ಚಿಕ್ಕಮಗಳೂರು

ಪ್ರಚಾರ: ಬಿಜೆಪಿ ಮುಂದೆ, ಕಾಂಗ್ರೆಸ್ ಹಿಂದೆ

Published On :

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಏ. 2
ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಿಗೆ ಮೇ 5 ರಂದು ಮತದಾನ ನಡೆಯಲಿದ್ದು, ಈ ಕದನದಲ್ಲಿ ಜಯಶಾಲಿಯಾಗಲು ಎಲ್ಲಾ ರಾಜಕೀಯ ಪಕ್ಷಗಳು ತಂತ್ರ, ಪ್ರತಿತಂತ್ರಗಳನ್ನು  ಹೆಣೆಯುತ್ತಿವೆ.
 ಪ್ರತಿಪಕ್ಷಗಳ ಚಕ್ರವ್ಯೂಹದಿಂದ ಪಾರಾಗಲು ಬಿಜೆಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇನ್ನು ಇತರೆ ಪಕ್ಷಗಳು ಸಹಜವಾಗಿ ಗೆಲ್ಲುವ ಆತ್ಮವಿಶ್ವಾಸದೊಂದಿಗೆ ಚುನಾವಣಾ ತಯಾರಿ ಮಾಡಿಕೊಳ್ಳುತ್ತಿವೆ. ಮಾ. 20ರಂದು ರಾಜ್ಯ ಚುನಾವಣಾ ಆಯೋಗ ಮತದಾನದ ದಿನಾಂಕ ಪ್ರಕಟಗೊಳಿಸಿ, ನೀತಿ ಸಂಹಿತೆ ಜಾರಿಗೊಳಿಸುತ್ತಿದ್ದಂತೆ  ರಾಜಕೀಯ ಪಕ್ಷಗಳಿಗೆ ತರಾತುರಿಯಲ್ಲಿ ಸಿದ್ಧತೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ.
8ದಿನ ಬಾಕಿ: ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲು ಇನ್ನು 8 ದಿನ ಮಾತ್ರ ಉಳಿದುಕೊಂಡಿದೆ. ಆದ್ದರಿಂದ  ಎಲ್ಲಾ ರಾಜಕೀಯ ಪಕ್ಷದವರು ತಮ್ಮ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲು ಕಸರತ್ತು ನಡೆಸುತ್ತಿವೆ. ಹೆಸರು ಪ್ರಕಟಕ್ಕೆ ಎಷ್ಟೇ ವಿಳಂಬ ಮಾಡಿದರೂ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಏ. 17 ರೊಳಗೆ ಸ್ಪಷ್ಟ ಚಿತ್ರಣ ಹೊರಗೆ ಬರಲೇಬೇಕಾಗಿದೆ.
ಬಿಜೆಪಿ: ಚಿಕ್ಕಮಗಳೂರು ಜಿಲ್ಲೆಯ ಐದು ಕ್ಷೇತ್ರಗಳನ್ನು ಬಿಜೆಪಿ ತನ್ನ ಮಡಿಲಿಗೆ ಹಾಕಿಕೊಂಡಿತ್ತು. ತರೀಕೆರೆ ಶಾಸಕ ಡಿ.ಎಸ್. ಸುರೇಶ್ ಕೆಜೆಪಿಗೆ ಹೋಗಿದ್ದಾರೆ. ಕಡೂರು ಶಾಸಕ ಡಾ. ವೈ.ಸಿ. ವಿಶ್ವನಾಥ್ ಈ ಬಾರಿ ಸ್ಪರ್ಧೆ ಮಾಡುವುದಿಲ್ಲ ಎಂದು ಈಗಾಗಲೇ ಹೇಳಿದ್ದಾರೆ. ಇನ್ನುಳಿದಂತೆ ಚಿಕ್ಕಮಗಳೂರಿನಿಂದ ಸಿ.ಟಿ. ರವಿ, ಶೃಂಗೇರಿಯಿಂದ ಡಿ.ಎನ್. ಜೀವರಾಜ್, ಮೂಡಿಗೆರೆಯಿಂದ ಎಂ.ಪಿ. ಕುಮಾರಸ್ವಾಮಿ ಸ್ಪರ್ಧಿಸಲಿದ್ದಾರೆ. 2 ಬಾರಿ ಬಿಜೆಪಿ ಶಾಸಕರಾಗಿರುವ ಇವರು ಮತ್ತೆ ಸ್ಪರ್ಧೆ ಮಾಡುತ್ತಿದ್ದಾರೆ.
ಜನಾಭಿಪ್ರಾಯ ಸಂಗ್ರಹ: ಸಚಿವ ಸಿ.ಟಿ. ರವಿ, ಗ್ರಾಮಾಂತರ ಪ್ರದೇಶಗಳಲ್ಲಿ ಜನಾಭಿಪ್ರಾಯ ಸಂಗ್ರಹ, ಬೂತ್ ಮಟ್ಟದ ಶಕ್ತಿ ಕೇಂದ್ರದ ಕಾರ್ಯಕ್ರಮದಲ್ಲಿ ನಿರಂತರವಾಗಿ ತೊಡಗಿದ್ದಾರೆ. ನಗರ ಪ್ರದೇಶದಲ್ಲೂ ಪಕ್ಷದ ಮುಖಂಡರ, ಕಾರ್ಯಕರ್ತರ ಸಭೆಯನ್ನು ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಸಿ.ಟಿ. ರವಿ ಅವರ  ಭಾವಚಿತ್ರವಿರುವ ತೆರೆದ ವಾಹನವನ್ನು ಬಿಜೆಪಿ ಕಚೇರಿಯ ಆವರಣದಲ್ಲಿ ಸಿದ್ಧಪಡಿಸಲಾಗುತ್ತಿದೆ. ಸಚಿವ ಡಿ.ಎನ್. ಜೀವರಾಜ್ ಹಾಗೂ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
 ತರೀಕೆರೆ ಹಾಗೂ ಕಡೂರು ಕ್ಷೇತ್ರಗಳಲ್ಲಿ ಬಿಜೆಪಿ ಪ್ರಚಾರದಲ್ಲಿ ಹಿಂದುಳಿದಿದೆ. ಕಾರಣ, ಈ ಕ್ಷೇತ್ರಗಳಿಂದ ಸ್ಪರ್ಧೆ ಮಾಡುವ ಅಭ್ಯರ್ಥಿಗಳ ಹೆಸರು ಅಂತಿಮಗೊಂಡಿಲ್ಲ. ಟಿಕೆಟ್‌ಗಾಗಿ ಪ್ರಯತ್ನಿಸುತ್ತಿರುವ ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಬೀರೂರು ದೇವರಾಜ್ ಅವರು ಪ್ರತ್ಯೇಕ ಸಭೆ ನಡೆಸುತ್ತಿದ್ದಾರೆ. ಇನ್ನು ತರೀಕೆರೆ ಕ್ಷೇತ್ರದಲ್ಲಿ ಅಭ್ಯರ್ಥಿ ಅಂತಿಮಗೊಂಡಿಲ್ಲ. ಆದರೂ ಸೋಮವಾರ ಬಿಜೆಪಿ ಬೂತ್ ಮಟ್ಟದ ಸಭೆ ನಡೆಯಿತು.
ಜೆಡಿಎಸ್- ಕೆಜೆಪಿ
 ಚಿಕ್ಕಮಗಳೂರು ಹಾಗೂ ಕಡೂರು ಕ್ಷೇತ್ರಗಳನ್ನು ಹೊರತುಪಡಿಸಿದರೆ ಇನ್ನುಳಿದ 3 ಕ್ಷೇತ್ರಗಳಲ್ಲಿ ಜೆಡಿಎಸ್‌ನ ಪ್ರಚಾರ ಅಷ್ಟಾಗಿ ನಡೆಯುತ್ತಿಲ್ಲ. ಕಡೂರು ಕ್ಷೇತ್ರದಲ್ಲಿ ವೈಎಸ್‌ವಿ ದತ್ತ ಅವರು ಈಗಾಗಲೇ ಒಂದು ಸುತ್ತಿನ ಪ್ರಚಾರ ಕೆಲಸವನ್ನು ಸದ್ದಿಲ್ಲದೆ ಮುಗಿಸಿದ್ದಾರೆ. ಚಿಕ್ಕಮಗಳೂರು ಕ್ಷೇತ್ರದಲ್ಲಿ ಎಸ್.ಎಲ್. ಧರ್ಮೇಗೌಡ ಹಾಗೂ ಅವರ ಸಹೋದರ ಎಸ್.ಎಲ್. ಭೋಜೇಗೌಡ ನಿರಂತರವಾಗಿ ಪ್ರಚಾರದಲ್ಲಿ ತೊಡಗಿದ್ದಾರೆ.
 ಕೆಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಗೊಂಡಿದ್ದು, ತರೀಕೆರೆ ಕ್ಷೇತ್ರದಿಂದ ಡಿ.ಎಸ್. ಸುರೇಶ್, ಕಡೂರಿನಿಂದ ಬೆಳ್ಳಿ ಪ್ರಕಾಶ್ ಸ್ಪರ್ಧಿಸಲಿದ್ದಾರೆ. ಇವರು ತಮ್ಮ ಕ್ಷೇತ್ರದಲ್ಲಿ ಮತಯಾಚನೆ ಮಾಡುತ್ತಿದ್ದಾರೆ.
ಇನ್ನುಳಿದ ಮೂರು ಕ್ಷೇತ್ರಗಳಿಗೆ ಕೆಜೆಪಿ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ. ಅದುದರಿಂದ ಇಲ್ಲಿ ಪ್ರಚಾರ ನಡೆಯುತ್ತಿಲ್ಲ.
ಕಾಂಗ್ರೆಸ್
ಬೇರೆ ಪಕ್ಷಗಳಿಗೆ ಹೋಲಿಸಿದರೆ ಪ್ರಚಾರ ವಿಚಾರದಲ್ಲಿ ಕಾಂಗ್ರೆಸ್ ಜಿಲ್ಲೆಯಲ್ಲಿ ಹಿನ್ನಡೆ ಸಾಧಿಸಿದೆ.
ಟಿಕೆಟ್ ಆಕಾಂಕ್ಷಿಗಳು, ಬೆಂಗಳೂರು, ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಅವರುಗಳು ಅಲ್ಲಿಂದಲೇ ಕ್ಷೇತ್ರದಲ್ಲಿ ತಮ್ಮ ಬೆಂಬಲಿಗರ ಮೂಲಕ ಗಾಳಿ ಸುದ್ದಿ ಹರಡಿಸುತ್ತಿದ್ದಾರೆ.
 ಇನ್ನು ಕೆಲವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕೆಲವು ಪಕ್ಷದ ಕೆಲವು ಮುಖಂಡರು ಹಾಗೂ ಕಾರ್ಯಕರ್ತರನ್ನು ಸೇರಿಸಿ ಪ್ರತ್ಯೇಕ ಸಭೆ ನಡೆಸುತ್ತಿದ್ದಾರೆ. ಈ ರೀತಿಯ ಸಭೆಗಳು ಕಡೂರು ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿವೆ.
  ಕ್ಷೇತ್ರದ ಗ್ರಾಮಾಂತರ ಪ್ರದೇಶಗಳಲ್ಲಿ ಶಾಂತೇಗೌಡ ಅವರು ಪ್ರಚಾರದಲ್ಲಿ ತೊಡಗಿದ್ದಾರೆ. ತರೀಕೆರೆ, ಮೂಡಿಗೆರೆ ಹಾಗೂ ಶೃಂಗೇರಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಆರಂಭಿಸಿಲ್ಲ. ಪ್ರಚಾರದಲ್ಲಿ ಹಿನ್ನಡೆ, ಇದು ಕಾಂಗ್ರೆಸ್ ಇತ್ತೀಚಿನ ವರ್ಷಗಳಲ್ಲಿ ಬೆಳೆಸಿಕೊಂಡು ಬರುತ್ತಿರುವ ಸಂಪ್ರದಾಯ. ಈ ವರ್ಷವೂ ಅದೇ ಚಾಳಿ ಮುಂದುವರೆಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.