ಬೆಂಗಳೂರು ಗ್ರಾಮಾಂತರ

ಪದಾಧಿಕಾರಿ ಆಯ್ಕೆ

Published On :

ದೊಡ್ಡಬಳ್ಳಾಪುರ: ದಲಿತ ಸಂಘಟನೆಗಳ ಒಕ್ಕೂಟದ ದೊಡ್ಡಬಳ್ಳಾಪುರ ತಾಲೂಕು ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದೆ. ರಾಜ್ಯಾಧ್ಯಕ್ಷ ಬಿ.ಆರ್. ಭಾಸ್ಕರ ಪ್ರಸಾದ್ ನೇತೃತ್ವದಲ್ಲಿ ಮತ್ತು ರಾಜ್ಯ ಸಂಚಾಲಕ ಒ.ಎಂ. ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಘಟನೆಯ ತಾಲೂಕು ಗೌರವ ಅಧ್ಯಕ್ಷರಾಗಿ ಶಿವಣ್ಣ- ರಾಮದೇವನಹಳ್ಳಿ, ಅಧ್ಯಕ್ಷರಾಗಿ ಚಲುವ ಹನುಮಯ್ಯ- ಹೊನ್ನಾಘಟ್ಟ, ಕಲ್ಲುಕುಂಟೆ ಗೋವಿಂದರಾಜು(ಉಪಾಧ್ಯಕ್ಷ), ಸಾಸಲು ರಾಮಚಂದ್ರಪ್ಪ(ಪ್ರಧಾನ ಕಾರ್ಯದರ್ಶಿ), ಕನ್ನಮಂಗಲ ವೆಂಕಟೇಶ್(ಖಜಾಂಚಿ), ವೀರಸ್ವಾಮಿ ಶಿರವಾರ(ಸಂಚಾಲಕ), ನರಸಪ್ಪ ಹನುಮಂತಪುರ, ಕದಿರಪ್ಪ ಲಕ್ಷ್ಮೀದೇವಿಪುರ, ನರಸಿಂಹಮೂರ್ತಿ ಶ್ರವಣೂರು, ನರಸಿಂಹರಾಜು ಕೆಸ್ತೂರು, ಗೋವಿಂದರಾಜು ಉಜ್ಜನಿ(ಸಹ ಕಾರ್ಯದರ್ಶಿಗಳು), ಅಡಕವಾಳದ ಸಿದ್ದಗಂಗಯ್ಯ, ತಳಗವಾರದ ಲೋಕೇಶ್, ಗಾಳಿಪೂಜೆಯ ಮುನಿಯಪ್ಪ, ಮಾದಗೊಂಡನಹಳ್ಳಿ ಪೂಜಪ್ಪ, ತೂಬಗೆರೆ ಮೂರ್ತಿ, ಗಂಗಾಧರ್, ಅಕ್ಕತಮ್ಮನಹಳ್ಳಿಯ ಮಂಜುನಾಥ್, ಸುತ್ತಹಳ್ಳಿಯ ರಾಮಾಂಜಿನಪ್ಪ, ಬೈಪನಹಳ್ಳಿಯ ಕೃಷ್ಣಮೂರ್ತಿ, ನಾಗರಾಜು, ಕುರುಬರಹಳ್ಳಿ ನಾರಾಯಣಸ್ವಾಮಿ(ಸಂಘಟನಾ ಕಾರ್ಯದರ್ಶಿಗಳು) ಆಯ್ಕೆಯಾಗಿದ್ದಾರೆ.

ಮಾಸಾಶನ ಪತ್ರ ವಿತರಣೆ
ಚನ್ನಪಟ್ಟಣ: ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲರ ವೇತನಗಳಿಗೆ ಬರುವ ಬಡವರನ್ನು ಅಲೆಸದೆ ತ್ವರಿತಗತಿಯಲ್ಲಿ ಮಂಜೂರು ಮಾಡಿಕೊಡಬೇಕೆಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಶಾಸಕ ಸಿ.ಪಿ. ಯೋಗೇಶ್ವರ್ ತಾಕೀತು ಮಾಡಿದರು. ತಾಲೂಕು ಕಚೇರಿಯಲ್ಲಿ ವಿರುಪಾಕ್ಷಿಪುರ ಹೋಬಳಿ ವ್ಯಾಪ್ತಿಯ ಮುನ್ನೂರಕ್ಕೂ ಹೆಚ್ಚು ಫಲಾನುಭವಿಗಳಿಗೆ ಮಾಸಾಶನ ಮಂಜೂರು ಪತ್ರಗಳನ್ನು ವಿತರಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ತಾಲೂಕಿನ ಕಂದಾಯ ಇಲಾಖೆ ಅಧಿಕಾರಿಗಳು ಉತ್ತಮವಾಗಿ ಈ ಯೋಜನೆಯನ್ನು ಜಾರಿಗೊಳಿಸುತ್ತಿರುವುದು ಶ್ಲಾಘನೀಯ. ಆದರೆ ನಾಡ ಕಚೇರಿಗಳಲ್ಲಿ ಕೆಲ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿರುವುದಾಗಿ ಆರೋಪಗಳು ಕೇಳಿಬರುತ್ತಿದ್ದು, ಅಂತವರಿಂದ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ ಆದ್ದರಿಂದ ಇಲಾಖೆ ಅವರನ್ನು ನಿಯಂತ್ರಿಬೇಕೆಂದು ತಾಕೀತು ಮಾಡಿದರು. ಬಡವರ ಬದುಕಿನ ಏಕೈಕ ಆಸರೆಯಾಗಿರುವ ಈ ಪರಿಣಾಮಕಾರಿಯಾಗಿ ಯೋಜನೆಯು ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೂ ಸಿಗುವಂತೆ ಮಾಡಬೇಕಿದ್ದು, ಅದಕ್ಕಾಗಿ ಇನ್ನು ಮುಂದೆ ತಾಲೂಕಿನ ಎಲ್ಲಾ ನಾಡ ಕಚೇರಿಗಳಿಗೂ ಪ್ರತಿ ತಿಂಗಳು ತಾವೇ ಖುದ್ದು ಭೇಟಿ ನೀಡಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ತಾ.ಪಂ. ಅಧ್ಯಕ್ಷೆ ಪವಿತ್ರಾ ಕೃಷ್ಣೇಗೌಡ, ತಹಸೀಲ್ದಾರ್ ಶಿವರುದ್ರಪ್ಪ, ಉಪ ತಹಸೀಲ್ದಾರ್ ಶಿವಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

ಪ್ರತಿಭಾ ಕಾರಂಜಿ ಕಾರ್ಯಕ್ರಮ
ಕನಕಪುರ: ತಾಲೂಕಿನ ಚಿಕ್ಕಲ್ಲಬಾಳು ಗ್ರಾಮದಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಿತು. ಸಮಾರಂಭದ ಉದ್ಘಾಟನೆಯನ್ನು ಶಿವಾನಂದ ಶಿವಾಚಾರ್ಯ ಸ್ವಾಮೀಜಿ ನೆರವೇರಿಸಿ ಆಶೀರ್ವಚನ ನೀಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿದ್ದಯ್ಯ ಅಧ್ಯಕ್ಷತೆ ವಹಿಸಿದ್ದರು. ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿಯಲ್ಲಿ 30ಕ್ಕೂ ಹೆಚ್ಚು ಪ್ರಾಥಮಿಕ ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು 20ಕ್ಕೂ ಹೆಚ್ಚು ವಿವಿಧ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದರು.

ಸೌಲಭ್ಯ ಉಪಯೋಗಿಸಿ
ನೆಲಮಂಗಲ: ವಿದ್ಯಾರ್ಥಿಗಳು ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಹೇಳಿದರು. ಅವರು ಶನಿವಾರ  ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಿಸಿ ಮಾತನಾಡುತ್ತಾ ವಿದ್ಯಾಭ್ಯಾಸಕ್ಕೆ ಅಗತ್ಯವಾಗುವಂತಹ ವಿಚಾರಗಳನ್ನು ವಿದ್ಯಾರ್ಥಿಗಳು ಪರಸ್ಪರ ವಿನಿಮಯ ಮಾಡಿಕೊಂಡು ಸಾಧನೆಯ ಗುರಿ ತಲುಪಿ ಶಾಲೆಗೆ ಉತ್ತಮ ಹೆಸರು, ಕೀರ್ತಿ ತರಬೇಕೆಂದು ತಿಳಿಸಿದರು.

ಗ್ರಂಥಾಲಯ ಸಪ್ತಾಹ, ಪುಸ್ತಕ ಪ್ರದರ್ಶನ
ಕನಕಪುರ: ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಎಎಸ್, ಐಎಎಸ್, ಬ್ಯಾಂಕಿಂಗ್, ರೇಲ್ವೆ ಮೊದಲಾದ ಪರೀಕ್ಷೆಗಳಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳೂ ಹೆಚ್ಚಾಗಿ ಸ್ಪರ್ಧಿಸಲು ಅನುಕೂಲವಾಗುವಂತೆ ಸಾರ್ವಜನಿಕ ಗ್ರಂಥಾಲಯಗಳಿಗೆ ಹೆಚ್ಚುವರಿ ಪುಸ್ತಕಗಳನ್ನು ಒದಗಿಸುವುದಾಗಿ ಜಿಲ್ಲಾ ಗ್ರಂಥಪಾಲಕ ಕೃಷ್ಣಮೂರ್ತಿ ಹೇಳಿದ್ದಾರೆ. ಕನಕಪುರದ ಸಾರ್ವಜನಿಕ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಹಾಗೂ ಪುಸ್ತಕ ಪ್ರದರ್ಶನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉದ್ಘಾಟನೆಯನ್ನು ಮಾಜಿ ಪುರಸಭಾ ಸದಸ್ಯೆ ಪ್ರಮೀಳಾ ನೆರವೇರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.