ಅಧಿಕಾರ ಪಿತ್ರಾರ್ಜಿತ ಆಸ್ತಿ ಅಲ್ಲ: ಸಿ.ಟಿ. ರವಿ
ಕಭವಾರ್ತೆ,ಚಿಕ್ಕಮಗಳೂರು, ಏ. 4
ರಾಜಕೀಯ, ಅಧಿಕಾರ ಪಿತ್ರಾರ್ಜಿತ ಆಸ್ತಿ ಅಲ್ಲ. ನನ್ನ ಮೇಲೆ ಮತದಾರರು ಪ್ರೀತಿ, ವಿಶ್ವಾಸ ಇಟ್ಟು ಗೆಲ್ಲಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಹುಲಿಕೆರೆ ಮತ್ತು ದೇವನೂರಿನಲ್ಲಿ ಗುರುವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಯಭೀತಿ ಹುಟ್ಟುಹಾಕಿ ರಾಜಕಾರಣ ಮಾಡುವವರು ನಾವಲ್ಲ. ಪ್ರೀತಿ ವಿಶ್ವಾಸದ ರಾಜಕಾರಣ ಮಾತ್ರ ನಮಗೆ ಗೊತ್ತಿದೆ. ಅಧಿಕಾರ ಯಾರಿಗೂ ಶಾಶ್ವತವಲ್ಲ.
ಅಧಿಕಾರವಧಿಯಲ್ಲಿ ಉತ್ತಮ ಕೆಲಸ ಮಾಡಿದ ಹೆಮ್ಮೆ ನನಗಿದೆ ಎಂದರು.
ಉತ್ತಮ ಕೆಲಸ ಮಾಡಿದ್ದೇನೆ: ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದಾಗಲೂ ಹಾಗೂ ಇಲ್ಲದಿದ್ದಾಗಲೂ ಜನರ ಕಷ್ಟಸುಖಗಳಿಗೆ ಸ್ಪಂದಿಸಿದೆ. ಅಧಿಕಾರದಲ್ಲಿಲ್ಲದಿದ್ದಾಗ ಎಲ್ಲರೂ ಒಗ್ಗಟ್ಟಿನಿಂದ ಇದ್ದು, ಸದೃಢಗೊಳಿಸಿದ್ದೆವು. ನಿಚ್ಚಳ ಬಹುಮತ ದೊರೆಯದಿದ್ದ ಹಿನ್ನೆಲೆಯಲ್ಲಿ ಮಾಡಿದ ಆಪರೇಷನ್ ಕಮಲ ಪಕ್ಷಕ್ಕೆ ವಿಷವಾಗಿ ಪರಿಣಮಿಸಿತು. ಈ ಬಾರಿ ಮತದಾರರು ಪೂರ್ಣ ಬಹುಮತ ನೀಡಿ ಪಕ್ಷಕ್ಕೆ ಆಡಳಿತ ಮಾಡುವ ಆದೇಶ ನೀಡಿದಲ್ಲಿ ಅವರ ವಿಶ್ವಾಸಕ್ಕೆ ದಕ್ಕೆ ಬರದಂತೆ ಆಡಳಿತ ನಡೆಸಲಾಗುವುದು ಎಂದು ಹೇಳಿದರು.
800 ಕೋಟಿ ಅನುದಾನ: ಹಿಂದೆ ಅಧಿಕಾರದಲ್ಲಿದ್ದ ಸಚಿವರು ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಅಡ್ರೆಸ್ ಇಲ್ಲದೆ ಹೋಗಿದ್ದಾರೆ. ರಾಜ್ಯದಲ್ಲಿ ಯಾವ ಮಂತ್ರಿಗೂ ಸಿಗದ ಪ್ರೀತಿ ವಿಶ್ವಾಸ ನನಗೆ ದೊರೆತಿದೆ. ಅಭಿವೃದ್ಧಿಗೆ 800 ಕೋಟಿಗೂ ಹೆಚ್ಚು ಅನುದಾನ ತಂದು ಪ್ರತಿ ಪಂಚಾಯಿತಿಯ ಅಭಿವೃದ್ಧಿಗೆ ಕಾಂಕ್ರೀಟ್ ರಸ್ತೆ, ಡಾಂಬರೀಕರಣ ರಸ್ತೆ, ಆಶ್ರಯ ಮನೆಗಳು ಹಿಂದೆಂದೂ ಕಂಡಿರದಷ್ಟು ಪ್ರಮಾಣದಲ್ಲಿ ನನ್ನ ಅವಧಿಯಲ್ಲಿ ಆಗಿರುವುದು ವಿರೋಧ ಪಕ್ಷದವರಿಗೆ ನಡುಕ ಉಂಟುಮಾಡಿದೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಕಲ್ಮುರಡಪ್ಪ ಮಾತನಾಡಿ, ಕ್ಷೇತ್ರದಾದ್ಯಂತ ಜನಾಭಿಪ್ರಾಯ ಸಂಗ್ರಹ ಕಾರ್ಯಕ್ರಮದಲ್ಲಿ ಎಲ್ಲಾ ಗ್ರಾಮದಲ್ಲೂ ಅಭೂತಪೂರ್ವ ಸ್ವಾಗತಿಸಿ ಸಚಿವರನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ಆದೇಶಿಸಿದ್ದಾರೆ. ಈ ಹಿಂದೆ ಇದ್ದ ಶಾಸಕರು 4 ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿ ಎಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ಜನರಿಗೆ ತಿಳಿಸಬೇಕು. ಕಡೂರು-ಚಿಕ್ಕಮಗಳೂರು ರಸ್ತೆಯನ್ನು ಅಭಿವೃದ್ಧಿ ಪಡಿಸಲು ಯೋಗ್ಯತೆಯಿಲ್ಲದಿದ್ದರೂ ಇಂದು ಅಪಪ್ರಚಾರ ಮಾಡಿ ಜನರ ಮನಸ್ಸಿನಲ್ಲಿ ವಿಷಬೀಜ ಬಿತ್ತುತ್ತಿದ್ದಾರೆ ಎಂದು ಆರೋಪಿಸಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಶಕ್ತಿಕೇಂದ್ರದ ಅಧ್ಯಕ್ಷ ನಾಗೇಗೌಡ, ಗ್ರಾ.ಪಂ. ಅಧ್ಯಕ್ಷ ಲೋಕೇಶ್, ಮುಖಂಡರುಗಳಾದ ಶಿವಮೂರ್ತಿ, ಮಾದೇಗೌಡ, ರಂಗೇಗೌಡ, ಗಿರೀಶ್ರಾಜ್ ಅರಸ್, ನಾಗಮ್ಮ, ಲಕ್ಕಮ್ಮ, ಶ್ರೀನಿವಾಸ್, ಷರೀಫ್, ಪುಲಕೇಶಿ, ಮರಿಗೌಡ, ಮಂಜು ಇದ್ದರು.
ದೆವ್ವಗಳ ಕಾಟ
ಕಡೂರು ಜೆಡಿಎಸ್ ಮತ್ತು ಕಾಂಗ್ರೆಸ್ ದೆವ್ವಗಳನ್ನು ಊರಿಗೆ ಬಿಟ್ಟುಕೊಳ್ಳದೆ ಬಡಿಗೆ ಹಿಡಿದುಕೊಂಡು ಓಡಿಸಿದರೆ ಊರಿನಲ್ಲಿ ಕೆಟ್ಟ ದೆವ್ವಗಳ ಕಾಟ ಇರುವುದಿಲ್ಲ ಎಂದು ಸಚಿವ ಸಿ.ಟಿ. ರವಿ ದೇವನೂರಿನಲ್ಲಿ ಕುಟುಕಿದರು.
ಭೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಯಾವ ಅಭಿವೃದ್ಧಿಯನ್ನು ಮಾಡದೆ ಕೇವಲ ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುವ ಮೂಲಕ ಊರಿಂದ ಊರಿಗೆ ಬೆಂಕಿ ಹಚ್ಚುತ್ತಾ ಇದುವರೆಗೂ ರಾಜಕಾರಣ ಮಾಡಿಕೊಂಡು ಬಂದಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ದೆವ್ವಗಳನ್ನು ಮತದಾರ ಪ್ರಭುಗಳು ಊರಿನ ಒಳಗೆ ಬಿಟ್ಟುಕೊಳ್ಳದೆ ಓಡಿಸುವ ಕೆಲಸ ಮಾಡಬೇಕು.
ಕ್ಷೇತ್ರದ ಪ್ರತಿ ಗ್ರಾಮಗಳಲ್ಲಿಯೂ ಮೇ 5ರ ನಂತರ ಒಳ್ಳೆಯ ಬಿಜೆಪಿ ಮಾತ್ರ ಊರಿನಲ್ಲಿ ಇರುವಂತಾಗಲು ಬಿಜೆಪಿಯ ಸಾಧನೆಗಳನ್ನು ಜನರಿಗೆ ಹೇಳುವ ಮೂಲಕ ಬಿಜೆಪಿಯ ಸಾಧನೆಗೆ ಬೆಂಬಲಿಸಬೇಕು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

