ಬೆಂಗಳೂರು ಗ್ರಾಮಾಂತರ

ಮತಪಟ್ಟಿ ನೋಂದಣಿಗೆ ಅವಕಾಶ

Published On :

ರಾಮನಗರ: 1ನೇ ಜನವರಿ 2014ಕ್ಕೆ 18 ವರ್ಷ ಪೂರ್ಣಗೊಂಡ ಯುವಕರು ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ಸೇರಿಸಲು, ತಿದ್ದುಪಡಿ ಮಾಡಿಕೊಳ್ಳುವುದು, ಹೆಸರನ್ನು ತೆಗೆದು ಹಾಕುವುದು ಹಾಗೂ ವರ್ಗಾಯಿಸಿಕೊಳ್ಳಲು ಹೆಸರನ್ನು ತೆಗೆದು ಹಾಕುವುದು ಹಾಗೂ ವರ್ಗಾಯಿಸಿಕೊಳ್ಳಲು ಸಂಬಂಧಪಟ್ಟ ಮತದಾರರ ನೋಂದಣಾಧಿಕಾರಿ, ಸಹಾಯಕ ಮತದಾರರ ನೋಂದಣಾಧಿಕಾರಿ, ನಗರಸಭೆ ಅಥವಾ ತಹಸೀಲ್ದಾರ್ ಕಚೇರಿಯನ್ನು ಸಂಪರ್ಕಿಸಿ, ನಿಗದಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬಹುದು. ಆನ್ ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಬಮೂಲ್‌ಗೆ ಆರ್.ಕೆ. ರಮೇಶ್ ಆಯ್ಕೆ: ವಿಜಯೋತ್ಸವ
ಆನೇಕಲ್ಲು: ಬೆಂಗಳೂರು ಹಾಲು ಒಕ್ಕೂಟದ (ಬಮೂಲ್) ನೂತನ ಅಧ್ಯಕ್ಷರಾಗಿ ಆನೇಕಲ್ ತಾಲೂಕು ಹೆನ್ನಾಗರದ ಆರ್.ಕೆ. ರಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆ ಹಾಗೂ ರಾಮನಗರ ಜಿಲ್ಲೆಗಳ ನಿರ್ದೇಶಕರು ಮತ ಚಲಾಯಿಸಬಹುದಾದ ಬಮೂಲ್ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆದು ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆ ನಡೆಯಿತು.ರಮೇಶ್ ಅವರು ಸರ್ಕಾರದ ನಾಮ ನಿರ್ದೇಶಕ ಸದಸ್ಯರಾಗಿದ್ದು ಅಧ್ಯಕ್ಷ ಸ್ಥಾನ ಅಲಂಕರಿಸಲು ಕಾರಣರಾದ ಸಾರಿಗೆ ಸಚಿವ ಆರ್. ರಾಮಲಿಂಗಾರೆಡ್ಡಿ, ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.ಚಂದಾಪುರದಲ್ಲಿ ಶಾಸಕ ಬಿ. ಶಿವಣ್ಣ ಹಾಗೂ ಅಪಾರ ಅಭಿಮಾನಿಗಳಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ರಮೇಶ್ ಸತತ 14 ವರ್ಷಗಳಿಂದ ಬಮೂಲ್ ನಿರ್ದೇಶಕನಾಗಿ ಸೇವೆ ಸಲ್ಲಿಸಿದ್ದೇನೆ. ಹಿಂದಿನ ಅನುಭವ, ಸಹ ನಿರ್ದೇಶಕರ ಸಲಹೆ ಮತ್ತು ಮಾರ್ಗದರ್ಶನದಲ್ಲಿ ಒಕ್ಕೂಟವನ್ನು ಇನ್ನಷ್ಟು ಲಾಭ ದಾಯಕವಾಗಿ ಮುನ್ನಡೆಸುತ್ತೇನೆ. ಬಮೂಲ್ ಮಾರುಕಟ್ಟೆ ವಿಸ್ತರಣೆಗೆ ಅಧಿಕಾರಿ ಗಳ ಜೊತೆ ಚರ್ಚಿಸಿ ಹೊಸತನ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.ಚಂದಾಪುರ ವೃತ್ತದಲ್ಲಿ ನಡೆದ ವಿಜಯೋತ್ಸವ ರ್ಯಾಲಿಯಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಬ್ಲಾಕ್ ಅಧ್ಯಕ್ಷರಾದ ಚಂದ್ರಪ್ಪ, ರಾಜಣ್ಣ, ಗೋಪಾಲ್, ಜಿಪಂ ಸದಸ್ಯರಾದ ಪ್ರಭಾಕರ್, ಕೆ.ಸಿ.ರಾಮಚಂದ್ರ, ಗೋಪಾಲಕೃಷ್ಣ, ಹೆಚ್.ಎಸ್. ಬಸವರಾಜು, ಎನ್‌ಬಿಐ ನಾಗರಾಜು, ಗಟ್ಟಳ್ಳಿ ಸೀನಪ್ಪ ಮತ್ತಿತರರು ಇದ್ದರು.

ಕಂಪ್ಯೂಟರ್ ಕೋರ್ಸ್ ತರಬೇತಿ
ಬೆಂಗಳೂರು: ಪರಿಶಿಷ್ಟ ಜಾತಿಯ ವಿದ್ಯಾವಂತ ನಿರುದ್ಯೋಗಿ ಯುವಕ ಯುವತಿಯರು ಹಾಗೂ ಮಹಿಳೆಯರು ನಗರದ ಕಿಯೊನಿಕ್ಸ್, ಕಂಪ್ಯೂಟರ್ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ತರಬೇತಿಯಲ್ಲಿ ಮಲ್ಟಿಮೀಡಿಯಾ ಸಲ್ಯೂಷನ್ಸ್ ನೆಟ್‌ವರ್ಕ್ ಸಲ್ಯೂಷನ್ ಕೂಡಾ ಇದ್ದು, ಎಸ್‌ಎಸ್‌ಎಲ್‌ಸಿ, ಐಟಿಐ, ಡಿಪ್ಲೊಮಾ ಪದವಿ ತರಗತಿಗಳಲ್ಲಿ ಉತ್ತೀರ್ಣರಾಗಿರಬೇಕು. ನಗರ ಜಿಲ್ಲೆಗೆ ಸಂಬಂಧಿಸಿದ ಉತ್ತರ, ದಕ್ಷಿಣ, ಪೂರ್ವ ಮತ್ತು ಆನೇಕಲ್ ತಾಲ್ಲೂಕು ವ್ಯಾಪ್ತಿಗೊಳಪಡುವ ಪರಿಶಿಷ್ಟ ಜಾತಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿ 18-35 ವರ್ಷಗಳ ವಯೋವುತಿಯಲ್ಲಿರಬೇಕು. ವಾರ್ಷಿಕ ಆದಾಯ 2 ಲಕ್ಷ ಮೀರಿರಬಾರದು. ಸಮಾಜ ಕಲ್ಯಾಣ ಇಲಾಖೆಯಿಂದ ಯಾವುದೇ ತರಬೇತಿ ಪಡೆದಿರಬಾರದು. ಮೆರಿಟ್ ಆಧಾರದ ಮೇಲೆ ಆಯ್ಕೆ ನಡೆಯಲಿದೆ. ಮಾಹಿತಿಗಾಗಿ-ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಕಚೇರಿ, ಸಂಪಂಗಿರಾಮ ನಗರ, ಪೊಲೀಸ್ ಠಾಣೆ ಎದುರು, ಬೆಂಗಳೂರು ನಗರ ಜಿಲ್ಲೆ.

ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ
ಬೆಂಗಳೂರು: ವಕೀಲರು ನ್ಯಾಯಾಲಯ, ಕೇಸುಗಳನ್ನು ಬದಿಗೊತ್ತಿ ಸಾಹಿತ್ಯ, ರಂಗಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಬೇಕು ಎಂದು ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಎ.ಜೆ.ಸದಾಶಿವ ಹೇಳಿದರು. ಬೆಂಗಳೂರು ವಕೀಲರ ಸಾಹಿತ್ಯ ಕೂಟ ಬುಧವಾರ ವಕೀಲರ ಭವನದಲ್ಲಿ ಏರ್ಪಡಿಸಿದ್ದ 2014-17ರ ಸಾಲಿನ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ವಕೀಲರು ಕೋರ್ಟು, ಕಚೇರಿ, ಕೇಸು ಎಂದು ಸದಾ ಬಿಡುವಿಲ್ಲದಂತಿರುತ್ತಾರೆ. ಹಾಗಾಗಿ ಅವರಿಗೆ ಬೇರೆ ಕಡೆ ಗಮನಹರಿಸಲು ಸಾಧ್ಯವಾಗುವುದಿಲ್ಲ. ಸದಾ ಇದೇ ಗುಂಗಿನಲ್ಲಿ ಇರುವ ವಕೀಲರು ಕೊಂಚ ಬಿಡುವು ಮಾಡಿಕೊಂಡು ರಂಗಭೂಮಿ ಹಾಗೂ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಈ ಮೂಲಕ ತಮ್ಮಲ್ಲಿರುವ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು. ಈ ಮೂಲಕ ತಮ್ಮಲ್ಲಿರುವ ಒತ್ತಡ ಕಡಿಮೆ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು. ರಂಗಕಲಾವಿದರನ್ನು ಕರೆಸಿ ಆಗಾಗ ರಂಗಚಟುವಟಿಕೆ ಕಾರ್ಯಕ್ರಮ ನಡೆಸುವ ಕೆಲಸ ಮಾಡಬೇಕು. ಇದರಿಂದ ಕಲಾವಿದರಿಗೂ ಪ್ರೋತ್ಸಾಹ ಸಿಕ್ಕಂತಾಗುತ್ತದೆ ಎಂದರು. ಸಂಗೀತ ನಿರ್ದೇಶಕ ಹಂಸಲೇಖ ಮಾತನಾಡಿ, ವಕೀಲರು ಆಸಕ್ತಿ ಇದ್ದಲ್ಲಿ ರಂಗಭೂಮಿಯಲ್ಲಿ ತರಬೇತಿ ಪಡೆಯಬಹುದು. ಅವರಿಗೆ ತರಬೇತಿ ನೀಡಲು ನಾವು ಸಿದ್ಧರಿದ್ದೇವೆ ಎಂದರು.

ಸಿಗದ ವೈದ್ಯ ಸೀಟು ವಿದ್ಯಾರ್ಥಿನಿ ಆತ್ಮಹತ್ಯೆ
ಬೆಂಗಳೂರು: ವೈದ್ಯ ಸೀಟು ಸಿಗುವುದಿಲ್ಲವೆಂದು ಬೇಸರಗೊಂಡು ವಿದ್ಯಾರ್ಥಿನಿಯೊಬ್ಬಳು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಲ್ಲೇಶ್ವರ ರೈಲು ನಿಲ್ದಾಣದ ಬಳಿ ಸಂಭವಿಸಿದೆ. ಬನಶಂಕರಿ ಕಾವೇರಿ ನಗರ ನಿವಾಸಿ ನಂದಕುಮಾರ್ ಹಾಗೂ ಲಕ್ಷ್ಮಿ ದಂಪತಿ ಪುತ್ರಿ ವಿನುತಾ (18) ಆತ್ಮಹತ್ಯೆ ಮಾಡಿಕೊಂಡವರು. ಕನಕಪುರ ರಸ್ತೆಯ ಖಾಸಗಿ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪಿಯು ವ್ಯಾಸಂಗ ಮಾಡಿದ್ದ ವಿನುತಾ ಸಿಇಟಿಯಲ್ಲಿ 6044ನೇ ರ್ಯಾಂಕ್ ಪಡೆದಿದ್ದಳು. ಫಲಿತಾಂಶ ಬಂದ ದಿನದಿಂದ ತನಗೆ ವೈದ್ಯ ಸೀಟು ಸಿಗುವುದಿಲ್ಲ ಎನ್ನುವ ಬೇಸರವನ್ನು ಪೋಷಕರ ಬಳಿ ವ್ಯಕ್ತಪಡಿಸಿದ್ದಳು.  ಇವಳ ತಂದೆ ಹಾಪ್‌ಕಾಮ್ಸ್‌ನಲ್ಲಿ ಉದ್ಯೋಗಿಯಾಗಿದ್ದಾರೆ.

ಗ್ರಾಮಾಂತರ ಜಿಪಂ ಹಂಗಾಮಿ ಅಧ್ಯಕ್ಷರಾಗಿ ಬೀರಪ್ಪ ಪದಗ್ರಹಣ
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ಹಂಗಾಮಿ ಅಧ್ಯಕ್ಷರಾಗಿ ಬಿ.ಎಂ.ಬೀರಪ್ಪ ಅಧಿಕಾರ ಸ್ವೀಕರಿಸಿದರು. ಹಿಂದಿನ ಅಧ್ಯಕ್ಷ ತಿರುವರಂಗ ವಿ.ನಾರಾಯಣಸ್ವಾಮಿ ಬುಧವಾರ ಪಂಚಾಯಿತಿ ಸಭಾಂಗಣದಲ್ಲಿ ಹಂಗಾಮಿ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಿದರು. ಅಧ್ಯಕ್ಷರ ಅಧಿಕಾರಾವಧಿ ಕೊನೆಗೊಂಡಿರುವುದರಿಂದ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ ಬೀರಪ್ಪ ಅವರನ್ನೇ ಹಂಗಾಮಿ ಅಧ್ಯಕ್ಷರನ್ನಾಗಿ ಆರಿಸಲಾಗಿದೆ. ಹಂಗಾಮಿ ಅಧ್ಯಕ್ಷರು 20 ತಿಂಗಳು ಮುಂದುವರಿಯಬಹುದು. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮಹಿಳಾ ಮೀಸಲು ವಿವಾದ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿಯಿರುವುದರಿಂದ ಹಂಗಾಮಿ ಅಧ್ಯಕ್ಷರಾಗಿ ನೇಮಿಸಲಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಕೃಷ್ಣಪ್ಪ ತಿಳಿಸಿದರು.

ನಗರಕ್ಕೆ ಮಂತ್ರಾಲಯ ಶ್ರೀಗಳು
ಬೆಂಗಳೂರು: ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿ ಮಠದ ಚಾಮರಾಜಪೇಟೆ ಶಾಖೆಯ 80ನೇ ವಾರ್ಷಿಕೋತ್ಸವ ಜೂ.20, 21ರಂದು ನಡೆಯಲಿದೆ.  20ರಂದು ಸಂಜೆ 4 ಗಂಟೆಗೆ ಕೋಟೆ ಶ್ರೀ ವೆಂಕಟೇಶ್ವರಸ್ವಾಮಿ  ದೇವಾಲಯದಿಂದ ಮಠದವರೆಗೆ ಮಂತ್ರಾಲಯದ ಸುಬುಧೇಂದ್ರ ತೀರ್ಥ ಶ್ರೀಪಾದರ ಮೆರವಣಿಗೆ ನಡೆಯಲಿದೆ. ನಂತರ ಗಣ್ಯವ್ಯಕ್ತಿಗಳನ್ನು ಹಾಗೂ ಶ್ರೀ ಮಠಕ್ಕೆ  ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಗುವುದು. 21 ಬೆಳಗ್ಗೆ ಫಲ ಪಂಚಾಮೃತ ಅಭಿಷೇಕ, ಮುಖ್ಯಪ್ರಾಣದೇವರಿಗೆ ಸುವರ್ಣ ಕವಚ ಧಾರಣೆ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.