ಬೆಂಗಳೂರು ಗ್ರಾಮಾಂತರ

ಬೃಹತ್ ಮಾನವ ಸರಪಳಿ ಜಾಥಾ

Published On :

ರಾಮನಗರ: ಲೋಕಸಭಾ ಚುನಾವಣೆಯಲ್ಲಿ ಮತದಾರರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲು ಹಾಗೂ ಮತದಾರರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಲು ಜಿಲ್ಲಾ ಸ್ವೀಪ್ ಸಮಿತಿಯಿಂದ ಜಾನಪದ ಲೋಕದಿಂದ ಚನ್ನಪಟ್ಟಣದ ಕೆಂಗಲ್‌ವರೆಗೆ ಬೃಹತ್ ಮಾನವ ಸರಪಳಿ ಜಾಥಾ ನಡೆಯಿತು.
ಜಾಥಾಗೆ ಚಾಲನೆ ನೀಡಿದ ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾತನಾಡಿ, ಏಪ್ರಿಲ್ 17ರಂದು ನಡೆಯಲಿರುವ ಲೋಕಸಭಾ ಚುನಾಣೆಯಲ್ಲಿ 18 ವರ್ಷಕ್ಕೆ ಮೇಲ್ಪಟ್ಟ ಎಲ್ಲರೂ ತಪ್ಪದೇ ಮತ ಚಲಾಯಿಸಬೇಕು ಕರೆ ನೀಡಿದರು.
ಇಡೀ ದೇಶದಲ್ಲಿಯೇ ಹಿಂದೆದೂ ಆಗದ ರೀತಿಯಲ್ಲಿ ಮಾನವ ಸರಪಳಿ ಜಾಥಾವನ್ನು ರಾಮನಗರದಲ್ಲಿ ಆಯೋಜಿಸಲಾಗಿದೆ. ಪ್ರತಿಯೊಬ್ಬ ಮತದಾರ ಮತ ಚಲಾಯಿಸುವ ಮೂಲಕ ಸುಭದ್ರ ಸರ್ಕಾರ ತನ್ಮೂಲಕ ಭವ್ಯ ಭಾರತದ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಹಕ್ಕು ಬಳಸಿಕೊಳ್ಳಿ: ನಮ್ಮದು ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡಿರುವ ದೇಶ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ಹೀಗಾಗಿ ಪ್ರತಿಯೊಬ್ಬರೂ ಮತದಾನದ ಹಕ್ಕನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಡಾ.ವೆಂಕಟೇಶ್ ತಿಳಿಸಿದರು.
ಎಲ್ಲಾ ಮತದಾರರು ತಾವು ಮತ ಚಲಾಯಿಸುವುದಲ್ಲದೆ, ತಮ್ಮ ನೆಂಟರಿಷ್ಟರು, ಸ್ನೇಹಿತರನ್ನೂ ಮತದಾನಕ್ಕೆ ಪ್ರೇರೇಪಿಸಬೇಕು. ಆಮಿಷ, ಜಾತಿ, ಧರ್ಮ, ರಾಗದ್ವೇಷಗಳಿಗೆ ಒಳಗಾಗದೆ ಮತ ಚಲಾಯಿಸಿ ಸುಭದ್ರ ಸರ್ಕಾರದ ಪಾಲುದಾರರಾಗಬೇಕೆಂದರು.
ನೈತಿಕ ಮತದಾನ: ಚುನಾವಣಾ ಆಯೋಗವು ನೈತಿಕ ಮತದಾನವನ್ನು ಜಾರಿಗೆ ತಂದಿದ್ದು,  ಮತದಾನದ ಮೂಲಕ ಭಾರತದ ಅಭಿವೃದ್ಧಿಗೆ ಎಲ್ಲರೂ ಕೊಡುಗೆ ನೀಡುಬೇಕೆಂದು ಎಂದು ಡಾ.ವಿಶ್ವನಾಥ್ ಕಿವಿಮಾತು ಹೇಳಿದರು.
ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ದೇಶದಲ್ಲಿ 81 ಕೋಟಿ ಮತದಾರರಿದ್ದಾರೆ. ಮತ ಚಲಾಯಿಸುವ ಹಕ್ಕಿನ ಶಕ್ತಿ, ಮುಕ್ತ, ನ್ಯಾಯಸಮ್ಮತ ಚುನಾವಣೆಯಿಂದ ಪ್ರಜಾಪ್ರಭುತ್ವದ ಘನತೆಯನ್ನು ಎತ್ತಿ ಹಿಡಿಯಬಹುದಾಗಿದೆ ಎಂದರು.
ಒಂದೊಂದು ಮತವೂ ಮುಖ್ಯ: ನಾವು ಚಲಾಯಿಸುವ ಮತ ಕತ್ತಿಗಿಂತ ಹರಿತವಾದುದು. ಎಷ್ಟೋ ಬಾರಿ ಕೆಲ ಅಭ್ಯರ್ಥಿಗಳು ಒಂದು ಮತದ ಅಂತರದಲ್ಲಿ ಪರಾಭವಗೊಂಡಿದ್ದಾರೆ. ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲು ಮತದಾನ ನಮಗೆ ವರದಾನವಾಗಿದೆ ಎಂದು ತಿಳಿಸಿದರು.  
ಶೌಚಾಲಯಕ್ಕೆ ಆದ್ಯತೆ ನೀಡಿ:  ಪ್ರತಿ ಕುಟುಂಬವೂ ಶೌಚಾಲಯ ಹೊಂದುವುದಕ್ಕೆ ಆದ್ಯತೆ ನೀಡಬೇಕು. ಮುಂದಿನ ವರ್ಷದೊಳಗೆ ಪ್ರತಿಯೊಬ್ಬರೂ  ಶೌಚಾಲಯ ಹೊಂದುವುದಾಗಿ ಶಪಥ ಮಾಡಬೇಕು. ಶೌಚಾಲಯದಿಂದ ಆಗುವ ಅನುಕೂಲ,  ಶೌಚಾಲಯ ಇಲ್ಲದಿದ್ದರೆ ಆಗುವ ಅನಾನುಕೂಲಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಯುವ ಸಮುದಾಯ ಮುಂದಾಗಬೇಕು ಎಂದು ವೆಂಕಟೇಶ್ ತಿಳಿಸಿದರು.  
ಜಾಥಾದಲ್ಲಿ ಜಿ.ಪಂ. ಯೋಜನಾಧಿಕಾರಿ ಧನುಷ್, ಡಿಡಿಪಿಐ ಪ್ರಹ್ಲಾದಗೌಡ, ಡಿಡಿಪಿಯು ಲಿಂಗರಾಜು, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಹಮೀದ್ ಖಾನ್, ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡು ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.