ಮತಯಾಚನೆಯ ಹೈಟೆಕ್ ಪ್ರಚಾರ
ಮೊಬೈಲ್ ಕರೆ, ಎಸ್ಎಂಎಸ್, ವ್ಯಾಟ್ಸಪ್, ಇಮೇಲ್ ಸಂದೇಶಗಳ ಮೂಲಕ ಸಂದೇಶ ರವಾನೆ
-ಮತ್ತೀಕೆರೆ ಜಯರಾಮ್
ರಾಮನಗರ: ಲೋಕಸಭೆ ಚುನಾವಣೆಯ ಮತದಾನಕ್ಕೆ ದಿನಗಣನೆ ಪ್ರಾರಂಭವಾಗುತ್ತಿದ್ದಂತೆಯೇ ಮೊಬೈಲ್ ಕರೆ, ಎಸ್ಎಂಎಸ್, ವ್ಯಾಟ್ಸಪ್, ಇಮೇಲ್ ಸಂದೇಶಗಳ ಮೂಲಕವೂ ಮತಯಾಚನೆಯ ಹೈಟೆಕ್ ಪ್ರಚಾರ ರಂಗೇರುತ್ತಿದೆ.
ಸ್ವತಃ ಅಭ್ಯರ್ಥಿಗಳು ಮಾತನಾಡಿರುವ ಧ್ವನಿಮುದ್ರಿತ ಕರೆಗಳು ಕ್ಷೇತ್ರ ವ್ಯಾಪ್ತಿಯ ಮತದಾರರ ಮೊಬೈಲ್ಗಳಿಗೆ ಕೇಳಿ ಬರುತ್ತಿವೆ. ಅಭ್ಯರ್ಥಿಗಳು ಮತ್ತು ಪಕ್ಷದ ಪರವಾಗಿ ಪ್ರಮುಖ ನಾಯಕರಿಂದ ಮತ ಭಿಕ್ಷೆ ಬೇಡುವ ಸಂದೇಶಗಳೂ ಹರಿದಾಡುತ್ತಿವೆ.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಈ ಮೂರು ಪ್ರಮುಖ ಪಕ್ಷಗಳು ಮತ್ತು ಅಭ್ಯರ್ಥಿಗಳ ಪರವಾಗಿ ಹೈಟೆಕ್ ಮತಯಾಚನೆ ಸಾಗಿದೆ. ಪಕ್ಷ ಇಲ್ಲವೇ ನಾಯಕರ ಅಭಿಮಾನಿಗಳು ತಮ್ಮದೇ ರೀತಿಯ ಸಂದೇಶಗಳನ್ನು ರವಾನಿಸುತ್ತಿದ್ದಾರೆ.
ಪ್ರಚಾರದಲ್ಲಿ ಮುಂದು: ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರ ಧ್ವನಿಮುದ್ರಿತ ಕರೆಗಳು ಬಹುತೇಕರ
ಮೊಬೈಲ್ಗಳಿಗೆ ಬಂದಿದ್ದು, ಉಪ ಚುನಾವಣೆಯಲ್ಲಿ ಗೆಲ್ಲಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಸಾಧನೆಗಳನ್ನು ನೋಡಿ, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ತಮ್ಮನ್ನೇ ಬೆಂಬಲಿಸಿ, ಆಶೀರ್ವದಿಸಿ ಎಂದು ಕೋರುತ್ತಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಹೆಸರಿನಲ್ಲಿ ಮೊಬೈಲ್ಗಳಿಗೆ ಬರುತ್ತಿರುವ ಸಂದೇಶದಲ್ಲಿ ಜೆಡಿಎಸ್ಗೆ ಮತ ನೀಡಿ, ಸಮಗ್ರ ಕರ್ನಾಟಕದ ಹಿತಕ್ಕಾಗಿ ನಮ್ಮ ಕೈಬಲಪಡಿಸಿ ಎನ್ನುವ ಕಳಕಳಿಯ ಮನವಿಯಿದೆ. ಬಿಜೆಪಿಯಿಂದಲೂ ಇಂತಹ ಕರೆ, ಸಂದೇಶಗಳಿಗೆ ಕೊರತೆಯಿಲ್ಲ.
ನೇತಾರರ ಪರ ಸಂದೇಶ: ರಾಜಕೀಯ ಕಾರ್ಯಕರ್ತರಲ್ಲದ ಮತ್ತು ಪಕ್ಷ ಇಲ್ಲವೇ ನಾಯಕರ ಅಭಿಮಾನಿಗಳಾದವರೂ ಸಂದೇಶಗಳನ್ನು ಕಳುಹಿಸುವುದರಲ್ಲಿ ನಿರತರಾಗಿದ್ದಾರೆ.
ನರೇಂದ್ರಮೋದಿ ಪ್ರಧಾನಿ ಆಗಬೇಕೆಂದು ಅದೆಷ್ಟೋ ಮಂದಿ ವ್ಯಾಟ್ಸಪ್, ಎಸ್ಎಂಎಸ್ ಸಂದೇಶಗಳನ್ನು ಹರಿಯಬಿಡುತ್ತಿದ್ದಾರೆ.
ಮೂರು ಸಾವಿರ ಕಿ.ಮೀ. ದೂರದ ಮೋದಿಯೋ, ರಾಹುಲ್ ಗಾಂಧಿಯೋ ಪ್ರಧಾನಿ ಆಗುವ ಬದಲು ನಮ್ಮಲ್ಲೇ ಇರುವ ದೇವೇಗೌಡ ಅವರು ಪ್ರಧಾನಿ ಆಗುವುದು ಸೂಕ್ತ. ಹೀಗಾಗಿ ಜೆಡಿಎಸ್ ಪಕ್ಷಕ್ಕೆ ಮತ ನೀಡಿ ಎಂದು ಕೆಲವರು ಸಂದೇಶಗಳನ್ನು ಕಳಹಿಸುತ್ತಿದ್ದಾರೆ.
ಕಾಮೆಂಟ್ಸ್ಗಳೂ ಹೆಚ್ಚು
ಎಚ್.ಡಿ.ಕುಮಾರಸ್ವಾಮಿ ಕ್ಷೇತ್ರಾಂತರ, ಎಚ್ಡಿಕೆ ಮತ್ತು ಡಿಕೆಶಿ ವಾಕ್ಸಮರ, ಪ್ರಮುಖ ನಾಯರ ಟೀಕಾರೋಪಗಳ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರತಿಕ್ರಿಯೆಗಳು ನಿರಂತರವಾಗಿ ವ್ಯಕ್ತವಾಗುತ್ತಿವೆ. ಸಾಮಾಜಿಕ ಜಾಲ ತಾಣಗಳಲ್ಲಿ ರಾಜಕಾರಣಿಗಳ ಅಭಿಪ್ರಾಯಕ್ಕೆ ತೀಕ್ಷ್ಣ ಪ್ರತಿಕ್ರಿಯೆ, ಪ್ರತ್ಯುತ್ತರಗಳೂ ವ್ಯಕ್ತವಾಗುತ್ತಿವೆ. ಹೀಗೆ ಹೈಟೆಕ್ ಪ್ರಚಾರ, ಜಟಾಪಟಿಯೂ ಈ ಬಾರಿ ಚುನಾವಣೆಯಲ್ಲಿ ತಾರಕ್ಕೇರಿರುವುದಂತೂ ನಿಜ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

