ಅಭಿವೃದ್ಧಿ, ಆಡಳಿತ ಸುಧಾರಣೆ ಬಿಜೆಪಿ ಗುರಿ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಏ.21
ರಾಜ್ಯದ ಅಭಿವೃದ್ಧಿ ಹಾಗೂ ಆಡಳಿತ ಸುಧಾರಣೆ ಬಿಜೆಪಿಯ ಗುರಿ ಎಂದು ಸಂಸದ ಡಿ.ಬಿ. ಚಂದ್ರೇಗೌಡ ಹೇಳಿದ್ದಾರೆ.
ಭ್ರಷ್ಟ ರಹಿತ, ದುಷ್ಟಕೂಟದಿಂದ ಹೊರ ಬರುವುದೇ ನಮ್ಮ ಧ್ಯೇಯ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಚುನಾವಣೆಯಲ್ಲಿ ಬಿಜೆಪಿ ಕೊಟ್ಟ ಭರವಸೆ ಈಡೇರಿದೆ. ಹಲವು ಎಡರು- ತೊಡರುಗಳು, ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಿದರೂ ಕೂಡ ಬಿಜೆಪಿ 5 ವರ್ಷಗಳಲ್ಲಿ ಯಶಸ್ವಿ ಆಡಳಿತ ನಡೆಸಿದೆ. ದೇಶದಲ್ಲಿ ಪ್ರಪ್ರಥಮ ಬಾರಿಗೆ ಕೃಷಿಗೆ ಪ್ರತ್ಯೇಕ ಬಜೆಟ್ ಕೊಟ್ಟಿದೆ. ಆಡಳಿತದಲ್ಲಿ ಸುಧಾರಣೆ ತರಲು ಸಕಾಲ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಇದರಡಿಯಲ್ಲಿ 365 ಆಡಳಿತಾತ್ಮಕ ಸಂಸ್ಥೆಗಳನ್ನು ಒಳಪಡಿಸಿದೆ. ಕಳೆದ 50 ವರ್ಷಗಳ ರಾಜಕೀಯ ಅನುಭವದಲ್ಲಿ ಹೇಳುವುದಾದರೆ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ. ಒಂದೇ ಒಂದು ಕೋಮು ಗಲಭೆ ನಡೆದಿಲ್ಲ ಎಂದರು.
ಕಾಂಗ್ರೆಸ್ ಎದುರಾಳಿ: ಬಿಜೆಪಿಗೆ ಕಾಂಗ್ರೆಸ್ ಎದುರಾಳಿ. ಕೆಜೆಪಿಯಿಂದ ಬಿಜೆಪಿಗೆ ಯಾವುದೇ ರೀತಿಯಲ್ಲಿ ನಷ್ಟವಾಗುವುದಿಲ್ಲ. ದೇವರಾಜ್ ಅರಸ್, ಬಂಗಾರಪ್ಪ, ಕೆಂಗಲ್ ಹನುಮಂತಯ್ಯ ಅವರು ಬೇರೆ ಪಕ್ಷಗಳನ್ನು ಹುಟ್ಟು ಹಾಕಿದರು. ಆದರೆ, ಅದರಿಂದ ಇತರೆ ಪಕ್ಷಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಲಿಲ್ಲ ಎಂದು ಹೇಳಿದರು. ಕೇಂದ್ರ ಸರ್ಕಾರ ಈ ಬಾರಿ 14 ಲಕ್ಷ ಸಹಸ್ರರು ಕೋಟಿ ರುಪಾಯಿಗಳ ಬಜೆಟ್ ನೀಡಿದೆ. ಆದರೆ, ಸ್ವೀಸ್ ಬ್ಯಾಂಕ್‌ನಲ್ಲಿ 22.5 ಲಕ್ಷ ಸಹಸ್ರರು ರೂಪಾಯಿ ಕಪ್ಪು ಹಣ ಇದೆ. ಅದನ್ನು ತರುವ ಕೆಲಸ ಕಾಂಗ್ರೆಸ್ ಪಕ್ಷ ಮಾಡಿಲ್ಲ ಎಂದು ಟೀಕಿಸಿದ ಚಂದ್ರೇಗೌಡ, ಕಾಂಗ್ರೆಸ್ ಪಕ್ಷ ಪ್ರಾಂತ್ಯವಾರು ಸಿಎಂ ಹೆಸರನ್ನು ಪ್ರಸ್ತಾಪ ಮಾಡುತ್ತಿದೆ. ಒಂದೆಡೆ ಎಸ್.ಎಂ. ಕೃಷ್ಣ, ಇನ್ನೊಂದೆಡೆ ಸಿದ್ದರಾಮಯ್ಯ, ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಹೀಗೆ ಹಲವು ನಾಯಕರ ಹೆಸರನ್ನು ಆಯಾಯ ಪ್ರದೇಶಕ್ಕೆ ಸಿಎಂ ಅಭ್ಯರ್ಥಿಗಳೆಂದು ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದರು.
ಅಪಪ್ರಚಾರ ಬೇಡ: ಈ ದೇಶದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಭವಿಷ್ಯವಿಲ್ಲ. ಈ ವಿಷಯದಲ್ಲಿ ರಾಷ್ಟ್ರೀಯ ಪಕ್ಷಗಳಿಂದ ನಮ್ಮ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ, ನೈತಿಕ ಅಧ-ಪತನಗೊಳ್ಳುತ್ತಿದೆ ಎಂದು ಕಣ್ಣೀರು ಹಾಕುವುದರಲ್ಲಿ ಯಾವುದೇ ಪ್ರಯೋಜನವಿಲ್ಲ. ರಾಜಕೀಯ ಪಕ್ಷಗಳು ಪ್ರಚಾರದಿಂದ ಗೆಲ್ಲಬೇಕೇ ಹೊರತು ಅಪಪ್ರಚಾರದಿಂದ ಅಲ್ಲ ಎಂದು ಕಿವಿಮಾತು ಹೇಳಿದರು. ಸಚಿವ ಸಿ.ಟಿ. ರವಿ, ಶಾಸಕ ಎಂ.ಪಿ. ಕುಮಾರಸ್ವಾಮಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಂ.ಎಸ್. ಭೋಜೇಗೌಡ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

