ರಸಗೊಬ್ಬರ ಅಭಾವ ಬಾರದಿರಲಿ
ಕ.ಪ್ರ.ವಾರ್ತೆ, ರಾಮನಗರ, ಜೂ.11
ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಅಭಾವ ತಲೆದೋರದಂತೆ ಕ್ರಮ ಕೈಗೊಳ್ಳುವಂತೆ ಜಿಪಂ ಅಧ್ಯಕ್ಷ ಎಚ್.ಸಿ.ರಾಜು ಅವರು ಕೃಷಿ ಇಲಾಖೆಗೆ ತಾಕೀತು ಮಾಡಿದ್ದಾರೆ.
ಜಿ.ಪಂ. ಸಭಾಂಗಣದಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೃಷಿ ಇಲಾಖೆ ಕಾರ್ಯಕ್ರಮಗಳ ಅನುಷ್ಠಾನದ ಮೇಲಿನ ಚರ್ಚೆ ವೇಳೆ ಅಧಿಕಾರಿಗಳಿಗೆ ಈ ಸೂಚನೆ ನೀಡಿದರು. ಮುಂಗಾರಿನಲ್ಲಿ 3670 ಕ್ವಿಂಟಾಲ್ ಬಿತ್ತನೆ ಬೀಜದ ಬೇಡಿಕೆ ಇದ್ದು, ಸದ್ಯ ದಾಸ್ತಾನಿರುವ ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ಬೇಡಿಕೆಯಷ್ಟು ಸರಬರಾಜಿಗೆ ಕೋರಿಕೆ ಸಲ್ಲಿಸಲಾಗಿದೆ. 26,776 ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ ಇದ್ದು, 2350 ಮೆಟ್ರಿಕ್ ಟನ್ ದಾಸ್ತಾನಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಣ್ಣಯ್ಯ ವಿವರಿಸಿದರು. ರಾಮನಗರ ಜಿಲ್ಲೆಯಲ್ಲಿ 1.19 ಲಕ್ಷ ಹೆಕ್ಟೇರ್ ಕೃಷಿ ಪ್ರದೇಶವಿದ್ದು, 1930 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ಇದುವರೆಗಿನ ವಾಡಿಕೆ ಮಳೆ 261.3 ಮಿ.ಮೀ. ಆಗಿದ್ದು, 267.2 ಮಿ.ಮೀ. ಮಳೆ ಸುರಿದಿದೆ. ದ್ವಿದಳ ಧಾನ್ಯಗಳ ಬಿತ್ತನೆ ಕಾರ್ಯ ಪ್ರಾರಂಭವಾಗಿದೆ ಎಂದು ಅವರು ಹೇಳಿದರು. ಮಾಸಾಂತ್ಯಕ್ಕೆ ಗಡುವು: 2013-14 ನೇ ಸಾಲಿನಲ್ಲಿ ಬಸವ ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಳ್ಳಲು ಜಿಲ್ಲಾದ್ಯಂತ 2336 ಫಲಾನುಭವಿಗಳನ್ನು ಗುರ್ತಿಸಿದ್ದು, ಮನೆ ನಿರ್ಮಾಣ ಕೆಲಸ ಪ್ರಾರಂಭಕ್ಕೆ ಜೂ.30ರ ಗಡುವು ವಿಧಿಸಲಾಗಿದೆ. ನಿರ್ಮಾಣಕ್ಕೆ ಮುಂದಾಗದ ಫಲಾನುಭವಿಗಳ ಆಯ್ಕೆ ರದ್ದುಪಡಿಸಲಾಗುವುದು ಎಂದು ಜಿಪಂ ಸಿಇಒ ಡಾ.ಎಂ.ವಿ.ವೆಂಕಟೇಶ್ ಸೂಚಿಸಿದರು.
ಮಾಹಿತಿ: ಜಿಲ್ಲೆಯಲ್ಲಿ ಶೇಕಡ 69 ರಷ್ಟು ಅಂದರೆ 1614 ಫಲಾನುಭವಿಗಳು ಮನೆ ನಿರ್ಮಾಣ ಕಾಮಗಾರಿ ಪ್ರಾರಂಭಿಸಿದ್ದಾರೆ. ಈ ಯೋಜನೆಯಲ್ಲಿ ಕನಕಪುರದಲ್ಲಿ ಶೇಕಡ 84, ಮಾಗಡಿಯಲ್ಲಿ 67, ರಾಮನಗರದಲ್ಲಿ 62 ಮತ್ತು ಚನ್ನಪಟ್ಟಣದಲ್ಲಿ ಅತಿ ಕಡಿಮೆ ಅಂದರೆ ಶೇಕಡ 59ರಷ್ಟು ಪ್ರಗತಿ ಕಾಣಲಾಗಿದೆ ಎಂದು ಸಿಪಿಒ ಎಸ್.ಧನುಷ್ ಮಾಹಿತಿ ನೀಡಿದರು.
ಇದರಿಂದ ಸಮಾಧಾನಗೊಳ್ಳದ ಅಧ್ಯಕ್ಷ ಎಚ್.ಸಿ.ರಾಜು, ಶೀಘ್ರವೇ ಎಲ್ಲ ತಾ.ಪಂ.ಗಳ ಕಾರ್ಯ ನಿರ್ವಹಣಾಧಿಕಾರಿಗಳ ಸಭೆ ಕರೆದು ಶೇ. 100ರಷ್ಟು ಗುರಿ ಸಾಧನೆಗೆ ಕ್ರಮ ಕೈಗೊಳ್ಳಬೇಕು. ಯೋಜನೆ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ಆಗದಿರಲು ಫಲಾನುಭವಿಗಳ ಆಯ್ಕೆಯಲ್ಲಿನ ಗೊಂದಲಗಳೂ ಕಾರಣ. ಈ ಬಗ್ಗೆ ಮುಂದೆ ಎಚ್ಚರಿಕೆ ವಹಿಸಿ ಎಂದರು.
ರಸ್ತೆ ದುರಸ್ತಿಪಡಿಸಿ: ಪಿ.ಎಂ.ಜಿ.ಎಸ್.ವೈ. ಅನುದಾನದಡಿ ಮಾಗಡಿ ತಾಲೂಕಿನಲ್ಲಿ ನಿರ್ಮಿಸಿರುವ ರಸ್ತೆಗಳು ಗುಂಡಿ ಬಿದ್ದಿದ್ದು, 5 ವರ್ಷಗಳವರೆಗೆ ಗುತ್ತಿಗೆದಾರರೇ ರಸ್ತೆಗಳನ್ನು ನಿರ್ವಹಣೆ ಮಾಡಬೇಕೆನ್ನುವ ಷರತ್ತು ಇದೆಯಾದರೂ ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಧನಂಜಯ ಆಕ್ಷೇಪಿಸಿದರು.
ನೊಟೀಸ್ ಜಾರಿಗೆ ಕ್ರಮ: ಅದಕ್ಕೆ ಪ್ರತಿಕ್ರಿಯಿಸಿದ ಸಿಇಒ ಡಾ.ವೆಂಕಟೇಶ್, ಪಿ.ಎಂ.ಜಿ.ಎಸ್.ವೈ. ಯೋಜನೆಯಡಿ ನಿರ್ಮಾಣವಾದ ರಸ್ತೆಗಳನ್ನು 5 ವರ್ಷದವರೆಗೆ ಗುತ್ತಿಗೆದಾರರೇ ನಿರ್ವಹಣೆ ಮಾಡಬೇಕು. ಇದಕ್ಕೆ ತಪ್ಪಿದಲ್ಲಿ ಸಂಬಂಧಿಸಿದ ಗುತ್ತಿಗೆದಾರನಿಗೆ ನೊಟೀಸ್ ಜಾರಿಗೊಳಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮುನ್ನೆಚ್ಚರಿಕೆ ವಹಿಸಿ: ಮುಂಗಾರು ಹಂಗಾಮಿನಲ್ಲಿ ಸೊಳ್ಳೆಗಳ ಹಾವಳಿ ಜತೆಗೆ ಚಿಕೂನ್ ಗೂನ್ಯ, ಡೆಂಘೀ, ಮಲೇರಿಯಾ ಸಹಿತ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗುವ ಸಂಭವವಿದೆ. ಈ ವಿಷಯವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅಧ್ಯಕ್ಷ ರಾಜು ಅವರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಘುನಾಥ್ ಅವರಿಗೆ ಆದೇಶಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ದೊಡ್ಡ ನೀರಿನ ತೊಟ್ಟಿಗಳಲ್ಲಿ ನೀರು ಸಂಗ್ರಹಣೆ ಮಾಡುತ್ತಿರುವುದರಿಂದ ಸೊಳ್ಳೆ ಲಾರ್ವ ಉತ್ಪತ್ತಿಗೊಳ್ಳುತ್ತಿವೆ. ಇವುಗಳ ನಿಯಂತ್ರಣಕ್ಕೆ ಗಾಂಬೂಷಿಯಾ ಮೀನು ಮರಿಗಳನ್ನು ಬಿಟ್ಟು, ನಿಯಂತ್ರಿಸಬಹುದು. ಮೀನು ಮರಿಗಳನ್ನು ಸರಬರಾಜು ಮಾಡುವಂತೆ ಮೀನುಗಾರಿಕೆ ಇಲಾಖೆಗೆ ಸೂಚಿಸಲು ರಘುನಾಥೆ ಕೋರಿಕೆ ಸಲ್ಲಿಸಿದರು. ಲಸಿಕಾ ಕಾರ್ಯಕ್ರಮದಡಿ ಶೇಕಡ 80 ಕ್ಕೂ ಹೆಚ್ಚು ಪ್ರಗತಿ ಸಾದಿಸಲಾಗಿದೆ. ಕ್ಷಯ ರೋಗದ 59 ಪ್ರಕರಣಗಳು ಪತ್ತೆಯಾಗಿವೆ. ಕಳೆದ 2 ವರ್ಷಗಳಿಂದ ಮಲೇರಿಯಾ ಪ್ರಕರಣಗಳು ಗಣನೀಯ ಇಳಿಮುಖವಾಗಿವೆ. ಆದರೆ, ಚಿಕೂನ್ ಗೂನ್ಯಾದ 2 ಪ್ರಕರಣಗಳು ಈಗಾಗಲೇ ವರದಿಯಾಗಿವೆ ಎಂದು ರಘುನಾಥ್ ವಿವರಿಸಿದರು.
ಮಾಹಿತಿ ಒದಗಿಸಿ: ಜಿಲ್ಲೆಯಲ್ಲಿ ಕೊರೆದಿರುವ ಕೊಳವೆ ಬಾವಿಗಳು, ವಿದ್ಯುತ್ ಸಂಪರ್ಕ ನೀಡಿರುವುದು, ಎಷ್ಟು ಕೊಳವೆ ಬಾವಿಗಳು ವಿಫಲವಾಗಿವೆ ಮತ್ತು ಎಷ್ಟು ಮೋಟಾರ್ ಪಂಪ್ ಕೆಟ್ಟಿವೆ ಎನ್ನುವುದರ ಸಮಗ್ರ ವಿವರವನ್ನು ಶೀಘ್ರ ನೀಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಅಧ್ಯಕ್ಷ ರಾಜು ನಿರ್ದೇಶನ ನೀಡಿದರು. ಈ ವಿಷಯವಾಗಿ ಮಾತನಾಡಿದ ಬೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ರ್ಮೇಶ್, ಅರ್ಜಿ ಸಲ್ಲಿಸಲಾದ 21 ದಿನದೊಳಗೆ ವಿದ್ಯುತ್ಸ್ಂಪರ್ಕ ಕಲ್ಪಿಸುತ್ತಿದ್ದೇವೆ. ಹಣ ಬಾಕಿ ಉಳಿಸಿಕೊಂಡ ಗ್ರಾ.ಪಂ.ಗಳ ವ್ಯಾಪ್ತಿಯ 13 ಕೊಳವೆ ಬಾವಿಗಳಿಗಷ್ಟೇ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ ಎಂದು ಸಭೆಗೆ ವಿವರಿಸಿದರು.
ಇತರೆ ವಿಷಯಗಳು: ವಿದ್ಯಾರ್ಥಿ ನಿಲಯಗಳಿಗೆ ಹಣ್ಣು, ಹಾಲು ಸರಬರಾಜು ವ್ಯವಸ್ಥೆಯನ್ನು ಉಪ ಗುತ್ತಿಗೆ ವಹಿಸಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಬೇಕು. ಟ್ಯಾಂಕರ್ಮೂಲಕ ನೀರು ಸರಬರಾಜಿನಲ್ಲಿ ಅವ್ಯವಹಾರ ತಡೆಗೆ ಜಿಪಿಎಸ್ ಅಳವಡಿಸಬೇಕು. ಅಂಗನವಾಡಿ ಸಿಬ್ಬಂದಿ, ಪಶು ವೈದ್ಯರ ಕೊರತೆ ನೀಗಿಸುವುದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶಿಸಲಾಯಿತು. ವಸೂಲಿ ತಡೆಗಟ್ಟಿ: ರಾಮನಗರದ ರೇಷ್ಮೆಗೂಡು ಮಾರುಕಟ್ಟೆ ಎದುರು ಸರ್ವಿಸ್ ರಸ್ತೆಯಲ್ಲೇ ಪಾರ್ಕಿಂಗ್ ತಲೆ ಎತ್ತಿದ್ದು, ಬೇನಾಮಿ ವ್ಯಕ್ತಿಗಳು ವಾಹನ ನಿಲುಗಡೆ ಮಾಡುವವರಿಂದ ಅನಧಿಕೃತವಾಗಿ ಶುಲ್ಕ ವಸೂಲು ಮಾಡುತ್ತಿರುವ ಬಗ್ಗೆ ಕ್ರಮ ಕೈಗೊಳ್ಳಿ ಎಂದು ರೇಷ್ಮೆ ಇಲಾಖೆ ಮತ್ತು ನಗರಸಭೆ ಅಧಿಕಾರಿಗಳಿಗೆ ಅಧ್ಯಕ್ಷ ಎಚ್.ಸಿ.ರಾಜು ಸೂಚನೆ ನೀಡಿದರು. ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಎಸ್.ಬಿ.ಗೌರಮ್ಮ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯಕುಮಾರ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

