ಹೊಸ ಸಂಯೋಜನೆಗೆ ಪ್ರವೇಶ
ದೊಡ್ಡಬಳ್ಳಾಪುರ: ಪದವಿ ಪೂರ್ವಶಿಕ್ಷಣ ಇಲಾಖೆ ದೊಡ್ಡಬಳ್ಳಾಪುರ ನಗರದಲ್ಲಿರುವ ಶ್ರೀಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗಕ್ಕೆ ಹೊಸ ಸಂಯೋಜನೆ ನೀಡಿದೆ. ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ ಮತ್ತು ಮೂಲ ಗಣಿಕ ವಿಷಯಗಳನ್ನು ಅಧ್ಯಯನ ಮಾಡಲು ಅವಕಾಶ ನೀಡಿದೆ. ಹೊಸ ಸಂಯೋಜನೆಗೆ ಪ್ರವೇಶ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಕಾಲೇಜಿನ ಪ್ರಾಂಶುಪಾಲ ಎಸ್.ಮಹಾಬಲೇಶ್ವರ್ ತಿಳಿಸಿದ್ದಾರೆ.
ತೇಜಸ್ವಿನಿ ಎಲ್. ಉತ್ತಮ ಸಾಧನೆ
ಮಾಗಡಿ: ತಾಲೂಕಿನ ಕುದೂರು ನವೋದಯ ಶಾಲೆಯ ತೇಜಸ್ವಿನಿ ಎಲ್. ಕೇಂದ್ರಿಯ ಪಠ್ಯದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.91.60 ಅಂಕಗಳಿಸಿ ಘನತೆ ಎತ್ತಿ ಹಿಡಿದಿದ್ದಾಳೆ.
ಕಾಡಾನೆ ದಾಳಿಗೆ ಬಾಳೆತೋಟ ನಾಶ
ಮಾಗಡಿ: ಕಾಡಾನೆ ದಾಳಿಗೆ ರೈತರ ಬಾಳತೋಟ ನಾಶವಾಗಿದೆ. ಮಾಗಡಿ ತಾಲೂಕಿನ ಕುದೂರು ಹೋಬಳಿ ಅಜ್ಜಹಳ್ಳಿ ಗ್ರಾಮದ ಮಾರೇಗೌಡ ಅವರಿಗೆ ಸೇರಿದ ಬಾಳೆ ತೋಟಕ್ಕೆ ನುಗ್ಗಿದ ಕಾಡಾನೆಗಳು ತೋಟವನ್ನು ಧ್ವಂಸಗೊಳಿಸಿದೆ. ಇದರಿಂದಾಗಿ ನೂರಾರು ಬಾಳೆಗಿಡಗಳು ನಾಶವಾಗಿದ್ದು, ಸಾವಿರಾರು ರು. ಬೆಳೆ ನಷ್ಯವಾಗಿದೆ. ಈ ಸಂಬಂಧ ಅರಣ್ಯಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೂ ಸಂಬಂಧಪಟ್ಟ ಅಧಿಕಾರಗಳು ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ರೈತರು ಆರೋಪಿಸಿದ್ದಾರೆ. ಕೂಡಲೆ ಸಂಬಂಧಪಟ್ಟ ಅಧಿಕಾರಗಳು ಭೇಟಿ ನೀಡಿ ಬೆಳೆ ನಷ್ಟ ಪರಿಹಾರ ನೀಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಆಧ್ಯಾತ್ಮಿಕತೆಯಿಂದ ಮಾತ್ರ ನೆಮ್ಮದಿ ಸಾಧ್ಯ: ಚಕ್ರವರ್ತಿ ಸೂಲಿಬೆಲೆ
ಸೂಲಿಬೆಲೆ: ಹಣಕೊಟ್ಟು ನೆಮ್ಮದಿಯನ್ನು ಪಡೆಯಲು ಸಾಧ್ಯವಿಲ್ಲ. ಆಧ್ಯಾತ್ಮಕವಾಗಿ ಮನುಷ್ಯ ಕ್ರಿಯಶೀಲನಾಗಿ ದೇವರ ಸನ್ನಿದಿಯಲ್ಲಿ ಇದ್ದಾಗ ಮಾತ್ರ ನೆಮ್ಮದಿಯನ್ನು ಕಾಣಲು ಸಾಧ್ಯ. ಪ್ರತಿಯೊಬ್ಬರು ಧಾರ್ಮಿಕ ಕಾರ್ಯಗಳತ್ತ ಹೆಚ್ಚು ಆಸಕ್ತಿಯನ್ನು ಬೆಳೆಸಿಕೊಂಡು ಮಾನಸಿಕ ಸದೃಢತೆಯನ್ನು ಹೊಂದಬೇಕು ಎಂದು ಖ್ಯಾತಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟರು. ಸೂಲಿಬೆಲೆ ಪಟ್ಟಣದ ಶಿರಡಿ ಸಾಯಿಬಾಬಾ ಮಂದರಿದಲ್ಲಿ ಕಳಶ ಪ್ರತಿಷ್ಠಾಪನೆ ಅಂಗವಾಗಿ ಶುಕ್ರವಾರ ರಾತ್ರಿ ನಡೆದ ವೀಣಾ ನಾಯ್ಡು ಅವರ ಭಕ್ತಿಗಳ ರಸಮಂಜರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮನುಷ್ಯ ತಾನೂ ಎಷ್ಟೇ ಸಂಪಾದಿಸಿದರೂ ತಾನು ಮಾತ್ರ ಮಾನಸಿಕವಾಗಿ ನೆಮ್ಮದಿಯನ್ನು ಪಡೆಯುವಲ್ಲಿ ವಿಫಲನಾಗಿದ್ದಾನೆ. ಸಂಪಾದನೆ ಹೆಚ್ಚಾದಷ್ಟು ಅದರ ಮೇಲೆ ವ್ಯಾಮೋಹ ಹೆಚ್ಚಾಗಿ ಹಣವನ್ನು ಕಾಪಾಡುವಲ್ಲಿ ಹೈರಾಣಾಗುತ್ತಾನೆ. ಹಣ ಗಳಿಸುವದೇ ಜೀವನದ ಮುಖ್ಯ ಗುರಿಯಾಗಬಾರದು. ಕುಟುಂಬದೊಂದಿಗೆ ನೆಮ್ಮದಿಯಿಂದ ಕಳೆಯಲು ಅಗತ್ಯವಾಗಿರುವಷ್ಟು ಸಂಪಾದನೆ ಹೊಂದಿ, ಸಾಧ್ಯವಾಗುವಷ್ಟರ ಮಟ್ಟಿಗೆ ಧಾರ್ಮಿಕ ಕಾರ್ಯಗಳತ್ತ ಹೆಚ್ಚು ಪಾಲ್ಗೊಳ್ಳಬೇಕು. ಮಹಿಳೆಯರು ಧಾರಾವಾಹಿಗಳ ವ್ಯಾಮೋಹವನ್ನು ಬಿಟ್ಟು ದೇವರ ಚಿತ್ತದತ್ತ ಆಸಕ್ತಿವಹಿಸಬೇಕು. ಮುಂದಿನ ದಿನಗಳಲ್ಲಿ ಸೂಲಿಬೆಲೆ ಕ್ಷೇತ್ರ ಧಾರ್ಮಿಕವಾಗಿ ಹೆಚ್ಚುಹೆಸರುಗಳಿಸುವಂತಾಗಲಿ ಎಂದು ಹೇಳಿದರು. ಖ್ಯಾತಿ ಗಾಯಕಿ ವೀಣಾ ನಾಯ್ಡು ಮತ್ತು ಸಂಗಡಿಗರು ನಡೆಸಿಕೊಟ್ಟ ಭಕ್ತಿಗೀತೆಗಳ ರಸ ಮಂಜರಿ ಕಾರ್ಯಕ್ರಮ ಅಪಾರ ಸಂಖ್ಯೆಯ ಭಕ್ತರ ಗಮನ ಸೆಳೆಯಿತು. ಶಿರಡಿ ಸಾಯಿಬಾಬಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜನಾರ್ದನ್ ರೆಡ್ಡಿ, ವಸಂತ್ ಕುಮಾರ್, ಸುರೇಶ್, ಮೋಹನ್, ಜಗ್ಗಿ, ಅತ್ತಿಬೆಲೆ ಅಶ್ವತ್ಥ್, ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.
ವಿದ್ಯಾರ್ಥಿ ನಿಲಯಕ್ಕೆ ಪ್ರವೇಶ
ದೊಡ್ಡಬಳ್ಳಾಪುರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ವಿದ್ಯಾರ್ಥಿ ನಿಲಯಗಳಿಗೆ 2014-15ನೇ ಸಾಲಿಗೆ ಪ್ರವೇಶಗಳು ಆರಂಭವಾಗಿದೆ. ವಿದ್ಯಾರ್ಥಿ ನಿಲಯಗಳಲ್ಲಿ ಉಚಿತ ವಸತಿ, ಊಟ, ಪಾಠ-ಪ್ರವಚನ, ವೈದ್ಯಕೀಯ ತಪಾಸಣೆ, ನೋಟ್ ಪುಸ್ತಕ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ವಿದ್ಯಾರ್ಥಿ ನಿಲಯಗಳಿಗೆ ಸೇರಬಯಸುವ ವಿದ್ಯಾರ್ಥಿಗಳು ಜೂ.10ರೊಳಗೆ ಭಾವಚಿತ್ರ ಸಹಿತ ಜಾತಿ-ಆದಾಯ ಪ್ರಮಾಣ ಪತ್ರದೊಂದಿಗೆ ಅರ್ಜಿ ಸಲ್ಲಿಸುವಂತೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮಂಡೂರು ಗ್ರಾಮಸ್ಥರ ಮನವೊಲಿಕೆಗೆ ಯತ್ನ
ಬೆಂಗಳೂರು: ಮಂಡೂರಿನಲ್ಲಿ ಕಸ ಹಾಕದಂತೆ ಪ್ರತಿಭಟನೆಗೆ ಮುಂದಾಗಿರುವ ಸ್ಥಳೀಯರ ಮನವೊಲಿಸಲು ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ನಿರ್ಧರಿಸಿದ್ದಾರೆ. ಜೂ. 1ರಿಂದ ಮಂಡೂರು ಗ್ರಾಮಸ್ಥರು ಪ್ರತಿಭಟನೆ ಆರಂಭಿಸಲಿದ್ದು, ಸಚಿವರು, ಶಾಸಕರು ಹಾಗೂ ಪಾಲಿಕೆ ಸದಸ್ಯರು ಬೆಳಗ್ಗೆ 11ಕ್ಕೆ ಗ್ರಾಮಕ್ಕೆ ಭೇಟಿ ನೀಡಿ 1 ವರ್ಷ ಕಾಲಾವಕಾಶ ನೀಡುವಂತೆ ಮನವಿ ಮಾಡಲಿದ್ದಾರೆ. ಶಾಂತಿನಗರದ ಬಿಎಂಟಿಸಿ ನಿಲ್ದಾಣದಲ್ಲಿ ಶನಿವಾರ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ, ಮೇಯರ್ ಸತ್ಯನಾರಾಯಣ, ಶಾಸಕ ಅರವಿಂದ ಲಿಂಬಾವಳಿ ಗ್ರಾಮಸ್ಥರ ಮನವೊಲಿಸಲು ಯತ್ನಿಸಿದರು. 1 ವರ್ಷದವರೆಗೆ ತಾತ್ಕಾಲಿಕವಾಗಿ ಕಸ ವಿವೇವಾರಿಗೆ ಅವಕಾಶ ನೀಡಿದರೆ ಪರ್ಯಾಯ ಮಾರ್ಗ ಹುಡುಕಲಾಗುವುದು. ಈಗಾಗಲೇ ಪರ್ಯಾಯ ಘಟಕವನ್ನು ಹುಡುಕುತ್ತಿದ್ದು, ಸೂಕ್ತ ವ್ಯವಸ್ಥೆಯಾಗುವವರೆಗೂ ವಿಲೇವಾರಿಗೆ ಅವಕಾಶ ನೀಡಬೇಕು ಎಂದು ಕೋರಿದರು. ಕಸ ಕರಗಿಸಲು ಕ್ರಮ ಮಂಡೂರಿನಲ್ಲಿ ಹಾಕಲಾಗಿರುವ ಕಸವನ್ನು ಕರಗಿಸಲು ಕ್ರಮ ಕೈಗೊಳ್ಳಲಾಗಿದೆ. ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಸಮಸ್ಯೆ ಪರಿಹರಿಸಲಾಗುವುದು. ನಿವಾಸಿಗಳ ಆರೋಗ್ಯ ಕಾಪಾಡಲು ರಾಸಾಯನಿಕಗಳನ್ನು ಕಸದ ಮೇಲೆ ಸಿಂಪಡಿಸಲಾಗುತ್ತಿದೆ. ಸ್ಥಳೀಯರಿಗೆ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ. ಈ ಸಮಸ್ಯೆಗೆ ಪೂರ್ಣ ಪರಿಹಾರ ಕಂಡುಹಿಡಿಯಲು ಕಾಲಾವಕಾಶ ನೀಡಬೇಕು ಎಂದು ಆಯುಕ್ತ ಎಂ.ಲಕ್ಷ್ಮೀನಾರಾಯಣ ಮನವಿ ಮಾಡಿದರು.
ಡಾ. ರವೀಂದ್ರನಾಥ್ ವರ್ಗ ರದ್ದುಪಡಿಸಲು ಒತ್ತಾಯ
ಬೆಂಗಳೂರು: ಎಡಿಜಿಪಿ ಡಾ. ರವೀಂದ್ರನಾಥ ಪ್ರಕರಣದಲ್ಲಿ ಸರ್ಕಾರ ಅವಿವೇಕದಿಂದ ವರ್ತಿಸಿದ್ದು, ಅವರನ್ನು ವರ್ಗಾವಣೆ ಮಾಡಿರುವುದು ತಪ್ಪು. ತಕ್ಷಣ ರವೀಂದ್ರನಾಥ್ ಅವರನ್ನು ಹಿಂದಿನ ಸ್ಥಳಕ್ಕೆ ನಿಯೋಜಿಸಬೇಕು ಎಂದು ನ್ಯಾಯಕ್ಕಾಗಿ ನಾವು ಸಂಘಟನೆಯ ಅಗ್ನಿ ಶ್ರೀಧರ್ ಒತ್ತಾಯಿಸಿದ್ದಾರೆ. ಫೋಟೋ ತೆಗೆಯುವುದು ಅಪರಾಧವಲ್ಲ, ತೆಗೆದ ಫೋಟೋವನ್ನು ದುರ್ಬಳಕೆ ಮಾಡಿಕೊಂಡರೆ ಅಪರಾಧ. ಈ ಪ್ರಕರಣದಲ್ಲಿ ಹೊರಗಿನ ಕ್ರಿಮಿನಲ್ಗಳ ಕೈವಾಡವಿರುವ ಸಂಶಯವಿದೆ. ಎಡಿಜಿಪಿ ಅವರಿಗೇ ಈ ರೀತಿಯಾದರೆ ಸಾಮಾನ್ಯ ಜನರ ಗತಿಯೇನು. ಇದು ದುಷ್ಟ ಮತ್ತು ಶಿಷ್ಟರ ನಡುವೆ, ಅಪರಾಧಿ ಮತ್ತು ಶಿಷ್ಟರ ನಡುವೆ ನಡೆಯುತ್ತಿರುವ ಹಣಾಹಣಿಯಲ್ಲ. ಇಬ್ಬರು ಶಿಷ್ಟರ ಮಧ್ಯೆ ನಡೆಯುತ್ತಿರುವ ಯುದ್ಧ ಎಂದರು.ಈ ಪ್ರಕರಣದಲ್ಲಿ ಪಿಎಸ್ಐ ರವಿ ಅಪರಾಧವೆಸಗಿದ್ದು ಅವರ ನಡವಳಿಕೆ ಅನುಮಾನಾಸ್ಪದವಾಗಿದೆ. ಪ್ರಕರಣದಲ್ಲಿ ತೊಂದರೆಗೊಳಗಾದ ಯುವತಿಯರು ಯಾರೆಂಬುದು ಸಾರ್ವಜನಿಕರಿಗೆ ತಿಳಿದಿಲ್ಲ. ಅದೇ ರೀತಿ ಶ್ರೀಧರ್ ಎಂಬ ವ್ಯಕ್ತಿ ನಡವಳಿಕೆ ಬಗ್ಗೆಯೂ ಅನುಮಾನವಿದೆ. ಆತನನ್ನು ಪೋಲೀಸರು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.
ನಾಳೆ ರಾಜ್ಯಾದ್ಯಂತ ದಸಂಸ ಪ್ರತಿಭಟನು
ಬೆಂಗಳೂರು: ಎಡಿಜಿಪಿ ರವೀಂದ್ರನಾಥ್ ಪ್ರಕಣದಲ್ಲಿ ವ್ಯವಸ್ಥಿತ ಪಿತೂರಿ ನಡೆದಿರುವುದರಿಂದ ಅದನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಜೂನ್ 2ರಂದು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಆರ್. ಮೋಹನ್ ತಿಳಿಸಿದ್ದಾರೆ. ಡಿಜಿ ಕಚೇರಿ ಎದುರು ಪ್ರತಿಭಟನೆ ನಡೆಯಲಿದೆ.
ಎಂ. ಮಾಲಿನಿಗೆ ಪಿಎಚ್.ಡಿ ಪದವಿ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಎಂ. ಮಾಲಿನಿ ಅವರಿಗೆ ಮೈಕ್ರೋ ಬಯಾಲಜಿ ಕುರಿತ ಸಂಶೋಧನೆಗಾಗಿ ಪಿಎಚ್ಡಿ ಪದವಿ ಪದವಿ ಪ್ರದಾನ ಮಾಡಿದೆ. ಕುಲಪತಿಗಳು ಸಿಂಡಿಕೇಟ್ ಸದಸ್ಯರ ಅನುಮೋದನೆಯೊಂದಿಗೆ ಪದವಿ ನೀಡಿದ್ದು, ಅದರಂತೆ ವಿದ್ಯಾರ್ಥಿನಿಗೆ ಡಾಕ್ಟರ್ ಆಫ್ ಫಿಲಾಸಫಿ ಪದವಿ ನೀಡಲಾಗಿದೆ. ಡಾ. ಜೆ. ಸವಿತಾ ಮಾರ್ಗದರ್ಶನ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

