ಚಾಮರಾಜನಗರ: ತಾಲೂಕಿನ ಮೂಕನಪಾಳ್ಯ, ಕೋಳಿಪಾಳ್ಯ ಹಾಗೂ ಜಿಲ್ಲಾ ಕೇಂದ್ರದಲ್ಲಿ ಇತ್ತೀಚೆಗೆ ಬಾಲ್ಯವಿವಾಹ ನಡೆಸಲು ಮುಂದಾಗಿದ್ದ ಪ್ರಕರಣಗಳನ್ನು ತಡೆದು ಅರಿವು ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಕ್ಕಳ ರಕ್ಷಣಾ ಘಟಕವು ಯಶಸ್ವಿಯಾಗಿದೆ.
ಜ.15ರಂದು ಮೂಕನಪಾಳ್ಯ, ಕೋಳಿಪಾಳ್ಯ ಗ್ರಾಮಗಳಲ್ಲಿ ಬಾಲ್ಯವಿವಾಹಗಳನ್ನು ನೆರವೇರಿಸಲು 6 ಕುಟುಂಬಗಳು ಸಿದ್ಧತೆ ನಡೆಸಿವೆ ಎಂಬ ಮಾಹಿತಿ ಮೇರೆಗೆ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಕುಟುಂಬದ ಮುಖ್ಯಸ್ಥರ ಮನವೊಲಿಸಿ ಬಾಲ್ಯವಿವಾಹ ತಡೆಗಟ್ಟಿದ್ದಾರೆ. ಆರಂಭದಲ್ಲಿ ತೀವ್ರ ಪ್ರತಿರೋಧ ತೋರಿದರೂ ಇಲಾಖಾ ಅಧಿಕಾರಿಗಳು ಅಂತಿಮವಾಗಿ ಬಾಲ್ಯವಿವಾಹ ನಡೆಯದಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲಾ ಕೇಂದ್ರದಲ್ಲೂ ಕಾರ್ಯಾಚರಣೆ: ಜ.17ರಂದು ನಗರದ ಗುಂಡ್ಲುಪೇಟೆ ರಸ್ತೆಯಲ್ಲಿರುವ ಮೌಲಾನಾ ಆಜಾದ್ ಕಮಿಟಿ ಹಾಲ್‌ನಲ್ಲಿ ಬಾಲ್ಯವಿವಾಹ ಜರುಗುವ ಬಗ್ಗೆ ಬೆಂಗಳೂರು ಇಲಾಖಾ ಆಯುಕ್ತರ ಕಚೇರಿಯಿಂದ ಮಾಹಿತಿ ತಲುಪಿತು. ಆ ಹಿನ್ನೆಲೆಯಲ್ಲಿ ಹಿಂದಿನ ದಿನವೇ ಭೇಟಿ ಕೊಟ್ಟು, ವಧುವಿನ ಶಾಲಾ ದಾಖಲಾತಿ ಪರಿಶೀಲಿಸಿದಾಗ ಇನ್ನೂ 18 ವರ್ಷ ಪೂರ್ಣವಾಗಿಲ್ಲದಿರುವುದು ಕಂಡು ಬಂತು. ಪೋಷಕರಿಗೆ ಬಾಲ್ಯವಿವಾಹ ನಿಷೇಧ ಅಧಿನಿಯಮ ಕುರಿತು ಮಾಹಿತಿ ಒದಗಿಸಿ ನಡೆಯಲಿದ್ದ ಬಾಲ್ಯವಿವಾಹವನ್ನು ತಡೆಹಿಡಿಯಲಾಯಿತು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶೆಹರ್ ಬಾನು ತಿಳಿಸಿದ್ದಾರೆ.