ಬೆಂಗಳೂರು ಗ್ರಾಮಾಂತರ

20 ನಿಮಿಷ 20 ಸುದ್ದಿ

Published On :

ರಾಮನಗರ: ಪ್ರಸಕ್ತ ಲೋಕಸಭೆ ಚುನಾವಣೆ ಬಳಿಕ ರಾಜ್ಯ ರಾಜಕಾರಣದಲ್ಲಿ ಮಹತ್ತರ ಬದಲಾವಣೆ ನಿಶ್ಚಿತವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅತಂತ್ರರಾಗಲಿದ್ದಾರೆ ಎಂದು ಜೆಡಿಎಸ್ ಶಾಸಕ ಎಚ್.ಸಿ.ಬಾಲಕೃಷ್ಣ ಭವಿಷ್ಯ ನುಡಿದಿದ್ದಾರೆ.  ಕಾಂಗ್ರೆಸ್ನಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರನ್ನು ಕಡೆಗಣಿಸುತ್ತಿರುವ ಬಗ್ಗೆ ಆ ಪಕ್ಷದಲ್ಲೇ ಕೂಗು ಎದ್ದಿದೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 3ನೇ ಸ್ಥಾನಕ್ಕೆ ದೂಡಲ್ಪಡುತ್ತದೆ. ಅದರ ಬೆನ್ನಲ್ಲೇ ಸಿದ್ದರಾಮಯ್ಯ ಪದಚ್ಯುತಿ ಆಗಲಿದೆ ಎಂದು ಅವರು ನಗರದಲ್ಲಿ ಶುಕ್ರವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ತಿಳಿಸಿದರು. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಘಟಾನುಘಟಿ ನಾಯಕರೇ ಸೋಲು ಕಂಡಿರುವ ನಿದರ್ಶನಗಳಿವೆ. ಹೀಗಾಗಿ ಡಿ.ಕೆ.ಸುರೇಶ್ ಗೆಲವಿನ ಬಗ್ಗೆ ಅವರು ಮತ್ತು ಸಹೋದರ ಡಿ.ಕೆ.ಶಿವಕುಮಾರ್ ಹಗಲು ಕನಸು ಕಾಣುವುದು ಬೇಡ. ನಿಮಗೂ ಈ ಬಾರಿ ಭ್ರಮನಿರಸನ ಕಾದಿದೆ ಎಂದು ಬಾಲಕೃಷ್ಣ ಹೇಳಿದರು.

ರಾಮನಗರ ನಗರಸಭೆ ಅಧ್ಯಕ್ಷ ಗಾದಿ: ಕಾಂಗ್ರೆಸ್ ಅತೃಪ್ತಿ ಶಮನ
ರಾಮನಗರ:
ಇಲ್ಲಿನ ನಗರಸಭೆ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ 21ನೇ ವಾರ್ಡ್ ಸದಸ್ಯ ರವಿಕುಮಾರ್ ಅವರನ್ನು ಸಮಾಧಾನಪಡಿಸುವಲ್ಲಿ ಕಾಂಗ್ರೆಸ್ ಮುಖಂಡರು ಯಶಸ್ವಿಯಾಗಿದ್ದು, ಪಕ್ಷದ ಪಾಳಯದಲ್ಲಿ ಆತಂಕ ನಿವಾರಣೆಯಾಗಿದೆ.  ದಲಿತ ಸಮುದಾಯಕ್ಕೆ ಸೇರಿದ ತಮಗೆ ಅಧ್ಯಕ್ಷ ಸ್ಥಾನ ಕೈ ತಪ್ಪುವುದು ಖಚಿತವೆಂದು ಮನವರಿಕೆ ಆದ ನಂತರ ರವಿಕುಮಾರ್ ತಮ್ಮ ಮೊಬೈಲ್ ಸ್ವಿಚ್ಆಫ್ ಮಾಡಿಕೊಂಡು, ತಮ್ಮ ಮುಖಂಡರ ಸಂಪರ್ಕಕ್ಕೆ ಸಿಗದಂತಾಗಿದ್ದರು. ಹೀಗಾಗಿ ಮುಖಂಡರಿಗೆ ಆತಂಕವಾಗಿತ್ತು. ರವಿಕುಮಾರ್ ಹೊರತುಪಡಿಸಿ ಉಳಿದೆಲ್ಲ ಸದಸ್ಯರನ್ನು ಒಗ್ಗಟ್ಟು ಕಾಯ್ದುಕೊಳ್ಳುವುದಕ್ಕಾಗಿ ಪ್ರವಾಸಕ್ಕೆ ಕರೆದೊಯ್ಯಲಾಗಿತ್ತು. ಶುಕ್ರವಾರ ತಡರಾತ್ರಿ ವೇಳೆಗೆ ರವಿಕುಮಾರ್ ಮುಖಂಡರ ಗಾಳಕ್ಕೆ ಸಿಕ್ಕಿದ್ದು, ಅವರೀಗ ಪ್ರವಾಸದಲ್ಲಿರುವ ಪಕ್ಷದ ಸದಸ್ಯರ ತಂಡವನ್ನು ಕೂಡಿಕೊಂಡಿದ್ದಾರೆ.  

ಪೌರ ಸಂಸ್ಥೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕಸರತ್ತು
ರಾಮನಗರ:
ಅತಂತ್ರವಾಗಿದ್ದ ಚನ್ನಪಟ್ಟಣ ನಗರಸಭೆ ಚುಕ್ಕಾಣಿಯನ್ನು ಕೈವಶ ಮಾಡಿಕೊಂಡಿರುವ ಕಾಂಗ್ರೆಸ್ ಇದೀಗ ಜಿಲ್ಲೆಯ ಉಳಿದ 3 ಪೌರ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಗೊಂದಲ ಮೂಡದಂತೆ ಎಚ್ಚರ ವಹಿಸಿದೆ. ಈ ಜವಾಬ್ದಾರಿಯನ್ನು ಖುದ್ದು ಸಂಸದ ಡಿ.ಕೆ.ಸುರೇಶ್ ಅವರೇ ವಹಿಸಿಕೊಂಡಿದ್ದಾರೆ.  ಚನ್ನಪಟ್ಟಣ ನಗರಸಭೆ ಚುಕ್ಕಾಣಿ ಕಾಂಗ್ರೆಸ್ ಪಾಲಿಗೆ ಕಬ್ಬಿಣದ ಕಡಲೆಯಾಗಿತ್ತು. ಕಡೆಗೆ ಅದು ಸುಲಭ ತುತ್ತಾಗಿದ್ದು, ಇನ್ನುಳಿದ 3 ಪೌರ ಸಂಸ್ಥೆಗಳಲ್ಲೂ ಕಾಂಗ್ರೆಸ್  ಅನಾಯಾಸ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಮಾಗಡಿ ಮತ್ತು ಕನಕಪುರದಲ್ಲಿ ಕಾಂಗ್ರೆಸ್ಗೆ ಪ್ರತಿಸ್ಪರ್ಧಿಯೇ ಅನುಮಾನ. ಲೋಕಸಭೆ ಚುನಾವಣೆಯಲ್ಲಿ ಲಾಭವಾಗುವ ಅಂಶಗಳನ್ನೂ ಪರಿಗಣನೆಗೆ ತೆಗೆದುಕೊಂಡು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಸೂತ್ರ ರೂಪಿಸಲಾಗುತ್ತಿದೆ. ಇಲ್ಲಿ ಜಾತಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿರುವ ಮಾತು ಕೇಳಿ ಬರುತ್ತಿದೆ.

ಮತದಾನ ಜಾಗೃತಿ...

ರಾಮನಗರದಲ್ಲಿ ನಡೆದ ಮತದಾನ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಮತ್ತು ಜಿಪಂ ಸಿಇಒ ಡಾ.ವೆಂಕಟೇಶ್ ನೇತೃತ್ವದಲ್ಲಿ ಅಧಿಕಾರಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಬಿಡದಿ ವಿಭಾಗ ವ್ಯಾಪ್ತಿಯಲ್ಲಿ 18ರಂದು ವಿದ್ಯುತ್ ವ್ಯತ್ಯಯ
ರಾಮನಗರ:
ಹಾಲಿ ಇರುವ ವಿದ್ಯುತ್ ಮಾರ್ಗಗಳಿಗೆ ಎ.ಬಿ. ಕೇಬಲ್ ಅಳವಡಿಸುವ ಕಾಮಗಾರಿ ಹಾಗೂ ವಿದ್ಯುತ್ ಪರಿವರ್ತಕಗಳಿಗೆ ಮಾಪಕ ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬಿಡದಿ ಉಪ ವಿಭಾಗ ವ್ಯಾಪ್ತಿಯ ಎಫ್-9 ಹೆಜ್ಜಾಲ ಫೀಡರ್ ವಿದ್ಯುತ್ ಮಾರ್ಗ ವ್ಯಾಪ್ತಿಗೊಳಪಡುವ ವಂಡರ್ಲಾ, ಬಿ.ಎಂ. ರಸ್ತೆಯ ಹೆಜ್ಜಾಲ, ಮಂಚನಾಯಕನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾ.18ರಂದು ಬೆಳಗ್ಗೆ 10 ರಿಂದ ಸಂಜೆ 6ರವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ.
ಮಾ.19ರಂದು ಬಿಡದಿ ಫೀಡರ್ ವಿದ್ಯುತ್ ಮಾರ್ಗ ವ್ಯಾಪ್ತಿಗೊಳಪಡುವ ಬಿಡದಿ, ಕೇತಿಗಾನಹಳ್ಳಿ, ವಾಜರಹಳ್ಳಿ, ಬನ್ನಿಕುಪ್ಪೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಬಿಡದಿ ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.

'ಸಮಾಜವಾದಿಯಲ್ಲೇ ಇದ್ದೇನೆ ಕೈ ಸೇರ್ಪಡೆಗೆ ದಿನ ನಿಗದಿಯಾಗಿಲ್ಲ'
ಚನ್ನಪಟ್ಟಣ:
ನಾನು ಇನ್ನೂ ಸಮಾಜವಾದಿ ಪಕ್ಷದಲ್ಲೇ ಇದ್ದೇನೆ, ಇನ್ನೂ ನಾನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದಿಲ್ಲ, ಭಾನುವಾರ ಬೆಂಬಲಿಗರ ಚರ್ಚಿಸಿ ಸೇರ್ಪಡೆ  ನಿರ್ಧಾರ ಕೈಗೊಳ್ಳಾಗುವುದು ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ಪಟ್ಟಣದ ನಗರಸಭೆ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ವರಿಷ್ಠರೊಂದಿಗೆ ಮಾತುಕತೆ ನಡೆದಿದೆ. ಆದರೆ, ಪಕ್ಷದ ಅಧಿಕೃತ ಸದಸ್ಯತ್ವ ಪಡೆದಿಲ್ಲ, ಕಾರ್ಯಕರ್ತರ ಸಭೆ ನಂತರ ಮುಂದಿನ ರಾಜಕೀಯ ನಿರ್ಧಾರ ತಳೆಯುವುದಾಗಿ ತಿಳಿಸಿದರು.
ನಗರಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದಲೇ ಕಾಂಗ್ರೆಸ್ ಬೆಂಬಲಿಸಿದ್ದು, ಪಟ್ಟಣದ ಸರ್ವಾಂಗೀಣ ಅಭಿವೃದ್ಧಿ ಉದ್ದೇಶದಿಂದ ಕಾಂಗ್ರೆಸ್  ಸದಸ್ಯರಿಗೆ ಬೆಂಬಲ ನೀಡಿದ್ದೇನೆ ಕಾಂಗ್ರೆಸ್ ಸೇರ್ಪಡೆ ದಿನಾಂಕ ನಿಗದಿಯಾಗಿಲ್ಲ ಎಂದರು.

ಜೆಡಿಎಸ್ ಬಂಡಾಯ ಸದಸ್ಯರ ವಿರುದ್ಧ ಕ್ರಮ ಜರುಗಿಸಿ
ಚನ್ನಪಟ್ಟಣ:
ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ ಪರಾಜಿತಗೊಳ್ಳಲು 6 ಮಂದಿ ಸದಸ್ಯರ ಪಕ್ಷ ದ್ರೋಹವೇ ಕಾರಣವಾಗಿದ್ದು, ಈ ಸದಸ್ಯರ ವಿರುದ್ಧ ವರಿಷ್ಠರು ಶಿಸ್ತು ಕ್ರಮ ಕೈಗೊಳ್ಳ ಬೇಕೆಂದು ನಗರಸಭಾ ಪರಾಜಿತ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಉಜ್ಮಾ ಇಷ್ರತ್ ಆಗ್ರಹಿಸಿದರು.
ಚುನಾವಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದ ವತಿಯಿಂದ ವಿಪ್ ಜಾರಿ ಗೊಳಿಸಲಾಗಿತ್ತು. ಆದರೆ ವಿಪ್ ಉಲ್ಲಂಘಿಸಿ ಚುನಾವಣೆಗೆ ಗೈರು ಹಾಜರಾಗುವ ಮೂಲಕ ಕಾಂಗ್ರೆಸ್ ಗೆಲ್ಲಲು ಸಹಕರಿಸಿದ್ದಾರೆ. ಲೋಕಸಭಾ ಚುನಾವಣೆಯ ಸಮಯದಲ್ಲಿ ಜೆಡಿಎಸ್ಗೆ ಹಿನ್ನಡೆ ಉಂಟು ಮಾಡಿರುವ ಸದಸ್ಯರನ್ನು ಯಾವುದೇ ಕಾರಣಕ್ಕೂ ಪಕ್ಷ ಕ್ಷಮಿಸಬಾರದು. 6 ಮಂದಿ ಸದಸ್ಯರು ಬಲಾಢ್ಯ ವ್ಯಕ್ತಿಯೊಬ್ಬರ ನಿರ್ದೇಶನದಂತೆ ಚುನಾವಣೆಗೆ ಗೈರು ಹಾಜರಾಗಿದ್ದಾರೆ ಎಂದು ಆರೋಪಿಸಿದರು.

ಹೋಳಿ ಹುಣ್ಣಿಮೆ ಪ್ರಯುಕ್ತ ರತಿಮನ್ಮಥ ವಿಗ್ರಹ ಸ್ಥಾಪನೆ
ಕನಕಪುರ:
ಇಲ್ಲಿನ ದೇಶಪೇಟೆ ಮಹಾಜನಸಭಾ ವತಿಯಿಂದ ಹೋಳಿಹುಣ್ಣಿಮೆ ಪ್ರಯುಕ್ತ ರತಿಮನ್ಮಥರ ವಿಗ್ರಹಗಳ ಪ್ರತಿಷ್ಟಾಪನೆ ಇಲ್ಲಿನ ಪೇಟೆ ಕಾಮನಗುಡಿಯಲ್ಲಿ ನಡೆಯಿತು. ಮಾ.17ರ ವರೆಗೆ ನಡೆಯಲಿರುವ ಹೋಳಿ ಕಾರ್ಯಕ್ರಮದಲ್ಲಿ ನಿತ್ಯವೂ ರತಿ ಮನ್ಮಥರಿಗೆ ವಿವಿಧ ವೇಷ ಭೂಷಣ  ತೊಡಿಸಿ ಪ್ರದರ್ಶನಕ್ಕೆ ಇಡಲಾಗುವುದು. ಪಟ್ಟಣದ ನಾಗರಿಕರು, ಗ್ರಾಮೀಣ ಪ್ರದೇಶಗಳ ಜನರು ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಮಾ.16 ರಂದು ರಾತ್ರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಆಕರ್ಷಕ ಮೆರವಣಿಗೆ ನಡೆದ ಬಳಿಕ ಕಾಮದಹನ ನಡೆಸಲಾಗುವುದು. ಇಲ್ಲಿನ ವಿಶಿಷ್ಟ ಸಂಪ್ರದಾಯದಂತೆ ಕಾಮದಹನದ ಮರುದಿನ ಅಂದರೆ ಮಾ.17ರಂದು ಬೆಳಗ್ಗೆ 7 ಗಂಟೆಯಿಂದ ಮ. 12 ಗಂಟೆ ವರೆಗೆ ಬಣ್ಣದ ಓಕುಳಿ, ಹೋಳಿ ಸಂಭ್ರಮ ನಡೆಯಲಿದೆ ಎಂದು ದೇಶಪೇಟೆ ಮಹಾಜನಸಭಾ ಅಧ್ಯಕ್ಷ ಕೆ.ಬಿ.ಜಯಪ್ರಕಾಶ್ ತಿಳಿಸಿದ್ದಾರೆ.

ಎಡಿಪೈನಿಂದ ಯುವತಿಯರಿಗೆ ಬ್ಯೂಟಿ ಪಾರ್ಲರ್ ಶಿಬಿರ
ರಾಮನಗರ:
ಬಿಡದಿಯ ವಾಜರಹಳ್ಳಿಯಲ್ಲಿರುವ ಕೆನರಾ ಬ್ಯಾಂಕ್ ಪ್ರಾಯೋಜಿತ ಎಡಿಪೈ ಗ್ರಾಮೀಣಾಭಿವೃದ್ಧಿ ತರಬೇತಿ ಸಂಸ್ಥೆಯು ರಾಮನಗರ, ಮಂಡ್ಯ, ಬೆಂಗಳೂರು ಗ್ರಾಮಾಂತರ ಹಾಗು ತುಮಕೂರು ಜಿಲ್ಲೆಯ ನಿರುದ್ಯೋಗಿ ಯುವತಿಯರಿಗೆ 30 ದಿನಗಳ ಉಚಿತ ಬ್ಯೂಟಿ ಪಾರ್ಲರ್ ತರಬೇತಿ ನೀಡಲಿದೆ.   
ಅಭ್ಯರ್ಥಿಗಳು ಕನಿಷ್ಠ 7ನೇ ತರಗತಿ ಪಾಸಾಗಿರಬೇಕು. 18 ರಿಂದ 35 ವರ್ಷದೊಳಗಿರಬೇಕು. ಅರ್ಜಿ ಸಲ್ಲಿಸಲು ಏ.5 ಕಡೆಯ ದಿನವಾಗಿದ್ದು, ಭರ್ತಿ ಮಾಡಿದ ಅರ್ಜಿಯ ಜತೆಗೆ ತಮ್ಮ ಇತ್ತೀಚಿನ 3 ಭಾವಚಿತ್ರಗಳು, ಪಡಿತರ ಚೀಟಿಯ ನಕಲು ಹಾಗೂ ಪರೀಕ್ಷಾ ಅಂಕಪಟ್ಟಿ ನಕಲಿನೊಂದಿಗೆ ನೇರವಾಗಿ ಸಂಸ್ಥೆಯ ಕಚೇರಿಗೆ ಸಲ್ಲಿಸಬೇಕು.  30 ದಿನ ನಡೆಯುವ ತರಬೇತಿಗೆ ಹಾಜರಾತಿ ಕಡ್ಡಾಯವಾಗಿದೆ. ನುರಿತ ಹಾಗೂ ಅನುಭವಿ ಸಂಪನ್ಮೂಲ ವ್ಯಕ್ತಿಗಳು ಪ್ರವಚನ ನೀಡುವರು.  ಮಾಹಿತಿಗೆ, 9740648830, 9900168985 ಸಂಪರ್ಕಿಸಬಹುದು.

'ಹೆಣ್ಣು ಶಾಪವೆನ್ನುವ ಭಾವನೆ ಇನ್ನೂ ದೂರವಾಗಿಲ್ಲ'
ರಾಮನಗರ:
ಹೆಣ್ಣು ಮಗು ಹುಟ್ಟುವುದೇ ಶಾಪವೆನ್ನುವ ಭಾವನೆ ನಮ್ಮ ಸಮಾಜದಲ್ಲಿ ಇನ್ನೂ ಅಳಿಸಿ ಹೋಗಿಲ್ಲ. ಇದು ದುರಂತವೇ ಸರಿ ಎಂದು ರೈತ ಸಂಘದ ನಾಯಕಿ ಬಿ.ಅನುಸೂಯಮ್ಮ ವಿಷಾದಿಸಿದರು.  
ತಾಲೂಕಿನ ಗೌರಿಪುರ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ಕುವೆಂಪು ಮಹಿಳಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ್ನಿಂದ ನಡೆದ ವಿಶ್ವ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ವಿದ್ಯಾವಂತ ಸಮಾಜದಲ್ಲಿಯೂ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ವರದಕ್ಷಿಣೆ ಪಿಡುಗು ಮತ್ತು ವಂಶೋದ್ಧಾರಕ ಬೇಕು ಎನ್ನುವ ನಂಬಿಕೆ ಕಾರಣ ಎಂದರು.  ವೈದ್ಯಕೀಯ, ಕಾನೂನು ಮತ್ತು ಎಂಜಿನಿಯರಿಂಗ್ ಕ್ಷೇತ್ರದಲ್ಲಿಯೂ ಮಹಿಳೆಯರು ಮೇಲುಗೈ ಸಾಧಿಸಿದ್ದಾರೆ. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗೆ ಸರಿಸಮಾನವಾಗಿದ್ದಾರೆ ಎಂದು ಬಿ. ಅನುಸೂಯಮ್ಮ ಪ್ರತಿಪಾದಿಸಿದರು.

ವಿಶೇಷ ಉಪನ್ಯಾಸ...
ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಡಿಸಿದ್ದ ಸಮಾಜ ಪರಿವರ್ತನೆ ಮತ್ತು ನಮ್ಮ ಕರ್ತವ್ಯ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಮಾಜ ಪರಿವರ್ತನಾ ಸಮುದಾಯ ಅಧ್ಯಕ್ಷ ಎಸ್.ಆರ್. ಹಿರೇಮಠ್, ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ, ನ್ಯಾಯವಾದಿ ಹೇಮಲತಾ ಮಹಿಷಿ,  ಅನಿಕೇತನ ಬಳಗದ ಮಾಯಣ್ಣ ಭಾಗವಹಿಸಿದ್ದರು.

ಜಾನಪದ ಎಲ್ಲರ ಉಸಿರಾಗಲಿ: ತಿಮ್ಮೇಗೌಡ ಕಿವಿಮಾತು
ರಾಮನಗರ:
ನಮ್ಮ ಯುವಜನರಲ್ಲಿ ಅತಿಯಾದ ವಿದೇಶಿ ವ್ಯಾಮೋಹದಿಂದಾಗಿ ಭಾರತೀಯ ಸಂಸ್ಕೃತಿಯು ಅಧೋಗತಿಗೆ ಇಳಿಯುತ್ತಿದ್ದು, ಗ್ರಾಮೀಣ ಪ್ರದೇಶದ ಸೊಗಡಿನ ಕಲೆಗಳು ವಿನಾಶದತ್ತ ಸಾಗುತ್ತಿವೆ. ಇದು ಅಪಾಯಕಾರಿ ಬೆಳವಣಿಗೆ ಎಂದು ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಗೌಡ ವಿಷಾದಿಸಿದರು.
ಕರ್ನಾಟಕ ಜಾನಪದ ಪರಿಷತ್ತಿನಿಂದ ನಾಡೋಜ ಎಚ್.ಎಲ್.ನಾಗೇಗೌಡರ ಶತಮಾನೋತ್ಸವದ ಪ್ರಯುಕ್ತ ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕಾಲೇಜಿನಿಂದ ಕಾಲೇಜಿಗೆ ಜಾನಪದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ನಾಡಿನ ಸಂಸ್ಕೃತಿಯನ್ನು ವಿದೇಶಿಯರು ಅಪ್ಪಿಕೊಂಡಿರುವಾಗ ಪಾಶ್ಚಾತ್ಯ ಸಂಸ್ಕೃತಿ, ಕಲೆಗೆ ನಾವು ಮಾರುಹೋಗುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.  ಜಾನಪದ ಪ್ರತಿಯೊಬ್ಬರ ಉಸಿರಾಗಬೇಕು ಎಂದರು.

'ದೇಶದ ಅಭಿವೃದ್ಧಿಗೆ ಯುವ ಸಮುದಾಯ ಪಣತೊಡಲಿ'
ರಾಮನಗರ:
ಚಾರಿತ್ರ್ಯವಂತ ಯುವ ಸಮುದಾಯದಿಂದ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಯುವಜನರು ಸಂಕಲ್ಪತೊಡಬೇಕು ಎಂದು ಶೇಷಾದ್ರಿಪುರಂ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಡಬ್ಲ್ಯೂ. ಪಿ.ಕೃಷ್ಣ ಕರೆ ನೀಡಿದರು.  ತಾಲೂಕಿನ ಅಂಗರಹಳ್ಳಿಯಲ್ಲಿ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಮ್ಮಿಕೊಂಡಿರುವ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಯುವ ಸಮುದಾಯ ಸನ್ಮಾರ್ಗದಲ್ಲಿ ಸಾಗಬೇಕು. ಪ್ರತಿಯೊಬ್ಬರಲ್ಲೂ ದೇಶಾಭಿಮಾನ ಮತ್ತು ದೇಶದ ಭವಿಷ್ಯ ಕುರಿತ ಚಿಂತನೆ ಇರಬೇಕು ಎಂದರು. ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯ ಸಂಚಾಲಕ ಡಾ.ಎಸ್. ಬಾಲಾಜಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಿನಿಮಾ ಸಂಸ್ಕೃತಿ ಹಾವಳಿಯಿಂದ ಜಾನಪದ, ರಂಗಭೂಮಿ, ಗ್ರಾಮೀಣ ಕಲೆ, ಸಾಹಿತ್ಯ ಮರೆಯಾಗುತ್ತಿದೆ. ದೃಶ್ಯ ಮಾಧ್ಯಮಗಳು ಕ್ರೌರ್ಯ, ಮೋಸ, ವಂಚನೆ ಪ್ರಕರಣಗಳಿಗೆ ಒತ್ತು ನೀಡಿ ಯುವ ಸಮುದಾಯವನ್ನು ದಾರಿ ತಪ್ಪಿಸುತ್ತಿವೆ ಎಂದರು. ಪ್ರಾಂಶುಪಾಲರಾದ ಪ್ರೊ. ಚಂದ್ರಿಕಾಪುರಾಣಿಕ್, ಶಿಬಿರಾಧಿಕಾರಿ ಪ್ರತಾಪ್ ನಿಂಗಯ್ಯ ಮತ್ತಿತರರು ಭಾಗವಹಿಸಿದ್ದರು.   

ಇತಿಹಾಸ ಪ್ರಸಿದ್ಧ ವೆಂಕಟರಮಣ ರಥೋತ್ಸವ ಇಂದು
ದೊಡ್ಡಬಳ್ಳಾಪುರ:
ತಾಲೂಕಿನ ತೂಬಗೆರೆ ಗ್ರಾಮದ ಇತಿಹಾಸ ಪ್ರಸಿದ್ಧ ಪ್ರಸನ್ನ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ, ಹೋಳಿ ಹುಣ್ಣಿಮೆ ಕಾರ್ಯಕ್ರಮ ಮಾ.16ರ ಭಾನುವಾರ ಮಧ್ಯಾಹ್ನ 1.30ಕ್ಕೆ ಸಂಭ್ರಮದಿಂದ ನಡೆಯಲಿದೆ. ಸುಮಾರು 6 ಶತಮಾನಗಳ ಸುದೀರ್ಘ ಇತಿಹಾಸ ಹೊಂದಿರುವ ದೇವಾಲಯದಲ್ಲಿ ಲಕ್ಷ್ಮೀ ವೆಂಕಟರಮಣಸ್ವಾಮಿ ಮೂಲ ದೇವರಿದೆ. ಪ್ರಖ್ಯಾತ ಯಾತ್ರಾಸ್ಥಳವಾಗಿರುವ ತಿರುಪತಿ ವೆಂಕಟರಮಣನ ಮೂಲ ಪ್ರಾಣ ದೇವರು ಇದು ಎಂಬ ಐತಿಹ್ಯ ಸ್ಥಳೀಯವಾಗಿ ಜನಜನಿತವಾಗಿದೆ. ಅಂದಿನ ಕಾಲದಲ್ಲಿ ಪಾಳೇಗಾರರ ಮೂಲಕ ಪ್ರತಿಷ್ಠಾಪನೆಗೊಂಡ ದೇವಾಲಯದಲ್ಲಿ ಪರಂಪರಾಗತವಾಗಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿವೆ. ಕಳೆದ ಬುಧವಾರದಿಂದ ಆರಂಭವಾಗಿರುವ ಕಾರ್ಯಕ್ರಮಗಳು 14 ದಿನಗಳ ಕಾಲ ನಡೆಯಲಿವೆ. ವಿವಿಧ ಜಾತಿ-ಧರ್ಮಗಳ ಸಂಕೋಲೆ ಮೀರಿ ಎಲ್ಲ ವರ್ಗದ ಜನ ಜಾತ್ರೆಯಲ್ಲಿ ಭಾಗವಹಿಸುವುದು ಇಲ್ಲಿನ ವಿಶೇಷ.

ಕೇಜ್ರಿವಾಲ್ ರೋಡ್ ಶೋ; ಸಂಚಾರ ದಟ್ಟಣೆ ಇಲ್ಲದೆ ನಿರಾಳ
ಬೆಂಗಳೂರು:
ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರೋಡ್ ಶೋಗೆ ನಿರೀಕ್ಷಿಸಿದಷ್ಟು ಜನ ಆಗಮಿಸದ ಹಿನ್ನೆಲೆಯಲ್ಲಿ ನಗರದಲ್ಲಿ ಸಂಚಾರ ದಟ್ಟಣೆ ಕಂಡು ಬರಲಿಲ್ಲ.
ಬೆಳಗ್ಗೆ 9.30ಕ್ಕೆ ಹೆಬ್ಬಾಳದಿಂದ ಸರ್ವೀಸ್ ರಸ್ತೆಯಲ್ಲಿ ರ್ಯಾಲಿ ಆರಂಭವಾಗುತ್ತಿದ್ದಂತೆ ಜನ ಕುತೂಹಲದಿಂದ ಮುಖ್ಯರಸ್ತೆಯಲ್ಲಿ ವಾಹನಗಳು ನಿಲ್ಲಿಸಿ ನೋಡುತ್ತಿದ್ದ ಕಾರಣ ಸ್ವಲ್ಪ ದಟ್ಟಣೆ ಉಂಟಾಗಿತ್ತು. ನಂತರ ಅಲ್ಲಿಂದ ಗಂಗಾ ನಗರ ಮಾರ್ಗವಾಗಿ ಜೆ.ಸಿ.ನಗರ, ಟಿವಿ ಟವರ್ ಬಳಿ ಸಂಚಾರ ಪೊಲೀಸರು ಸೂಚಿಸಿದ್ದ ಮಾರ್ಗ ಬಿಟ್ಟು ರ್ಯಾಲಿ ಬೇರೆ ಕಡೆ ಚಲಿಸಿದ್ದರಿಂದ ಸ್ವಲ್ಪ ದಟ್ಟಣೆ ಉಂಟಾಗಿತ್ತು. ಉಳಿದಂತೆ ಮೈಸೂರು ರಸ್ತೆ ಹೊಸಗುಡ್ಡದಹಳ್ಳಿ, ವಿಜಯನಗರ ಕಡೆ ನಿಗದಿಪಡಿಸಿದ ಮಾರ್ಗ ಬಿಟ್ಟು ಬೇರೆ ಕಡೆ ರ್ಯಾಲಿ ಹೊರಟ ಕಾರಣ ವಾಹನಗಳ ಸಂಚಾರದಲ್ಲಿ ಸ್ವಲ್ಪ ತೊಂದರೆ ಉಂಟಾಗಿತ್ತು. ಉಳಿದಂತೆ ನಗರದಲ್ಲೆಡೆ ರ್ಯಾಲಿಯಿಂದ ದಟ್ಟಣೆ ಉಂಟಾಗಲಿಲ್ಲ.

'ಯಶಸ್ವಿ ಬದುಕಿಗೆ ಆರೋಗ್ಯ ಮುಖ್ಯ'
ದೊಡ್ಡಬಳ್ಳಾಪುರ:
ಇಲ್ಲಿನ ಜಿಂಕೆಬಚ್ಚಹಳ್ಳಿಯ ಆದರ್ಶ ಚೇತನ ಟ್ರಸ್ಟ್ ನೇತೃತ್ವದಲ್ಲಿ ನಾಡಿ ಪರೀಕ್ಷೆ ಕಾರ್ಯಕ್ರಮ ಡಾ.ರವಿಶಂಕರ್ ಗುರೂಜಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಪರಿಣತ ನಾಡಿ ವೈದ್ಯರಿಂದ ನಡೆಯಿತು.
ಕಾರ್ಯಕ್ರಮದಲ್ಲಿ ಮಧುಮೇಹ, ಹೃದ್ರೋಗ, ಅಸ್ತಮಾ, ಸಂಧಿವಾತ, ರಕ್ತದೊತ್ತಡ, ಮಾನಸಿಕ ತೊಂದರೆ, ಕಿಡ್ನಿ ಮತ್ತು ಯಕೃತ್ ತೊಂದರೆ, ಅಜೀರ್ಣ ಸಮಸ್ಯೆ, ಅಸ್ಥಿರಂಧ್ರತೆ, ತಲೆನೋವು ಮತ್ತು ನಿದ್ರಾಹೀನತೆ ಸೇರಿದಂತೆ ಅನೇಕ ರೋಗಗಳಿಗೆ ನಾಡಿ ಶಾಸ್ತ್ರದ ಮೂಲಕ ಚಿಕಿತ್ಸಾ ವಿಧಾನ ಸೂಚಿಸಲಾಯಿತು.
ಗ್ರಾಪಂ ಸದಸ್ಯ ಎಚ್.ಎಂ.ಕೃಷ್ಣಮೂರ್ತಿ, ತಾಪಂ ಮಾಜಿ ಸದಸ್ಯ ಬಿ.ಎಚ್.ಕೆಂಪಣ್ಣ, ಮುಖಂಡರಾದ ತಿ.ರಂಗರಾಜು, ಸುಬ್ಬೇಗೌಡ, ಆನಂದಕುಮಾರ್, ಕರಗಪ್ಪ, ರಘು, ಕನಕರಾಜ್, ಸಿ.ಜಿ.ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.

ಮೈತ್ರಿ ಧರ್ಮಕ್ಕೆ ಮೋಸ: ಬಿಜೆಪಿ ಆರೋಪ
ದೊಡ್ಡಬಳ್ಳಾಪುರ:
ಇಲ್ಲಿನ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ನಡೆದಿರುವ ಆಮಿಷ ರಾಜಕಾರಣ ಖಂಡನೀಯ. ಪಕ್ಷೇತರ ಸದಸ್ಯೆ ಗಾಯತ್ರಿ ಧೋರಣೆ ಮತ್ತು ಸ್ವಾರ್ಥದ ವರ್ತನೆ ಅಕ್ಷಮ್ಯ ಎಂದು ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಸಂಬಂಧ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿನಗರಸಭಾ ಸದಸ್ಯರಾದ ಎಚ್.ಎಸ್. ಶಿವಶಂಕರ್, ಕೆ.ಎಚ್.ವೆಂಕಟರಾಜು, ಕೆ.ಎಂ.ಮುದ್ದಪ್ಪ, ಪಕ್ಷೇತರ ಸದಸ್ಯ ಎನ್.ಕೆ.ರಮೇಶ್ ಮತ್ತಿತರರು, ಜೆಡಿಎಸ್-ಕನ್ನಡಪಕ್ಷ ಮೈತ್ರಿ ಅಭ್ಯರ್ಥಿ ಪರ್ಯಾಯವಾಗಿ ಬಂಡಾಯ ಅಭ್ಯರ್ಥಿ ಪರ ಬಿಜೆಪಿ ಒಲವು ಹೊಂದಿತ್ತು. ಪಕ್ಷೇತರ ನಾಲ್ವರು ಸದಸ್ಯರು, ಬಿಜೆಪಿ 6 ಮಂದಿ, ಜೆಡಿಎಸ್ ಬಂಡಾಯದ ಒಬ್ಬರು ಹಾಗೂ ಕಾಂಗ್ರೆಸ್ನ 4 ಸದಸ್ಯರು ಸೇರಿ ಸಮಾನ ಮನಸ್ಕ ಮೈತ್ರಿಗೆ ಮುಂದಾಗಿದ್ದೆವು. ಆದರೆ ಕೊನೆ ಹಂತದಲ್ಲಿ ಗಾಯತ್ರಿ ಆಮಿಷಕ್ಕೆ ಬಲಿಯಾಗಿ ಜೆಡಿಎಸ್ ಬೆಂಬಲಿಸಿದ್ದಾರೆ. ಮೈತ್ರಿ ಧರ್ಮಕ್ಕೆ ಮೋಸ ಮಾಡಿದ್ದಾರೆ ಎಂದು ದೂರಿದರು.

ಭಾರತ್ ನಿರ್ಮಾಣ್ ರ್ಯಾಲಿ...
ಬೆಂಗಳೂರಿನ ಸಿ.ವಿ. ರಾಮನ್ ನಗರದ ಹೊಂಗಸಂದ್ರದಲ್ಲಿ ನಡೆದ ಕಾಂಗ್ರೆಸ್ನ ಭಾರತ್ ನಿರ್ಮಾಣ ಪಾದಯಾತ್ರೆಯಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್, ಸಚಿವ ದಿನೇಶ್ ಗುಂಡೂರಾವ್, ಮಾಜಿ ಸಚಿವೆ ರಾಣಿ ಸತೀಶ್ ಭಾಗವಹಿಸಿದ್ದರು.

ಕಾರ್ಖಾನೆಯಲ್ಲಿ ಜೀತಕ್ಕಿದ್ದ ಎರಡು ಕುಟುಂಬಗಳಿಗೆ ಮುಕ್ತಿ
ದೇವನಹಳ್ಳಿ:
ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದ ಜೊನ್ನಹಳ್ಳಿ ಗ್ರಾಮದ ಬಳಿಯ ರಾಮಾಂಜಿನಪ್ಪ ಇವರಿಗೆ ಸೇರಿದ ಇಟ್ಟಿಗೆ ಕಾರ್ಖಾನೆಯಲ್ಲಿ ಜೀತದಾಳುಗಳಾಗಿ ಕೆಲಸ ಮಾಡುತ್ತಿದ್ದ ಎರಡು ಕುಟುಂಬಗಳಿಗೆ ಶನಿವಾರ ಜೀತ ಮುಕ್ತಿ ದೊರಕಿದೆ.
ಸರ್ಕಾರದ ಸಂಪರ್ಕ ಸಂಸ್ಥೆ, ದೇವನಹಳ್ಳಿ ತಾಲೂಕು ಆಡಳಿತ ಹಾಗೂ ಚನ್ನರಾಯಪಟ್ಟಣ ಪೊಲೀಸ್ ಠಾಣೆ ಅಧಿಕಾರಿಗಳ ಜಂಟಿ ಕಾರ್ಯಚರಣೆಯಲ್ಲಿ ಎರಡು ಕುಟುಂಬಗಳಿಗೆ ಜೀತ ಮುಕ್ತಿ ದೊರಕಿದೆ. ಇಲ್ಲಿನ ಇಟ್ಟಿಗೆ ಕಾರ್ಖಾನೆಯಲ್ಲಿ ಮೂರು ಕುಟುಂಬಗಳು ಕೆಲಸ ಮಾಡುತ್ತಿದ್ದು, ಅವರಲ್ಲಿ ಒಂದು ಕುಟುಂಬ ಪರಾರಿಯಾಗಿದ್ದು, ಉಳಿದ ಎರಡು ಕುಟುಂಬಗಳಲ್ಲಿ ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಹಾಗೂ ಮೂವರು ಮಕ್ಕಳು ಪತ್ತೆಯಾಗಿದ್ದಾರೆ. ಈ ಸಂಬಂಧ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಹಸೀಲ್ದಾರ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.