶ್ವನಾಥ್, ತಾಪಂ ಅಧ್ಯಕ್ಷ ವಿ.ಮುರಳಿಕೃಷ್ಣ, ಸರ್ಜಾಪುರ ಗ್ರಾಪಂ ಅಧ್ಯಕ್ಷ ಎಸ್.ವೈ.ಶಂಭಯ್ಯ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ.
ಅಕ್ರಮ ಮರಳು ಸಾಗಾಣೆ: 8 ಲಾರಿ, 1 ಟ್ರ್ಯಾಕ್ಟರ್ ವಶ
ದೊಡ್ಡಬಳ್ಳಾಪುರ: ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ 8 ಲಾರಿ ಮತ್ತು 1 ಟ್ರ್ಯಾಕ್ಟರ್ ಅನ್ನು ಪೊಲೀಸರು ಮಂಗಳವಾರ ವಶಪಡಿಸಿಕೊಂಡಿದ್ದಾರೆ. ಕಳೆದ 4 ದಿನಗಳ ಹಿಂದೆಯಷ್ಟೆ 12 ಟ್ರಾಕ್ಟರ್ ಅಕ್ರಮ ಫಿಲ್ಟರ್ ಮರಳು ವಶಪಡಿಸಿಕೊಳ್ಳಲಾಗಿತ್ತು. ಪಟ್ಟಣದ ಹೊರವಲಯದ ಬೆಂಗಳೂರು-ಹಿಂದೂಪುರ ಮುಖ್ಯರಸ್ತೆಯ ಕಂಟನಕುಂಟೆ ಬಳಿ ಮತ್ತು ಬೆಂಗಳೂರು ಮುಖ್ಯರಸ್ತೆಯ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಬಳಿ ಬೆಳಗಿನಜಾವ ಪ್ರತ್ಯೇಕ ಕಾರ್ಯಾಚರಣೆ ನಡೆಸಿರುವ ಪೊಲೀಸರು ಫಿಲ್ಟರ್ ಮರಳು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೊಡ್ಡಬಳ್ಳಾಪುರ ನಗರ, ತಾಲೂಕಿನ ವಿವಿಧ ಗ್ರಾಮಗಳು, ಪಕ್ಕದ ಗೌರಿಬಿದನೂರು ಮತ್ತು ಚಿಕ್ಕಬಳ್ಳಾಪುರ ತಾಲೂಕಿನ ಹಲವೆಡೆ ಅಕ್ರಮವಾಗಿ ಫಿಲ್ಟರ್ ಮರಳು ದಂಧೆ ಅವ್ಯಾಹತ ನಡೆಯುತ್ತಿದೆ. ಈ ಬಗ್ಗೆ ಹಲವು ಬಾರಿ ಗಮನಕ್ಕೆ ಬಂದರೂ ತಾಲೂಕು ಆಡಳಿತ ನಿರ್ದಿಷ್ಟ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿರುವುದೇ ದಂಧೆ ಬೆಳೆಯಲು ಕಾರಣವಾಗಿದೆ ಎಂಬುದು ಸಾರ್ವಜನಿಕರ ಆರೋಪ. ಬಹುಮುಖ್ಯವಾಗಿ ತಾಲೂಕಿನ ತೂಬಗೆರೆ ಹೋಬಳಿಯ ಹಲವು ಗ್ರಾಮಗಳು, ಜಕ್ಕಲಮಡಗು ಕಣಿವೆ ಪ್ರದೇಶದ ಹಲವೆಡೆ ಅಕ್ರಮ ಫಿಲ್ಟರ್ ಮರಳು ದಂಧೆ ನಡೆಯುತ್ತಿದೆ.
20ಕ್ಕೆ ಕನಕ ಜಯಂತಿ
ರಾಮನಗರ: ಕನಕದಾಸರ ಜಯಂತಿಯನ್ನು ನ.20ರಂದು ಅರ್ಥಪೂರ್ಣವಾಗಿ ಆಚರಿಸಲು ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತೋಟಗಾರಿಕೆ ಇಲಾಖೆ ಸೇರಿದಂತೆ ಇತರೆ ಎಲ್ಲಾ ಇಲಾಖಾ ಅಧಿಕಾರಿಗಳು ಅಗತ್ಯ ಪೂರ್ವಸಿದ್ಧತೆ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನಕದಾಸರ ಜಯಂತಿ ಆಚರಣೆ ಸಂಬಂಧ ಮಂಗಳವಾರ ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾತಿ, ಧರ್ಮಗಳ ಕೀಳರಿಮೆಯಿಂದ ಹೊರಬಂದು ಮಾನವೀಯ ಮೌಲ್ಯ ರೂಢಿಸಿಕೊಳ್ಳುವಂತೆ ಜನರ ಕಣ್ಣು ತೆರೆಸಿದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಎಲ್ಲರು ಪಾಲ್ಗೊಳ್ಳಬೇಕೆಂದು ತಿಳಿಸಿದರು. ನ.20 ರಂದು ನಗರದ ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಕನಕದಾಸರ ಭಾವಚಿತ್ರ ಮೆರವಣಿಗೆ ನಡೆಸಲಾಗುವುದು. ಡೊಳ್ಳು ಕುಣಿತ, ವೀರಗಾಸೆ, ಪೂಜಾ ಕುಣಿತ ಸೇರಿದಂತೆ ಇನ್ನಿತರೆ ಸಾಂಸ್ಕೃತಿಕ ತಂಡಗಳು ಈ ಮೆರವಣಿಗೆಯಲ್ಲಿ ಭಾಗವಹಿಸುವಂತೆ ವ್ಯವಸ್ಥೆ ಮಾಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು. ಅಪರ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಯೋಜನಾ ನಿರ್ದೇಶಕಿ ವೈಶಾಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಾಂತಮ್ಮ, ಜಿಲ್ಲಾ ಮಟ್ಟದ ವಿವಿಧ ಇಲಾಖಾಧಿಕಾರಿಗಳು, ಕುರುಬ ಸಮಾಜದ ಜಿಲ್ಲಾ ಅಧ್ಯಕ್ಷರು, ಪದಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಕೃಷಿ ಉತ್ಸವ ಇಂದು
ರಾಮನಗರ: ಜಿಲ್ಲಾಡಳಿತದಿಂದ ನ.13ರ ಬೆಳಗ್ಗೆ 11ಕ್ಕೆ ಕನಕಪುರದ ರೂರಲ್ ಕಾಲೇಜು ಮೈದಾನದಲ್ಲಿ ಕೃಷಿ ಉತ್ಸವ ಏರ್ಪಡಿಸಲಾಗಿದೆ. ಉತ್ಸವವನ್ನು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಉದ್ಘಾಟಿಸುವರು. ಶಾಸಕ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆ ವಹಿಸುವರು. ಸಂಸದ ಡಿ.ಕೆ.ಸುರೇಶ್, ಸಚಿವರಾದ ಟಿ.ಬಿ.ಜಯಚಂದ್ರ, ಕೃಷ್ಣಬೈರೇಗೌಡ, ವಿಧಾನಸಭೆ ವಿರೋಧ ಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ, ಶಾಸಕರಾದ ಸಿ.ಪಿ.ಯೋಗೇಶ್ವರ್, ಎಚ್.ಸಿ.ಬಾಲಕೃಷ್ಣ, ಕೆ.ಶ್ರೀನಿವಾಸಮೂರ್ತಿ, ವಿಧಾನಪರಿಷತ್ ಸದಸ್ಯರಾದ ರಾಮಚಂದ್ರಗೌಡ, ಎಂ.ವಿ.ರಾಜಶೇಖರನ್, ಪುಟ್ಟಣ್ಣ, ಇ.ಕೃಷ್ಣಪ್ಪ, ಸೈಯದ್ ಮುದೀರ್ ಆಗಾ, ಜಿಪಂ. ಅಧ್ಯಕ್ಷ ಎಚ್.ಸಿ.ರಾಜು, ಉಪಾಧ್ಯಕ್ಷೆ ಎಸ್.ಬಿ.ಗೌರಮ್ಮ, ಕನಕಪುರ ತಾಪಂ ಅಧ್ಯಕ್ಷೆ ನಾಗರತ್ನಮ್ಮ, ಉಪಾಧ್ಯಕ್ಷ ಲೋಕೇಶ್ ಮತ್ತಿತರರು ಭಾಗವಹಿಸುವರು.
ಅರ್ಜಿ ಆಹ್ವಾನ
ರಾಮನಗರ: 2012-13ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ, ಪಿಯುಸಿ ಹಾಗೂ ಅಂತಿಮ ಪದವಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಮಾಗಡಿ ತಾಲೂಕಿನ ಕುರುಬ ಸಮಾಜದ ವಿದ್ಯಾರ್ಥಿಗಳಿಗೆ ಮಾಗಡಿ ತಾಲೂಕು ಕುರುಬ ಸಂಘದಿಂದ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು. ವಿದ್ಯಾರ್ಥಿಗಳು ತಮ್ಮ ಸ್ವವಿವರ ಹಾಗೂ ಅಂಕಪಟ್ಟಿಗಳ ಪ್ರತಿಯನ್ನು ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಶಿವಕುಮಾರ್ಗೆ ನ.16 ರೊಳಗೆ ತಲುಪಿಸುವುದು. ಮಾಹಿತಿಗೆ ಮೊ.94483-32962, 99645-44012 ಸಂಪರ್ಕಿಸಬಹುದು.
'ಶಿಕ್ಷಕರು ಶಿಕ್ಷಣದ ಅಭಿವೃದ್ಧಿಗೆ ಶ್ರಮಿಸಲಿ'
ಶಿರಾ: ಶಿಕ್ಷಕರು ಸರಿಯಾದ ಸಮಯಕ್ಕೆ ಶಾಲೆಗೆ ಆಗಮಿಸಿ ಮಕ್ಕಳ ಕಲಿಕ ಕಾರ್ಯದಲ್ಲಿ ಭಾಗವಹಿಸಿ ಮಕ್ಕಳ ಶಿಕ್ಷಣದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕ್ಷೇತ್ರ ಶಿಕ್ಷಮಾಧಿಕಾರಿ ಎಸ್.ರಾಜ್ಕುಮಾರ್ ತಿಳಿಸಿದರು. ಅವರು ತಾಲೂಕಿನ ಕಳ್ಳಂಬೆಳ್ಳದಲ್ಲಿ ಹೋಬಳಿ ಮಟ್ಟದ, ಗುರುಸ್ಪಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ನಮ್ಮ ಕಚೇರಿಯೆ ನಿಮ್ಮ ಬಳಿ ಬಂದಿದೆ. ಶಿಕ್ಷಕರು ಶಾಲೆ ಬಿಟ್ಟು ವಿನಾಕಾರಣ ಕಚೇರಿ ಬಳಿ ಬರುವುದು ಬೇಡ ಎಂದ ಅವರು ಶಿಕ್ಷಕರ ಯಾವುದೇ ಲೋಪದೋಷಗಳು ಸೇವಾ ಪುಸ್ತಕದಲ್ಲಿ ಕಂಡು ಬಂದರೆ ಅವುಗಳನ್ನು ಸ್ಥಳದಲ್ಲಿಯೇ ಬಗೆಹರಿಸಿ ಒಂದು ಎಚ್.ಆರ್.ಎಂ.ಎಸ್. ಪ್ರತಿಯನ್ನು ಎಲ್ಲಾ ಶಿಕ್ಷಕರಿಗೂ ಕೊಡುತ್ತೇವೆ ಎಂದರು.
ಕಾನೂನು ಕಾಲೇಜಿಗೆ ಪ್ರಶಸ್ತಿ
ರಾಮನಗರ: ಹುಬ್ಬಳ್ಳಿಯ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹಾಗೂ ಬೆಂಗಳೂರಿನ ವಿ.ವಿ.ಪುರಂ ಕಾನೂನು ಕಾಲೇಜು ಸಂಯುಕ್ತಾಶ್ರಯದಲ್ಲಿ ಅ.26ರಂದು ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಯುವಜನೋತ್ಸವ ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆಯಲ್ಲಿ ಬಸವನಪುರದ ಸರ್ಕಾರಿ ಕಾನೂನು ಕಾಲೇಜು ವಿದ್ಯಾರ್ಥಿಗಳು ಪ್ರದರ್ಶಿಸಿದ ಭ್ರಷ್ಟಾಚಾರ ಕುರಿತು ಕಿರುನಾಟಕಕ್ಕೆ ಪ್ರಥಮ ಬಹುಮಾನ ಲಭಿಸಿದೆ. ಕಾಲೇಜಿನ 9ನೇ ಸೆಮಿಸ್ಟರ್ ವಿದ್ಯಾರ್ಥಿ ಡಿ.ಸಚಿನ್ 'ಸಮ್ಮಿಶ್ರ ಸರ್ಕಾರಗಳು ಭಾರತದ ಪ್ರಗತಿ ಮತ್ತು ಐಕ್ಯತೆಗೆ ಮಾರಕ' ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ. ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕ ಸಿಬ್ಬಂದಿ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

