ಬೆಂಗಳೂರು ಗ್ರಾಮಾಂತರ

ಬೆಂ. ಗ್ರಾಮಾಂತರ ಮತದಾನ ಏರಿಕೆ

Published On :

ಕ.ಪ್ರ.ವಾರ್ತೆ ರಾಮನಗರ ಮಾ. 17
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ 2190159 ಮತದಾರರ ಪೈಕಿ 1455174 ಮಂದಿ ಮತ ಚಲಾಯಿಸಿದ್ದಾರೆ. ಈ ಕ್ಷೇತ್ರದ ಮತದಾನ ಪ್ರಮಾಣ ಶೇಕಡ 66.44 ಆಗಿದೆ ಎಂದು ಚುನಾವಣಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ತಿಳಿಸಿದ್ದಾರೆ.
1135666 ಪುರುಷರ ಪೈಕಿ 758651, 1054232 ಮಹಿಳೆಯರ ಪೈಕಿ 696511 ಮತ್ತು 261 ಇತರರಲ್ಲಿ 12 ಮಂದಿ ಮತ ಚಲಾವಣೆ ಮಾಡಿದ್ದಾರೆ. ಮಾಗಡಿ ಕ್ಷೇತ್ರದಲ್ಲಿ ಅತ್ಯಧಿಕ ಅಂದರೆ ಶೇಕಡ 78.76, ಬೆಂಗಳೂರು ದಕ್ಷಿಣದಲ್ಲಿ ಅತಿ ಕಡಿಮೆ ಅಂದರೆ ಶೇಕಡ 54.22ರಷ್ಟು ಮತದಾನವಾಗಿದೆ.
ರಾಜರಾಜೇಶ್ವರಿ ನಗರದಲ್ಲಿ ಶೇಕಡ 56.13, ಆನೇಕಲ್ ಕ್ಷೇತ್ರದಲ್ಲಿ ಶೇಕಡ 62.30, ಕುಣಿಗಲ್ ಕ್ಷೇತ್ರದಲ್ಲಿ ಶೇಕಡ 76.56, ರಾಮನಗರದಲ್ಲಿ ಶೇಕಡ 77.55, ಕನಕಪುರದಲ್ಲಿ ಶೇಕಡ 78.51, ಚನ್ನಪಟ್ಟಣದಲ್ಲಿ ಶೇಕಡ 77.03ರಷ್ಟು ಮತ ಚಲಾವಣೆಯಾಗಿದೆ.
ರಾಮನಗರದಲ್ಲೇ ಅಧಿಕ: ರಾಮನಗರ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಒಟ್ಟಾರೆ ಶೇಕಡ 77.96 ಮತದಾನವಾಗಿದ್ದು, ಇಲ್ಲಿನ ಚಲಾಯಿತ ಮತಗಳು 643339. ಶೇಕಡ 57.55ರಷ್ಟು ಮತದಾನವಾಗಿರುವ ಬೆಂಗಳೂರು ನಗರ ಜಿಲ್ಲೆಯ ಮತಗಳು 676153 ಆಗಿವೆ. ಕ್ಷೇತ್ರದ ಮತದಾನ ಪ್ರಮಾಣ ಉಪ ಚುನಾವಣೆಗಿಂತ ಶೇಕಡ 21.40ರಷ್ಟು ಅಧಿಕವಾಗಿದೆ. ಉಪ ಚುನಾವಣೆಯಲ್ಲಿ ಶೇಕಡ 51.97ರಷ್ಟು ಮತದಾನ ವಾಗಿತ್ತು. ಉಪ ಚುನಾವಣೆಗೆ ಹೋಲಿಸಿದರೆ ಕುಣಿಗಲ್ ಕ್ಷೇತ್ರದಲ್ಲಿ ಶೇಕಡ 10.17, ರಾಜರಾಜೇಶ್ವರಿ ನಗರದಲ್ಲಿ ಶೇಕಡ 23.25, ಬೆಂಗಳೂರು ದಕ್ಷಿಣದಲ್ಲಿ ಶೇಕಡ 23.49 ರಷ್ಟು ಮತದಾನ ಏರಿಕೆಯಾಗಿದೆ.
ಆನೇಕಲ್ ಕ್ಷೇತ್ರದಲ್ಲಿ ಶೇಕಡ 16.40  ಮಾಗಡಿಯಲ್ಲಿ ಶೇಕಡ 8.53, ರಾಮನಗರದಲ್ಲಿ ಶೇಕಡ 6.39, ಕನಕಪುರದಲ್ಲಿ ಶೇಕಡ 5.22 ಮತ್ತು ಚನ್ನಪಟ್ಟಣದಲ್ಲಿ ಶೇಕಡ 8.13ರಷ್ಟು ಮತದಾನ ಪ್ರಮಾಣ ಏರಿಕೆಯಾಗಿರುವುದು ಗಮನಾರ್ಹ ಸಂಗತಿ. ಆದರೆ, ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಮತ ಪ್ರಮಾಣ ಕುಗ್ಗಿದೆ.   

ಮತ ಯಂತ್ರಗಳು ಭದ್ರ
ಕಳೆದ ಉಪ ಚುನಾವಣೆ ಮತ್ತು ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕನಕಪುರ ಮಟ್ಟಿಗೆ ಸಾಕಷ್ಟು ಅದ್ವಾನಗಳು ಸಂಭವಿಸಿದ್ದವು. ಆದರೆ, ಈ ಬಾರಿ ಮಧ್ಯರಾತ್ರಿ ವೇಳೆಗೆ ಎಲ್ಲ ಮತಯಂತ್ರಗಳು ಮಸ್ಟರಿಂಗ್ ಮತ್ತು ಎಣಿಕೆ ಕೇಂದ್ರವಾದ ರಾಮನಗರದ ಎಂಜಿನಿಯರಿಂಗ್ ಕಾಲೇಜು ತಲುಪಿವೆ. ಮತಯಂತ್ರಗಳ ಸಾಗಣೆ ವಿಷಯದಲ್ಲಿ ಎಲ್ಲೂ ಗೊಂದಲಗಳಿಗೆ ಆಸ್ಪದವಿರಲಿಲ್ಲ. ಸಾಕಷ್ಟು ಭದ್ರತೆಯೊಂದಿಗೆ ಎಲ್ಲ 2497 ಮತಗಟ್ಟೆಗಳಿಂದ ತರಲಾದ ವಿದ್ಯುನ್ಮಾನ ಮತಯಂತ್ರಗಳನ್ನು ಸ್ಟ್ರಾಂಗ್ ರೂಂನಲ್ಲಿರಿಸಿ, ಬೀಗಮುದ್ರೆ ಹಾಕಲಾಗಿದೆ.  ಮತ ಯಂತ್ರಗಳಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಿರಂತರ ವಿದ್ಯುತ್, ತುರ್ತು ಸಂದರ್ಭಕ್ಕೆಂದು ಜನರೇಟರ್ ಸೌಲಭ್ಯ ಒದಗಿಸಲಾಗಿದೆ. ಪ್ಯಾರಾ ಮಿಲಿಟರಿ, ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ.  ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಅವರು ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಹಾಜರಿದ್ದು, ಸಹಾಯಕ ಚುನಾವಣಾಧಿಕಾರಿಗಳಿಂದ ಖುದ್ದು ಮಾಹಿತಿ ಪಡೆದರು. ನಂತರ ಮತಯಂತ್ರಗಳ ಶೇಖರಣೆ ಪ್ರಕ್ರಿಯೆ ಮತ್ತು ಬಂದೋಬಸ್ತ್ ಪರಿಶೀಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.