ಸಮಸ್ಯೆ ನಿವಾರಣೆಗೆ ಜೆಡಿಎಸ್ ಬೆಂಬಲಿಸಿ
ಕ.ಪ್ರ. ವಾರ್ತೆ ಚಿಕ್ಕಮಗಳೂರು ಏ.22
ಸಮಾಜದ ಕಟ್ಟೆಕಡೆಯ ಜನರ ಸಮಸ್ಯೆ ನೀಗಿಸಿ ಅವರ ಪ್ರೀತಿ ವಿಶ್ವಾಸಗಳಿಸಲು ಜೆಡಿಎಸ್ನಿಂದ ಮಾತ್ರ ಸಾಧ್ಯ ಎಂದು ಮೂಡಿಗೆರೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿ.ಬಿ. ನಿಂಗಯ್ಯ ಹೇಳಿದರು.
ಕ್ಷೇತ್ರದ ಬೆಟ್ಟದ ಮರಡಿ, ಆವತಿ, ಬೆರಣಗೋಡು, ಬೈಗೂರು, ಕೆರೆಮಕ್ಕಿಗಳಲ್ಲಿ ಸೋಮವಾರ ಮತಯಾಚನೆ ಮಾಡಿ ನಂತರ ಮಲ್ಲಂದೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತಿಹಾಸ ನಿರ್ಮಾಣ: ರಾಜ್ಯದಲ್ಲಿ ಜನತಾ ಪರಿವಾರದ ಸರ್ಕಾರಗಳು ಅಧಿಕಾರದಲ್ಲಿದ್ದಾಗ ಗ್ರಾಮೀಣ ಪ್ರದೇಶದ ಅಭಿವೃದ್ಧಿ, ಬಡವರಿಗೆ ಸೂರು, ರಸ್ತೆ, ರೈತರ ಸಾಲಾಮನ್ನಾ ಮಾಡಿ ಇತಿಹಾಸ ನಿರ್ಮಿಸಿತ್ತು. ಆದರೆ, ಇಂದಿನ ಬಿಜೆಪಿ ಸರ್ಕಾರ ಕಂಡರಿಯದ ಭ್ರಷ್ಟಾಚಾರದಲ್ಲಿ ಮುಳುಗಿ ಮುಖ್ಯಮಂತ್ರಿಗಳ ವರೆಗೂ ಜೈಲು ಸೇರಿ ದಾಖಲೆ ಸೃಷ್ಟಿಸಿದ್ದಾರೆ ಎಂದು ವ್ಯಂಗ್ಯವಾಡಿದರು.
ಜೆಡಿಎಸ್ ಅಧಿಕಾರಕ್ಕೆ ಬಂದ ಕೂಡಲೇ ಒತ್ತುವರಿ ಸಮಸ್ಯೆ, ಅರಣ್ಯ ಇಲಾಖೆಯಿಂದ ರೈತರಿಗಾಗುತ್ತಿರುವ ಕಿರುಕುಳ, ಹುಲಿ ಯೋಜನೆ, ಮರಳು ದಂಧೆಯಂತಹವುಗಳಿಗೆ ತಿಲಾಂಜಲಿ ಹಾಡಿ, ಬಡವರ ನೆಮ್ಮದಿ ಜೀವನಕ್ಕೆ ಸಹಕರಿಸಲಾಗುವುದೆಂದರು.
ಭ್ರಷ್ಟಾಚಾರದ ಆಡಳಿತ: ಜಿಲ್ಲಾಧ್ಯಕ್ಷ ಎಚ್.ಎಸ್. ಮಂಜಪ್ಪ ಮಾತನಾಡಿ, 5 ದಶಕಗಳ ಕಾಲ ರಾಜ್ಯ ಆಳಿದ ಕಾಂಗ್ರೆಸ್ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರನ್ನು ಕತ್ತಲಲ್ಲಿಟ್ಟಿದೆ.
ಬಿಜೆಪಿ ಆಡಳಿತದ ಸಂದರ್ಭದಲ್ಲಿ ಭ್ರಷ್ಟಾಚಾರ ಮಾಡದ ಜನಪ್ರತಿನಿಧಿಯನ್ನು ಅವರ ಪಕ್ಷದಲ್ಲಿ ಹುಡುಕಬೇಕಿದೆ ಇಂತಹ ಸಮಸ್ಯೆಯಿಂದ ಹೊರಬರಲು ಮಾದರಿ ಸರ್ಕಾರ ರಚನೆಗೆ ಜೆಡಿಎಸ್ಗೆ ಬೆಂಬಲಿಸುವಂತೆ ಮನವಿ ಮಾಡಿದರು.
ಎಚ್ಡಿಕೆ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಹೊಲಗದ್ದೆ ಗಿರೀಶ್ ಮಾತನಾಡಿದರು. ಗ್ರಾಪಂ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ, ಪುಟ್ಟೇಗೌಡ, ಮುಖಂಡ ಎಂ.ಡಿ. ರಮೇಶ್, ಎಚ್.ಎನ್. ಕೃಷ್ಣೇಗೌಡ, ತಮ್ಮಣ್ಣಗೌಡ, ರುದ್ರೇಗೌಡ, ಸತೀಶ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

