ಧನಂಜಯಕುಮಾರ್ ಹೇಳಿಕೆಗೆ ಜನ ಉತ್ತರಿಸುತ್ತಾರೆ
ಕಪ್ರ ವಾರ್ತೆ, ಚಿಕ್ಕಮಗಳೂರು, ಏ.23
ಕೆಜೆಪಿ ನಾಯಕ ಧನಂಜಯ ಕುಮಾರ್ ತಿಳುವಳಿಕೆ ಇಲ್ಲದ ಮಕ್ಕಳಂತೆ ಹೇಳಿಕೆ ನೀಡುತ್ತಿದ್ದಾರೆ. ಅವರ ಯಾವುದೇ ಆರೋಪಗಳಲ್ಲಿ ಹುರುಳಿಲ್ಲ ಎಂದು ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಹೇಳಿದ್ದಾರೆ.
ಇಲ್ಲಿನ ಟಿಪ್ಪುನಗರ, ಶಾಂತಿನಗರ, ಕಲ್ಲುದೊಡ್ಡಿ, ಷರೀಫಗಲ್ಲಿ, ಉಪ್ಪಳ್ಳಿಯಲ್ಲಿ ಮಂಗಳವಾರ ಬಿಜೆಪಿ ಅಭ್ಯರ್ಥಿ ಸಿ.ಟಿ. ರವಿ ಪರ ಮತಯಾಚಿಸಿ ಅವರು ಮಾತನಾಡಿದರು.
ಜನತೆ ಉತ್ತರ: ದೇಶವೇ ಹೇಳುವ ಹಾಗೆ ರಾಷ್ಟ್ರದ ಉಕ್ಕಿನ ಮನುಷ್ಯ ಎಲ್.ಕೆ. ಅಡ್ವಾಣಿರವರ ಬಗ್ಗೆ ಲಘುವಾದ ಆರೋಪ ಮಾಡಿರುವ ಧನಂಜಯ ಕುಮಾರ್ ಹೇಳಿಕೆಯಿಂದ ನಮ್ಮ ಗೌರವಕ್ಕೆ ದಕ್ಕೆಯಾಗಿದೆ ಎಂದು ಯಡಿಯೂರಪ್ಪ ನವರೆ ಕ್ಷಮೆ ಯಾಚಿಸಿದರೆಂದರೆ ಧನಂಜಯಕುಮಾರ್ ಎಂತಹವರು ಎಂಬುದು ಅರ್ಥವಾಗುತ್ತದೆ. ಇಂತಹ ಲಘುವಾದ ಹೇಳಿಕೆಗೆ ಜನ ಉತ್ತರಿಸಲು ಕಾತರಾಗಿದ್ದಾರೆ ಎಂದರು.
ವಿಧಾನಸಭಾ ಚುನಾವಣೆ ಅಂಗವಾಗಿ ರಾಜ್ಯದಲ್ಲಿ 4 ದಿನಗಳ ಪ್ರವಾಸ ಮುಗಿಸಿದ್ದೇನೆ. ಹೋದಕಡೆಯಲ್ಲಿ ಅಲ್ಪಸಂಖ್ಯಾತರು ಪಕ್ಷ ಸೇರ್ಪಡೆ ಹೆಚ್ಚಾಗಿದೆ. ಅದರಲ್ಲೂ ಮುಸಲ್ಮಾನರು ಸ್ವಯಂ ಪ್ರೇರಿತರಾಗಿ ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ, ಇದಕ್ಕೆ ಕಾರಣ ಬಿಜೆಪಿ ಆಡಳಿತಾವಧಿಯಲ್ಲಿ ಯಾವುದೇ ಗಲಾಟೆಗೆ ಅವಕಾಶ ಕೊಡದ ರೀತಿ ಸೌಹಾರ್ದತೆ ಮರೆದಿರುವುದು ಎಂದರು.
ಹಜ್ ಭವನ: ರಾಜ್ಯದಲ್ಲಿ ಶಾದಿಮಹಲ್, ಮಸೀದಿಗಳ ಅಭಿವೃದ್ದಿಗೆ 475 ಕೋಟಿ ಅನುದಾನ ನೀಡಿದ ಮೊದಲ ಸರ್ಕಾರ ಬಿಜೆಪಿ. 60 ವರ್ಷದಿಂದ ಬಾಯಿ ಮಾತಲ್ಲಿ ಮುಸ್ಲಿಮರನ್ನು ಓಲೈಸಿ ಓಟ್ ಬ್ಯಾಂಕ್ ಮಾಡಿಕೊಂಡಿದ್ದ ಕಾಂಗ್ರೆಸ್ಸಿಗರ ಕೈಲಾಗದ ಹಜ್ ಭವನ ನಿರ್ಮಾಣಕ್ಕೆ 50 ಕೋಟಿ ರೂ. ನೀಡಿ ಸಹಕರಿಸಲು ಬಿಜೆಪಿ ಸರ್ಕಾರವೆ ಬರಬೇಕಾಯಿತೆ ಎಂದು ಪ್ರಶ್ನಿಸಿದರು.
ಕ್ರೈಸ್ತ ಸಮುದಾಯಗಳ ಏಳಿಗೆಗೆ 50 ಕೋಟಿ ನೀಡಿ ಎಲ್ಲರನ್ನು ಒಂದೇ ರೀತಿ ಕಂಡ ಪ್ರತಿಫಲವಾಗಿ ಅಲ್ಪಸಂಖ್ಯಾತರು ಬದಲಾವಣೆ ಬಯಸಿ ಬಿಜೆಪಿಗೆ ಒಲವು ತೋರುತ್ತಿದ್ದಾರೆ ಎಂದರು.
ಪಕ್ಷದ ಮುಖಂಡ ದಾವೂದ್ ಮಾತನಾಡಿ, ಕ್ಷೇತ್ರದಲ್ಲಿ 6 ದಶಕಗಳಲ್ಲಾಗದ ಅಭಿವೃದ್ಧಿಯನ್ನು ಬಿಜೆಪಿ ಒಂದೇ ಅವಧಿಯಲ್ಲಿ ಜನರ ಮನ ಮುಟ್ಟುವಂತೆ ಕೆಲಸ ಮಾಡಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಬಿಜೆಪಿ ವಿರುದ್ದ ಮುಸ್ಲಿಂರನ್ನು ಎತ್ತಿಕಟ್ಟುವ ಮೂಲಕ ಅವರ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅಲ್ಪಸಂಖ್ಯಾತರನ್ನು ಅಸ್ತ್ರ ಮಾಡಿಕೊಂಡಿದ್ದ ಸತ್ಯ ಈ ಬಾರಿ ಬಹಿರಂಗವಾಗಲಿದೆ ಎಂದರು.
ಅಪ್ಸರ್ ಅಹಮದ್, ಅಬ್ದುಲ್ ರೆಹಮಾನ್ ಖುರೇಶಿ, ಮಹಮದ್ ಅನ್ವರ್ ವಾಜಿದ್, ಷಬ್ಬೀರ್, ಆಲಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

