ಇಂದು ಸಿ.ಟಿ. ರವಿ, ಜೀವರಾಜ್ ನಾಮಪತ್ರ ಸಲ್ಲಿಕೆ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಏ.14
ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡುವವರು ನಾಮಪತ್ರ ಸಲ್ಲಿಸಲು ಇನ್ನು ಮೂರೇ ದಿನ ಬಾಕಿ ಇದ್ದು, ಸೋಮವಾರದಂದು ಸಚಿವರಾದ ಸಿ.ಟಿ. ರವಿ, ಡಿ.ಎನ್. ಜೀವರಾಜ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಲಿದ್ದಾರೆ.
ಸಚಿವ ಸಿ.ಟಿ. ರವಿ, ಡಿ.ಎನ್. ಜೀವರಾಜ್ ಅವರು ತಮ್ಮ ಕ್ಷೇತ್ರಗಳಿಂದ ನಾಮಪತ್ರ ಸಲ್ಲಿಸಲಿದ್ದಾರೆ.
ಕಾಂಗ್ರೆಸ್ ಪಕ್ಷ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಕಾಂಗ್ರೆಸ್ ಅಭ್ಯರ್ಥಿಗಳಾದ ಕೆ.ಬಿ. ಮಲ್ಲಿಕಾರ್ಜುನ ಅವರು ಕಡೂರಿನಲ್ಲಿ, ಕೆ.ಎಸ್. ಶಾಂತೇಗೌಡ ಚಿಕ್ಕಮಗಳೂರು, ಬಿ.ಎನ್. ಚಂದ್ರಪ್ಪ ಮೂಡಿಗೆರೆ ಹಾಗೂ ಟಿ.ಡಿ. ರಾಜೇಗೌಡ ಕೊಪ್ಪದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ಚಿಕ್ಕಗಳೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಸ್.ಎಲ್. ಧರ್ಮೇಗೌಡ ಹಾಗೂ ಕೆಜೆಪಿ, ಬಿ.ಎಸ್.ಆರ್. ಕಾಂಗ್ರೆಸ್, ಬಿಎಸ್ಪಿ ಪಕ್ಷದ ಅಭ್ಯರ್ಥಿಗಳು ಕೂಡ ನಾಮಪತ್ರವನ್ನು ಸಲ್ಲಿಸಲಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಏ. 17 ಕೊನೆಯ ದಿನ. ಅದರ ಹಿಂದಿನ ದಿನ ಅಂದರೆ ಮಂಗಳವಾರ. ಆದು, ಒಳ್ಳೆಯ ದಿನವಲ್ಲ ಅದುದರಿಂದ ಹೆಚ್ಚಿನ ಅಭ್ಯರ್ಥಿಗಳು ಸೋಮವಾರವೇ ನಾಮಪತ್ರ ಸಲ್ಲಿಸಲಿದ್ದಾರೆ. ಇದರ ಜತೆಗೆ ಬುಧವಾರ ಕಡೆ ದಿನವಾಗಿದ್ದರಿಂದ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಯಾವುದಾದರೂ ತಾಂತ್ರಿಕ ದೋಷಗಳಿದ್ದರೆ, ಅದನ್ನು ಸರಿಪಡಿಸಲು ಎರಡು ದಿನ ಅವಕಾಶ ಇರುವುದರಿಂದ ಸೋಮವಾರ ನಾಮಪತ್ರ ಸಲ್ಲಿಕೆಗೆ ರಾಜಕೀಯ ಪಕ್ಷಗಳು ದಿನ ನಿಗದಿ ಪಡಿಸಿವೆ.
ಸುಳ್ಳು ಹೇಳಿಕೆ ಹೊಟ್ಟೆಕಿಚ್ಚಿನ ಪರಮಾವಧಿ
ಚಿಕ್ಕಮಗಳೂರು: ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳು ಮತ್ತು ಜನಪರ ಯೋಜನೆಗಳನ್ನು ಸಹಿಸಲಾಗದ ಮಾಜಿ ಸಚಿವರೊಬ್ಬರು ನೀಡಿರುವ ಸುಳ್ಳು ಹೇಳಿಕೆ ಹೊಟ್ಟೆಕಿಚ್ಚಿನ ಪರಮಾವಧಿಯನ್ನು ಎತ್ತಿ ತೋರಿಸುತ್ತದೆ ಎಂದು ಸಚಿವ ಸಿ.ಟಿ. ರವಿ ಆರೋಪಿಸಿದ್ದಾರೆ.
ನಗರದ ಪಾಂಚಜನ್ಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಭಾನುವಾರ ನಡೆದ ಅಡುಗೆ ಗುತ್ತಿಗೆದಾರರು ಮತ್ತು ಕಾರ್ಮಿಕರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ಯಾವುದೇ ಪ್ರತಿಫಲಾಕ್ಷೆ ಬಯಸದೆ ಸ್ವಯಂ ಪ್ರೇರಿತರಾಗಿ ಬಂದು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸುತ್ತಿರುವುದು ನಾನು ಮಾಡಿದ ಅಭಿವೃದ್ಧಿ ಕಾರ್ಯಗಳಿಗೆ ಸಾರ್ಥಕತೆ ಸಿಕ್ಕಿ ಆನಂದ ತಂದಿದೆ ಎಂದರು.
ವಿಶ್ವಾಸ, ಆರೈಕೆ: ನಿಮ್ಮಂತಹ ಸಾಮಾನ್ಯ ಜನರ ವಿಶ್ವಾಸ ಮತ್ತು ಹಾರೈಕೆ ಬಯಸುತ್ತೇನೆಯೇ ಹೊರತು ಜನ ಅಧಿಕಾರ ಕೊಟ್ಟಾಗ ತಾನು ಏನೂ ಮಾಡಲಾಗದೆ ಮತ್ತು ನಾವು ಮಾಡಿರುವ ಅಭಿವೃದ್ಧಿಯನ್ನು ಸಹಿಸಿಕೊಳ್ಳದೆ ರಾಜಕೀಯ ಧ್ವೇಷದಿಂದ ಮೊಸರಿನಲ್ಲಿ ಕಲ್ಲು ಹುಡುಕುವ ವಿರೋಧ ಪಕ್ಷಗಳ ಪ್ರಮಾಣಪತ್ರವನ್ನು ಬಯಸುವವನು ನಾನಲ್ಲ ಎಂದು ಹೇಳಿದರು.
ಸಂಘದ ಅಧ್ಯಕ್ಷ ಆನಂದ ಮಾತನಾಡಿದರು. ನಗರಾಧ್ಯಕ್ಷ ಕೋಟೆ ರಂಗನಾಥ್, ಪ್ರಧಾನ ಕಾರ್ಯದರ್ಶಿ ವರಸಿದ್ಧಿ ವೇಣುಗೋಪಾಲ್, ಶಾಮಣ್ಣ, ರಾಘವೇಂದ್ರ, ಶ್ರೀನಿವಾಸ್, ಗುರುಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

