ರಸ್ತೆಯಾಗಿಲ್ಲವೆಂದು ಸಾಬೀತಾದರೆ ಸ್ಪರ್ಧಿಸಲ್ಲ
ಕ.ಪ್ರ ವಾರ್ತೆ, ಸಖರಾಯಪಟ್ಟಣ, ಏ.2
ಯಾವುದೇ ಒಂದು ಕಾಲೋನಿ ಅಥವಾ ತಾಂಡ್ಯಗಳಲ್ಲಿ ಕಾಂಕ್ರಿಟ್ ರಸ್ತೆಯಾಗಿಲ್ಲ ಎಂಬುದನ್ನು ಪ್ರತಿಪಕ್ಷಗಳು ಸಾಬೀತುಪಡಿಸಿದರೆ ವಿಧಾನಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲವೆಂದು ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಸವಾಲು ಹಾಕಿದ್ದಾರೆ.
ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಬಿಜೆಪಿ ಲಂಬಾಣಿ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಅಧಿಕಾರದಲ್ಲಿದ್ದಾಗ ತಾಂಡ್ಯಗಳು ಹಾಗೂ ಕಾಲೋನಿಗಳ ರಸ್ತೆಯನ್ನು ಅಭಿವೃದ್ಧಿಪಡಿಸುವ ಚಿಂತನೆ ಇರಲಿಲ್ಲವೇ ಎಂದು ಪ್ರಶ್ನಿಸಿದ ಅವರು, ಲಂಬಾಣಿ ಜನಾಂಗವನ್ನು ಉಳಿದೆಲ್ಲಾ ಪಕ್ಷಗಳು ಸಂಪೂರ್ಣ ಕಡೆಗಣಿಸಿದ್ದವು. ಅತ್ಯಂತ ಹಿಂದುಳಿದಿದ್ದ ಜನಾಂಗದ ಅಭಿವೃದ್ಧಿಗಾಗಿ ಲಂಬಾಣಿ ಅಭಿವೃದ್ಧಿ ನಿಗಮ ಸ್ಥಾಪಿಸಿ ಹೆಚ್ಚಿನ ಅನುದಾನ ನೀಡಿದ್ದು ಬಿಜೆಪಿ ಎಂಬುದನ್ನು ಜನತೆ ಗಮನಿಸಬೇಕು. ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಎಲ್ಲಾ ರಸ್ತೆಗಳನ್ನು ಕಾಂಕ್ರಿಟ್ ರಸ್ತೆಗಳನ್ನಾಗಿ ಬದಲಾಯಿಸಿ ಬಡವರಿಗೆ ಅನುಕೂಲ ಮಾಡಲಾಗಿದೆ ಎಂದರು.
ಎಲ್ಲರೂ ಒಗ್ಗಟ್ಟಾಗಿ: ಚುನಾವಣೆ ಬಂದಾಗ ಮಾಂಸದೂಟ ಹಾಕಿ, ಆಣೆ ಮೂಲಕ ಪುಸಲಾಯಿಸಿ ಮತ ಪಡೆದ ನಂತರ ಅವರನ್ನು ವಂಚಿಸಿದ್ದೇ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಸಾಧನೆ. ನಗರಸಭಾ ಚುನಾವಣೆ ಪೂರ್ಣಗೊಂಡ ಬಳಿಕ ಈ ಪಕ್ಷಗಳು ಸೇರಿದಂತೆ ಉಳಿದೆಲ್ಲರೂ ಸಭೆ ಸೇರಿ ಚರ್ಚಿಸಿ ಎಲ್ಲರೂ ಒಗ್ಗಟ್ಟಾಗದಿದ್ದರೆ ಸಿ.ಟಿ. ರವಿಯನ್ನು ಸೋಲಿಸಲು ಸಾಧ್ಯವಿಲ್ಲ. ಸರ್ವ ಸಮ್ಮತವಾಗಿ ಸಿಂಗಲ್ ಕ್ಯಾಂಡಿಡೇಟನ್ನು ಕಣಕ್ಕಿಳಿಸುವ ಮೂಲಕ ರವಿಯನ್ನು ಸೋಲಿಸಬೇಕೆಂದು ಯೋಜನೆ ರೂಪಿಸುತ್ತಿದ್ದಾರೆ. ಆದರೆ ಬಿಜೆಪಿಯನ್ನು ಏಕೆ ಸೋಲಿಸಬೇಕು ಎಂಬುದನ್ನು ಪ್ರತಿಪಕ್ಷಗಳು ಮತದಾರರಿಗೆ ತಿಳಿಸಿಕೊಡಬೇಕಿದೆ ಎಂದು ಹೇಳಿದರು.
ಕಡೂರು- ಚಿಕ್ಕಮಗಳೂರು ರಸ್ತೆಯನ್ನು ಸಂಪೂರ್ಣ ಅಭಿವೃದ್ಧಿಪಡಿಸಲಾಗಿದೆ. ಮುಂದೆ ಈ ರಸ್ತೆ ಹಾಗೂ ಚಿಕ್ಕಮಗಳೂರು ಮೂಡಿಗೆರೆ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಮಾರ್ಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಜಿಪಂ ಉಪಾಧ್ಯಕ್ಷೆ ಮಾಲಿನಿಬಾಯಿ ರಾಜಾನಾಯ್ಕ ಮಾತನಾಡಿ, ಸಿ.ಟಿ. ರವಿ ಶಾಸಕರಾಗಿ ಆಯ್ಕೆಯಾದ ನಂತರ ಕ್ಷೇತ್ರವನ್ನು ಸಂಪೂರ್ಣ ಅಭಿವೃದ್ಧಿಪಡಿಸಿದ್ದಾರೆ. ಅತ್ಯಂತ ಹಿಂದುಳಿದ ಹಾಗೂ ರಾಜಕೀಯವಾಗಿ ಹೆಚ್ಚಿನ ಸ್ಥಾನಮಾನ ಗಳಿಸಲು ಸಾಧ್ಯವಾಗದಿದ್ದ ಲಂಬಾಣಿ ಜನಾಂಗಕ್ಕೆ ಸೇರಿದ ತಮ್ಮನ್ನು ಜಿಪಂ ಉಪಾಧ್ಯಕ್ಷೆಯನ್ನಾಗಿ ಹಾಗೂ ಲಕ್ಷ್ಮಣನಾಯ್ಕ ಅವರನ್ನು ಎಪಿಎಂಸಿ ಅಧ್ಯಕ್ಷರನ್ನಾಗಿಸಿದ ಕೀರ್ತಿ ಸಚಿವ ರವಿ ಅವರಿಗೆ ಸಲ್ಲಬೇಕು ಎಂದರು.
ಕಾಮಗಾರಿಗೆ ಮಂಜೂರಾತಿ: ಜಿಪಂ ಸದಸ್ಯ ಕಲ್ಮರುಡಪ್ಪ ಮಾತನಾಡಿ, ತಮಗೆ ಮತ ಕೊಟ್ಟು ಬೆಂಬಲ ನೀಡಿದ ಜನತೆಗೆ ಮೋಸ ಮಾಡದೆ ಅತಿ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡುವ ಮೂಲಕ ಸಿ.ಟಿ. ರವಿ ಜನತೆಯ ಋಣ ತೀರಿಸಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಶೇ.90ರಷ್ಟು ರಸ್ತೆ ಕಾಮಗಾರಿಗಳು ಪೂರ್ಣಗೊಂಡಿವೆ. ಉಳಿದ ರಸ್ತೆಗಳ ಕಾಮಗಾರಿಗಳಿಗೂ ಈಗಾಗಲೇ ಮಂಜೂರಾತಿ ದೊರೆತಿದ್ದು ಕೆಲಸ ಆರಂಭವಾಗಬೇಕಿವೆ ಎಂದರು.
ಈ ಹಿಂದೆ ಅಧಿಕಾರದಲ್ಲಿದ್ದವರು ಜನತೆಯನ್ನು ಹೆದರಿಸಿ, ಬೆದರಿಸುವ ಮೂಲಕ ಮತ ಪಡೆಯುತ್ತಿದ್ದರು. ಆದರೆ ಸಚಿವರು ಜನತೆಯನ್ನು ಪ್ರೀತಿ, ವಿಶ್ವಾಸದಿಂದ ಕಂಡಿದ್ದಾರೆ. ಈ ಚುನಾವಣೆಯಲ್ಲಿ 25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವ ಕೆಲಸವನ್ನು ಕ್ಷೇತ್ರದ ಜನತೆ ಮಾಡಬೇಕಿದೆ ಎಂದು ಹೇಳಿದರು.
ತಾಪಂ ಉಪಾಧ್ಯಕ್ಷ ಪುಟ್ಟೇಗೌಡ, ಸದಸ್ಯ ಕನಕರಾಜ್, ಕಡೂರು ಎ.ಪಿ.ಎಂ.ಸಿ. ಅಧ್ಯಕ್ಷ ಲಕ್ಷ್ಮಣನಾಯ್ಕ, ಮಾಜಿ ಅಧ್ಯಕ್ಷ ಕೆ.ಪಿ. ವೆಂಕಟೇಶ್, ಸಿ.ಡಿ.ಎ. ಮಾಜಿ ಅಧ್ಯಕ್ಷ ಕೋಟೆ ರಂಗನಾಥ್, ಜಿಲ್ಲಾ ಕಾರ್ಯದರ್ಶಿ ವರಸಿದ್ದಿ ವೇಣುಗೋಪಾಲ್, ರವಿ, ಕೃಷ್ಣಸ್ವಾಮಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

