ಚಿಕ್ಕಮಗಳೂರು

ಆದಿ ಶ್ರೀಗಳ ಪುರ ಪ್ರವೇಶಕ್ಕೆ ಪೂರ್ವಭಾವಿ ಸಭೆ

Published On :

ಕ.ಪ್ರ ವಾರ್ತೆ, ಚಿಕ್ಕಮಗಳೂರು, ಏ.23
ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳ ಪುರಪ್ರವೇಶ ಮತ್ತು ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಮೇ 21 ರಂದು ಹಮ್ಮಿಕೊಳ್ಳಲು ನಗರದ ಒಕ್ಕಲಿಗ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಪೂರ್ವಬಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಡಾ.ಜೆ.ಪಿ. ಕೃಷ್ಣೇಗೌಡ ಮಾತನಾಡಿ, ಆದಿಚುಂಚನಗಿರಿ ಸ್ವಾಮೀಜಿಗಳು ಹಾಗೂ ಮಠ ಎಲ್ಲಾ ಜನಾಂಗದವರನ್ನು ಪ್ರೀತಿ ವಾತ್ಸಲ್ಯದಿಂದ ಕಾಣುತ್ತಿದ್ದು, ತಾರತಮ್ಯ ಮಾಡಿಲ್ಲ ಇಂತಹ ಮಠದ 72ನೇ ಜಗದ್ಗುರುಗಳು ಪುರ ಪ್ರದೇಶ ಮಾಡುತ್ತಿದ್ದು ಇದನ್ನೂ ಅರ್ಥಪೂರ್ಣವಾಗಿ ಆಚರಿಸಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಎಐಟಿ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಕೆ. ಸುಬ್ರಾಯ, ಸ್ವಾಮೀಜಿಯವರನ್ನು ಪೂರ್ಣಕುಂಭ ಸ್ವಾಗತ ಮಾಡಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಒಕ್ಕಲಿಗ ಸಮುದಾಯ ಭವನಕ್ಕೆ ಕರೆ ತರಬೇಕೆಂದರು.
 ಮಹಿಳಾ ಜಾಗೃತಿ ಸಂಘದ ಅಧ್ಯಕ್ಷೆ ಗೌರಮ್ಮ ಬಸವೇಗೌಡ ಮಾತನಾಡಿ, ಸರ್ವರು ನಡೆದುಕೊಳ್ಳುವ ಆದಿಚುಂಚನಗಿರಿ ಮಠದ ಜಗದ್ಗುರುಗಳು ಪುರಪ್ರವೇಶ ಮಾಡುವಾಗ ಎಲ್ಲಾ ರೀತಿಯ ಸಹಕಾರಗಳನ್ನು ನೀಡಿ ಒಂದು ಐತಿಹಾಸಿಕ ಕಾರ್ಯಕ್ರಮವಾಗಿ ಮಾಡಲು ಸಹಕರಿಸುವುದಾಗಿ ತಿಳಿಸಿದರು.
ಸಂಸ್ಥಾನದ ಕೊಡುಗೆ: ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಎಂ.ಆರ್. ಸಣ್ಣ ಸಿದ್ದೇಗೌಡ ಮಾತನಾಡಿ, ಆದಿಚುಂಚನಗಿರಿ ಸಂಸ್ಥಾನದ ಕೊಡುಗೆ ಜಿಲ್ಲೆಗೆ ಮತ್ತು ನಾಡಿಗೆ ಅಪಾರವಾಗಿದ್ದು, ಅಂತಹ ಮಠದ ಪೀಠಾಧ್ಯಕ್ಷರು ಅಧಿಕೃತವಾಗಿ ಪುರಪ್ರವೇಶ ಮಾಡುವಾಗ ಅವರ ಘನತೆಗೆ ಧಕ್ಕೆಯಾಗದ ರೀತಿಯಲ್ಲಿ ಗೌರವ ನೀಡಬೇಕು ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳು ಇಂದಿನಿಂದಲೇ ನಡೆಯಬೇಕೆಂದರು.
ಬೆಳ್ಳಿಯ ಪುತ್ಥಳಿ: ಸ್ವಾಮೀಜಿಗಳ ಪುರ ಪ್ರವೇಶದ ಸವಿ ನೆನಪಿಗಾಗಿ ಬಾಲಗಂಗಾಧರನಾಥ ಶ್ರೀಗಳ ಬೆಳ್ಳಿಯ ಪುತ್ಥಳಿಯನ್ನು ನಿರ್ಮಲಾನಂದನಾಥ ಶ್ರೀಗಳಿಗೆ ಅರ್ಪಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಎ.ಕೆ. ವಸಂತೇಗೌಡ, ಹಳಸೆ ಶಿವಣ್ಣ, ಡಿ.ಬಿ. ಸುಬ್ಬೇಗೌಡ, ಐ.ಎಂ. ಸಣ್ಣತಮ್ಮೇಗೌಡ, ಎಂ.ಡಿ. ಆನಂದ್, ಯು.ಟಿ. ನಾಗರಾಜ್, ನರೇಂದ್ರ ಪೈ, ಬೆಳವಾಡಿ ಮಂಜುನಾಥ್, ದೀಪಕ್ದೊಡ್ಡಯ್ಯ, ವಾಣಿ ಚಂದ್ರಯ್ಯನಾಯ್ಡು, ಕನಕ ವಿರೇಶ್, ಕೆ. ಮೋಹನ್, ಎಚ್.ಸಿ. ಮಹೇಶ್ ಮತ್ತು ಒಕ್ಕಲಿಗ ಸಂಘದ ನಿರ್ದೇಶಕರು ಸಲಹೆ ನೀಡಿದರು.
ಜಿಲ್ಲಾ ಒಕ್ಕಲಿಗರ ಸಂಘದ ಕಾರ್ಯದರ್ಶಿ ಬಿ.ಎಲ್. ಸಂದೀಪ್ ಕಾರ್ಯಕ್ರಮಕ್ಕೆ ಕಲ್ಯಾಣ ಮಂಟಪವನ್ನು ಉಚಿತವಾಗಿ ನೀಡುವುದರ ಜೊತೆಗೆ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಅಚ್ಚುಕಟ್ಟಾದ ಊಟದ ವ್ಯವಸ್ಥೆ ಮಾಡುವುದಾಗಿ ಹೇಳಿದರು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಐ.ಎಂ. ಮಹೇಶ್ಗೌಡ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.