ಅತಂತ್ರ ಜಿಲ್ಲೆಯಲ್ಲಿ ಸ್ವತಂತ್ರರೇ ನಿರ್ಣಾಯಕ
ಬಿಜಾಪುರ: ಬಿಜಾಪುರ ಜಿಲ್ಲೆಯ 1 ನಗರಸಭೆ ಹಾಗೂ ಐದು ಪುರಸಭೆಗಳಲ್ಲಿ ಈ ಬಾರಿ ಅತಂತ್ರ ರಾಜಕಾರಣ.
ಬಿಜಾಪುರ ನಗರಸಭೆ ಸೇರಿದಂತೆ ಎಲ್ಲ ಆರು ಸಂಸ್ಥೆಗಳಲ್ಲಿ ಯಾವೊಂದು ಪಕ್ಷಕ್ಕೂ ಬಹುಮತ ಬಂದಿಲ್ಲ.
ಬಿಜಾಪುರ ನಗರಸಭೆ ಹಾಗೂ ಇಂಡಿ ಪುರಸಭೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಿದ್ದರೆ, ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿನಿಧಿಸುವ ಬಸವನ ಬಾಗೇವಾಡಿ, ಸಿಂದಗಿ ಪುರಸಭೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗಳಿಸಿದೆ. ಮುದ್ದೇಬಿಹಾಳ ಮತ್ತು ಅದೇ ತಾಲೂಕಿನ ತಾಳಿಕೋಟೆ ಪುರಸಭೆಯಲ್ಲಿ ಪಕ್ಷೇತರರದ್ದೇ ಪಾರಮ್ಯ. ಇಲ್ಲಿ ಹೆಚ್ಚಿನ ಸ್ಥಾನಗಳನ್ನು ಅವರೇ ಗೆದ್ದಿದ್ದು, ಅವರ ಬಳಿಯೇ ಅಧಿಕಾರ ಉಳಿಯಲಿದೆ.
ಜೆಡಿಎಸ್ ನಿರ್ಣಾಯಕ: ಬಿಜಾಪುರ ನಗರಸಭೆ ಮತ್ತು ಸಿಂದಗಿ ಪುರಸಭೆಯಲ್ಲಿ ಜೆಡಿಎಸ್ ನಿರ್ಣಾಯಕ ಪಾತ್ರ ವಹಿಸಲಿದೆ. ಈ ಎರಡೂ ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್ ತಲಾ 8 ಸ್ಥಾನ ಗೆಲ್ಲುವ ಮೂಲಕ ಯಾರೇ ಅಧಿಕಾರ ಹಿಡಿಯಬೇಕಾದರೂ ತನ್ನ ನೆರವು ಅನಿವಾರ್ಯವೆಂದು ಸಾರಿದೆ. ನಗರಸಭೆಯ 35 ಸ್ಥಾನದಲ್ಲಿ ಬಿಜೆಪಿ 13, ಕಾಂಗ್ರೆಸ್ 10, ಜೆಡಿಎಸ್ 8 ಸ್ಥಾನ ಗೆದ್ದಿದೆ. ಕೆಜೆಪಿ, ಎನ್‌ಸಿಪಿ ತಲಾ 1 ಸ್ಥಾನ ಹಾಗೂ ಇಬ್ಬರು ಪಕ್ಷೇತರರು ಜಯ ಸಾಧಿಸಿದ್ದಾರೆ.
ಸಿಂದಗಿಯ 23 ಸ್ಥಾನಗಳಲ್ಲಿ ಕಾಂಗ್ರೆಸ್ 10 ಸ್ಥಾನ ಗಳಿಸಿದ್ದರೆ ಜೆಡಿಎಸ್ 8, ಬಿಜೆಪಿ ಕೇವಲ 3 ಸ್ಥಾನ ಗೆದ್ದಿದೆ. ಪಕ್ಷೇತರರು ಎರಡು ಕಡೆ ಜಯ ಸಾಧಿಸಿದ್ದಾರೆ. ಸಿಂದಗಿಯಲ್ಲಿ ಜೆಡಿಎಸ್ ಸಹ ಅಧಿಕಾರದ ಗದ್ದುಗೆ ಏರಲು ಯತ್ನ ಮಾಡುತ್ತಿದೆ. ಇನ್ನುಳಿದಂತೆ ಬಸವನ ಬಾಗೇವಾಡಿ ಕಾಂಗ್ರೆಸ್ 10, ಬಿಜೆಪಿ 7 ಹಾಗೂ 6 ಪಕ್ಷೇತರರು ಆಯ್ಕೆಯಾಗಿದ್ದು, ಪಕ್ಷೇತರರ ಕೈಯ್ಯಲ್ಲಿ ಆಡಳಿತದ ಕೀಲಿಕೈ ಇರಲಿದೆ.
ಮೂರು ಪಕ್ಷದ ಅಧಿಕಾರ: 23 ಸ್ಥಾನ ಹೊಂದಿರುವ ಇಂಡಿ ಪುರಸಭೆಯಲ್ಲಿ ಮೂರು ಪಕ್ಷಗಳು (ಅಥವಾ ಪಕ್ಷೇತರರು) ಸೇರಿ ಅಧಿಕಾರ ನಡೆಸಬೇಕಾದ ಸ್ಥಿತಿ ಇದೆ. ಯಾವುದೇ ಎರಡು ಪಕ್ಷ ಸೇರಿದರೂ ಇಲ್ಲಿ ಅಧಿಕಾರ ಸಾಧ್ಯವಿಲ್ಲ. ಪಕ್ಷೇತರರು ಅಥವಾ, ಜೆಡಿಎಸ್, ಕೆಜೆಪಿ ಬೆಂಬಲ ಅತ್ಯಗತ್ಯ. ಕಾಂಗ್ರೆಸ್, ಬಿಜೆಪಿ ಪರಸ್ಪರ ಮೈತ್ರಿ ಮಾಡಿಕೊಂಡರೆ ಅಧಿಕಾರ ರಚಿಸಬಹುದಾದರೂ ಇದು ಅಸಾಧ್ಯದ ಮಾತು ಎಂದೇ ಹೇಳಲಾಗಿದೆ. ಕಾಂಗ್ರೆಸ್ 7, ಬಿಜೆಪಿ 8, ಜೆಡಿಎಸ್ 3 ಸ್ಥಾನ ಗಳಿಸಿದ್ದರೆ, ಕೆಜೆಪಿ ಸಹ 3 ಸ್ಥಾನ ಗೆದ್ದಿದ್ದು, ಇಬ್ಬರು ಪಕ್ಷೇತರರು ಗೆದ್ದಿದ್ದಾರೆ.
23 ಸ್ಥಾನಗಳನ್ನು ಹೊಂದಿರುವ ಬಸವನ ಬಾಗೇವಾಡಿ ಪುರಸಭೆಯಲ್ಲಿ ಕಾಂಗ್ರೆಸ್ 10 ಸ್ಥಾನ ಗೆದ್ದಿದೆ. ಬಿಜೆಪಿ 7 ಸ್ಥಾನ ಗಳಿಸಿದ್ದು, ಸಚಿವ ಬೆಳ್ಳುಬ್ಬಿ ಅವರಿಗೆ ಹಿನ್ನಡೆಯಾಗಿದೆ. ತಾಳಿಕೋಟೆ ಪುರಸಭೆಯ 23 ಸ್ಥಾನಗಳಲ್ಲಿ 19 ಪಕ್ಷೇತರರು ತಮ್ಮ ಪ್ರಾಬಲ್ಯ ಮೆರೆದಿದ್ದು, ಕಾಂಗ್ರೆಸ್ 3 ಹಾಗೂ ಬಿಜೆಪಿ 1 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿವೆ. ಮುದ್ದೇಬಿಹಾಳ ಪುರಸಭೆಯ 23 ಸ್ಥಾನಗಳಲ್ಲಿ 12 ಮಂದಿ ಪಕ್ಷೇತರರು ಆಯ್ಕೆಯಾಗುವ ಮೂಲಕ ಪುರಸಭೆಯ ಅಧಿಕಾರ ಗದ್ದುಗೆ ಹಿಡಿಯಲು ದಾಪುಗಾಲು ಇಟ್ಟಿದ್ದಾರೆ. ಜೆಡಿಎಸ್ 6, ಕಾಂಗ್ರೆಸ್ 4 ಹಾಗೂ ಬಿಜೆಪಿ 1 ಸ್ಥಾನ ಪಡೆದಿವೆ. ಕಾಂಗ್ರೆಸ್ ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಅವರಿಗೆ ಇಲ್ಲಿ ಹಿನ್ನಡೆಯಾಗಿದೆ.
ಹಾಗಾಗಿ ಜಿಲ್ಲೆಯಲ್ಲಿ ಜೆಡಿಎಸ್, ಕೆಜೆಪಿ, ಪಕ್ಷೇತರರಿಗೆ ಭಾರೀ ಡಿಮ್ಯಾಂಡ್ ಎದುರಾಗುವ ಸಾಧ್ಯತೆ ಇದೆ. ಎರಡು ರಾಜಕೀಯ ಪಕ್ಷಗಳು ಅಧಿಕಾರದ ಗದ್ದುಗೆ ಏರಲು ಈಗಲೇ ಪೈಪೋಟಿ ನಡೆಸಿದ್ದು, ಪಕ್ಷೇತರರು ಇನ್ನಿತರ ಸಣ್ಣ ಪುಟ್ಟ ಪಕ್ಷಗಳನ್ನು ಸಳೆಯಲು ಯತ್ನಿಸುತ್ತಿದೆ.
-ರುದ್ರಪ್ಪ ಆಸಂಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

