ರಾಸುಗೆ ಲಸಿಕೆ: ಕಾರ್ಯಾರಂಭ
-ಮತ್ತೀಕೆರೆ ಜಯರಾಮ್
ರಾಮನಗರ: ಕಳೆದ ವರ್ಷ ಕಾಲುಬಾಯಿ ಜ್ವರ ಮತ್ತು ಗಳಲೇ ರೋಗ ಬಾಧೆಗೆ ಸಹಸ್ರಾರು ರಾಸುಗಳು ಬಲಿಯಾಗಿದ್ದವು.
ಈ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಸರ್ಕಾರ ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ರಾಸುಗಳಿಗೆ ಲಸಿಕೆ ನೀಡುವ ಕಾರ್ಯಕ್ರಮ ಪ್ರಾರಂಭಿಸಿದೆ. ವೈರಾಣುಗಳಿಂದ ಹರಡುವ ಕಾಲುಬಾಯಿ ಜ್ವರ ತಡೆಗಟ್ಟುವ ಲಸಿಕೆಯನ್ನು ವರ್ಷದಲ್ಲಿ ಫೆಬ್ರವರಿ, ಆಗಸ್ಟ್ ಹೀಗೆ ಎರಡು ಬಾರಿ ನೀಡಲಾಗುತ್ತದೆ. ಫೆಬ್ರವರಿಯಲ್ಲಿ ಮಾಹೆಯಲ್ಲಿ ಬಮೂಲ್ ವ್ಯಾಪ್ತಿಯ 5.60 ಲಕ್ಷ ರಾಸುಗಳಿಗೆ ಲಸಿಕೆಯನ್ನು ಈಗಾಗಲೇ ನೀಡಲಾಗಿದೆ.
ಕಾಲುಬಾಯಿ ಜ್ವರಕ್ಕಿಂತಲೂ ಅಪಾಯಕಾರಿಯಾದ ಗಳಲೇ ರೋಗವು ಬ್ಯಾಕ್ಟೀರಿಯಾಗಳಿಂದ ಹರಡುವ ಕಾಯಿಲೆ. ಇದಕ್ಕೆ ವರ್ಷಕ್ಕೆ ಒಮ್ಮೆ, ಮುಂಗಾರು ಪ್ರಾರಂಭಕ್ಕೆ ಮುಂಚೆ ನೀಡಲಾಗುತ್ತದೆ. ಮೇ ಮೊದಲ ವಾರದಿಂದಲೇ ಲಸಿಕೆ ನೀಡಲಾಗುತ್ತಿದ್ದು, 4 ಲಕ್ಷ ರಾಸುಗಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ.
ಜಂಟಿ ಕಾರ್ಯಾಚರಣೆ:ಕಾಲುಬಾಯಿ ಜ್ವರಬಾಧೆ ಮತ್ತು ಗಳಲೇ ರೋಗದ ಮುಂಜಾಗ್ರತಾ ಲಸಿಕೆಯನ್ನು ಸರ್ಕಾರ ಉಚಿತವಾಗಿ ಪೂರೈಸುತ್ತದೆ. ಕಾಲುಬಾಯಿ ಜ್ವರಬಾಧೆ ಲಸಿಕೆಯನ್ನು ಕೆಎಂಎಫ್ ಅಧೀನದ ಜಿಲ್ಲಾ ಹಾಲು ಒಕ್ಕೂಟಗಳು, ಗಳಲೇ ರೋಗದ ಲಸಿಕೆಯನ್ನು ಪಶು ಸಂಗೋಪನಾ ಇಲಾಖೆಯಿಂದ ನೀಡಲಾಗುತ್ತಿತ್ತು.
ಕಳೆದ ವರ್ಷ ಕಾಡಿದ ರೋಗ ಬಾಧೆಯಿಂದ ಇದೀಗ ಕೆಎಂಎಫ್ ಮತ್ತು ಪಶು ಸಂಗೋಪನಾ ಇಲಾಖೆ ಜಂಟಿ ಕಾರ್ಯಾಚರಣೆಗೆ ಇಳಿದಿದ್ದು, ಎರಡೂ ಕಡೆಯ ವೈದ್ಯಕೀಯ ತಂಡವು ಉಭಯ ರೋಗಗಳ ಮುಂಜಾಗ್ರತಾ ಲಸಿಕೆ ನೀಡಿಕೆ ಕಾರ್ಯಕ್ರಮವನ್ನು ಸಮರೋಪಾದಿಯಲ್ಲಿ ಮುಂದುವರೆಸುತ್ತಿವೆ.
ಒಕ್ಕೂಟದ ಸಂಪನ್ಮೂಲ: ಬಮೂಲ್ ವ್ಯಾಪ್ತಿಯ 12 ತಾಲೂಕುಗಳಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ಪ್ರಗತಿಯಲ್ಲಿದೆ.
ಲಸಿಕೆ ಸರ್ಕಾರದಿಂದ ಉಚಿತವಾಗಿ ಸರಬರಾಜಾಗಿದೆ. ಇಲಾಖೆ ವಾಹನಗಳಲ್ಲದೆ ಹೆಚ್ಚುವರಿಯಾಗಿ ಪ್ರತಿ ತಾಲೂಕಿಗೆ 1 ಟಾಟಾ ಸುಮೋ ಬಾಡಿಗೆ ವಾಹನವನ್ನು ಬಮೂಲ್ ಒದಗಿಸಿದೆ.
ಅಗತ್ಯವಿರುವಷ್ಟು ಇಂಜೆಕ್ಷನ್ ಸಿರಿಂಜ್ ಹಾಗೂ ನೀಡಲ್ಗಳನ್ನು ಬಮೂಲ್ ಪೂರೈಸಿದೆ. ಅಂತೆಯೇ ಲಸಿಕೆ ನೀಡಲಾಗುವ ಪ್ರತಿ ರಾಸುವಿಗೆ ಪಾವತಿಸಬೇಕಿರುವ ರು.1 ಹಣವನ್ನು ಬಮೂಲ್ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದಲೇ ಭರಿಸಲಾಗುತ್ತಿದೆ.
ಉತ್ತಮ ಪ್ರತಿಕ್ರಿಯೆ: ಕಾಲುಬಾಯಿ ಜ್ವರಕ್ಕಿಂತಲೂ ಗಳಲೇ ರೋಗ ಬಾಧೆ ಮಾರಕವಾಗಿದೆ.
ಕಳೆದ ವರ್ಷ ತಲೆದೋರಿದ ಈ ರೋಗಗಳಿಂದ ಸಹಸ್ರಾರು ರಾಸುಗಳು ಸಾವನ್ನಪ್ಪಿದ್ದಲ್ಲದೆ, ಹೈನೋದ್ಯಮದ ಮೇಲೆ ಗಂಭೀರ ಪರಿಣಾಮ ಬೀರಿತ್ತು. ಹೀಗಾಗಿ ರೈತರು ರಾಸುಗಳಿಗೆ ಲಸಿಕೆ ಹಾಕಿಸಲು ಉತ್ತಮ ಪ್ರತಿಕ್ರಿಯೆ ತೋರಿದ್ದಾರೆ.
ಹಳ್ಳಿ, ಗಲ್ಲಿಗಳಲ್ಲೂ ತಮಟೆ ಬಾರಿಸಿ ಲಸಿಕೆ ನೀಡಿಕೆ ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸುವ ಹೊಣೆಯನ್ನು ಆಯಾ ಹಾಲು ಉತ್ಪಾದಕರ ಸಹಕಾರ ಸಂಘಗಳೇ ವಹಿಸಿಕೊಂಡಿವೆ. ಬಮೂಲ್ ಮತ್ತು ಸ್ಥಳೀಯ ಸಂಘಗಳ ಪ್ರತಿನಿಧಿಗಳು ಲಸಿಕೆ ಕಾರ್ಯಕ್ರಮದ ಯಶಸ್ಸಿಗೆ ಕೈ ಜೋಡಿಸಿದ್ದಾರೆ.
ಕಡ್ಡಾಯವಾಗಿ ಲಸಿಕೆ ಹಾಕಿಸಿ:ಈ ಹಿಂದೆ ಕಾಲುಬಾಯಿ ಜ್ವರ ಮತ್ತು ಗಳಲೇ ರೋಗದಿಂದ ಸಾಕಷ್ಟು ರಾಸುಗಳು ಸಾವನ್ನಪ್ಪಿವೆ. ಮತ್ತೆ ಅಂತಹ ಪರಿಣಾಮ ಎದುರಾಗುವುದನ್ನು ತಡೆಯಲು ರೈತರು ಕಡ್ಡಾಯವಾಗಿ ತಮ್ಮ ರಾಸುಗಳಿಗೆ ಮುಂಜಾಗ್ರತಾ ಲಸಿಕೆ ಹಾಕಿಸುವುದು ಅಗತ್ಯ ಎಂದು ಉಪ ವ್ಯವಸ್ಥಾಪಕ, ಬಮೂಲ್, ಡಾ.ದೇವರಾಜ್ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

