ಚಿಕ್ಕಮಗಳೂರು

ಗಣಪತಿ ಮಂಟಪ ಕುಸಿತ: ಪ್ರತಿಭಟನೆ

Published On :

ಕ.ಪ್ರ.ವಾರ್ತೆ ಟಿ ಸಾಗರ ಟಿ  ಏ.26
ಬಹಳ ದಿನಗಳಿಂದ ಶಿಥಿಲಗೊಂಡು ಕುಸಿಯುವ ಹಂತದಲ್ಲಿದ್ದ ಇಲ್ಲಿನ ಇತಿಹಾಸ ಪ್ರಸಿದ್ಧ ಗಣಪತಿ ದೇವಸ್ಥಾನದ ಮುಖಮಂಟಪ ಗುರುವಾರ ರಾತ್ರಿ ಕುಸಿದು ಬಿದ್ದಿದೆ. ಮುಜರಾಯಿ ಇಲಾಖೆ ನಿರ್ಲಕ್ಷ ಖಂಡಿಸಿ ಶುಕ್ರವಾರ ಭಕ್ತಾದಿಗಳು ಪ್ರತಿಭಟನೆ ನಡೆಸಿದರು.
ದೇವಸ್ಥಾನದ ಮುಖಮಂಟಪ ಕುಸಿಯುವ ಹಂತದಲ್ಲಿರುವ ಬಗ್ಗೆ ಈಗ ಎರಡು ತಿಂಗಳ ಹಿಂದೆಯೇ ಗಮನಕ್ಕೆ ಬಂದಿತ್ತು. ಈ ಕುರಿತು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಮುಜರಾಯಿ ಇಲಾಖೆಗೆ ಮನವಿಯನ್ನೂ ಸಲ್ಲಿಸಿದ್ದವು. ಆದರೆ ದುರಸ್ತಿ ಕಾರ್ಯ ಮಾತ್ರ ನಡೆದಿರಲಿಲ್ಲ ಎಂದರು.
ಮುಜರಾಯಿ ಇಲಾಖೆ ಸಾಮ್ಯಕ್ಕೆ ಒಳಪಟ್ಟಿರುವ ದೇವಸ್ಥಾನಕ್ಕೆ ಪ್ರತಿವರ್ಷ ಸುಮಾರು 22 ಲಕ್ಷ ಆದಾಯವಿದೆ. ಆದರೆ ದೇವಸ್ಥಾನ ಅಭಿವೃದ್ಧಿಗೆ ಇಲಾಖೆ 2ರಿಂದ 3 ಲಕ್ಷ ಮಾತ್ರ ಖರ್ಚು ಮಾಡುತ್ತಿದೆ. ಅಧಿಕಾರಿಗಳು ಇತರೆ ಧರ್ಮದ ಧಾರ್ಮಿ ಸ್ಥಳಗಳು ಶಿಥಿಲಗೊಂಡರೆ ತಕ್ಷಣ ರಿಪೇರಿ ಮಾಡುತ್ತಿದ್ದರು. ಆದರೆ ಗಣಪತಿ ದೇವಸ್ಥಾನದ ಬಗ್ಗೆ ಈ ರೀತಿಯ ನಿರ್ಲಕ್ಷ್ಯ ಸರಿಯಲ್ಲ. ಕುಸಿದು ಬಿದ್ದಿರುವ ಗೋಪುರವನ್ನು ತಕ್ಷಣ ರಿಪೇರಿ ಮಾಡದಿದ್ದರೆ ಅಧಿಕಾರಿಗಳು ಭಕ್ತಾದಿಗಳಿಂದ ಉಗ್ರವಾದ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಮತ್ತೊಂದು ಸಾಧ್ಯತೆ: ಈಗ ಮುಖ ಮಂಟಪದ ಗೋಪುರ ಕಲಶಸಹಿತ ಕುಸಿದು ಬಿದ್ದಿದ್ದು, ತಕ್ಷಣ ರಿಪೇರಿ ಕಾರ್ಯ ಕೈಗೆತ್ತಿಕೊಳ್ಳದೆ ಹೋದರೆ, ಗಣಪತಿ ವಿಗ್ರಹವಿರುವ ಮುಖಮಂಟಪವೂ ಕುಸಿಯುವ ಸಾಧ್ಯತೆ ಇದೆ ಎಂದು ದೂರಿದರು.
ತಹಸೀಲ್ದಾರರಿಗೆ ದಿಗ್ಭಂದನ: ಬೆಳಗ್ಗೆಯಿಂದ ಪ್ರತಿಭಟನೆ ಮಾಡುತ್ತಿದ್ದರೂ ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ತಹಸೀಲ್ದಾರ್ ಆರ್. ರಾಜಣ್ಣ ಅವರಿಗೆ ಭಕ್ತರು ದಿಗ್ಭಂದನ ಹಾಕಿ ಪ್ರತಿಭಟನೆ ನಡೆಸಿದರು.
ತಹಸೀಲ್ದಾರರು ಒಳಗೆ ಹೋಗುತ್ತಿದ್ದಂತೆಯೇ ದೇವಸ್ಥಾನದ ಹೊರಗಿನ ಬಾಗಿಲನ್ನು ಮುಚ್ಚಿ, ಭಕ್ತರು ಆಕ್ರೋಶ ವ್ಯಕ್ತಪಡಿಸಿದರೆ, ಇನ್ನು ಕೆಲವರು ದೇವಸ್ಥಾನದ ಸಮೀಪ ಟೈರಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಉಪವಿಭಾಗಾಧಿಕಾರಿಗಳು ದೂರವಾಣಿಯಲ್ಲಿ ಸಂಜೆ ಭಕ್ತಾದಿಗಳ ಸಭೆ ಕರೆದು ಮುಂದೆ ಕೈಗೊಳ್ಳಬೇಕಾದ ಕ್ರಮ ಕುರಿತು ಚಿಂತನೆ ನೀಡುವ ಭರವಸೆ ನೀಡಿದ ಮೇಲೆ ತಹಸೀಲ್ದಾರ್ ಅವರಿಗೆ ವಿಧಿಸಿದ್ದ ದಿಗ್ಭಂದನ ತೆರವುಗೊಳಿಸಿ, ಪ್ರತಿಭಟನೆ ಹಿಂದಕ್ಕೆ ಪಡೆದರು. ಪ್ರತಿಭಟನೆಯಲ್ಲಿ ಅ.ಪು. ನಾರಾಯಣಪ್ಪ, ಯು.ಎಚ್.ರಾಮಪ್ಪ, ಐ.ವಿ. ಹೆಗಡೆ, ಸತೀಶಬಾಬು. ಸಂತೋಷ್ ಶೇಟ್, ಶ್ರೀನಿವಾಸ್, ಅರವಿಂದ್, ಪುರುಷೋತ್ತಮ, ರಾಧಾಕೃಷ್ಣ ಬೇಂಗ್ರೆ, ಕೆ.ಆರ್. ಗಣೇಶಪ್ರಸಾದ್, ಅ.ಶ್ರೀ. ಆನಂದ್, ಶ್ರೀಧರ್, ಡಿ.ಎಸ್. ಸುಧೀಂದ್ರ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.