ಸಕಾರಾತ್ಮಕ ಧ್ಯೇಯಗಳನ್ನು ಇಟ್ಟುಕೊಳ್ಳಿ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಏ.29
ತಾಂತ್ರಿಕತೆ ಜತೆಗೆ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಇತರೆ ಮೂಲ ವಿಜ್ಞಾನ ವಿಭಾಗಗಳನ್ನು ಬೆರೆಸಿದರೆ ವಿಜ್ಞಾನದ ಅಭಿವೃದ್ಧಿ ಹೆಚ್ಚಾಗುತ್ತದೆ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಾಲಾನಂದನಾಥ ಸ್ವಾಮಿ ಹೇಳಿದ್ದಾರೆ.
ನಗರದ ಎಐಟಿ ಕಾಲೇಜಿನಲ್ಲಿ ಸೋಮವಾರ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ಒಳ್ಳೆಯ ಪ್ರಜೆಯಾಗಬೇಕು: ಪೂಜ್ಯ ಸ್ವರ್ಗಸ್ಥ ಸ್ವಾಮೀಜಿಯವರ ದೂರದೃಷ್ಟಿಯಿಂದ ಗ್ರಾಮೀಣ ಭಾಗದಲ್ಲಿ ಸ್ಥಾಪಿತವಾದ ಈ ತಾಂತ್ರಿಕ ಕಾಲೇಜು ಸಮಾಜಕ್ಕೆ ಸಾಕಷ್ಟು ಕೊಡುಗೆಗಳನ್ನು ಕೊಟ್ಟಿದೆ.
ನಮ್ಮ ಒಳಗೆ ಅಡಗಿರುವ ಶಕ್ತಿ ನಮಗೆ ತಿಳಿದಿರುವುದಿಲ್ಲ. ಇಂಥ ಮಹಾಶಕ್ತಿಯನ್ನು ಯಾವಾಗಲೂ ಸತ್ಕಾರ್ಯಕ್ಕೆ ಬಳಸಿ ಒಳ್ಳೆಯ ಪ್ರಜೆಯಾಗಬೇಕು. ನಕರಾತ್ಮಕ ಭಾವನೆಗಳನ್ನು ಬಿಟ್ಟು ಸಕರಾತ್ಮಕವಾಗಿ ಧ್ಯೇಯಗಳನ್ನು ಇಟ್ಟುಕೊಂಡು ಮುನ್ನಡೆಯಬೇಕು ಎಂದು ತಿಳಿಸಿದರು.
ವಿಮರ್ಶಿಸುವುದು ಅಗತ್ಯ: ಬೆಳಕಿನೆಡೆಗೆ ಧರ್ಮವನ್ನು ಕೊಂಡೊಯ್ಯಬೇಕು. ಗೊತ್ತಿಲ್ಲದ ಹಾದಿಯನ್ನು ತುಳಿದು ಪಶ್ಚಾತ್ತಾಪ ಪಡುವುದಕ್ಕಿಂತ ಬದುಕು ಯಾಕಾಗಿ ಹಾದಿ ತಪ್ಪುತ್ತಿದೆ ಎಂದು ವಿಮರ್ಶಿಸುವುದು ಅಗತ್ಯ. ಯಾವುದು ಆಧುನಿಕತೆಯ ಬದುಕನ್ನು ಸಮೃದ್ಧಗೊಳಿಸುತ್ತದೆಯೋ ಅದುವೇ ಧರ್ಮ. ಸಮಸ್ಯೆಗಳಿಲ್ಲದೆ ಯಾವುದನ್ನೂ ಸಾಧಿಸಲು ಆಗುವುದಿಲ್ಲ. ಮುಂದೆ ಇರುವ ಕೆಲಸವನ್ನು ಯಾರು ಶ್ರದ್ಧೆಯಿಂದ, ನಮ್ರತೆಯಿಂದ ಮಾಡುತ್ತಾರೋ ಅವರು ಆ ಕೆಲಸಕ್ಕೆ ಯೋಗ್ಯರು ಎಂದರು.
ಬದುಕು ಸುಂದರ: ಬದುಕಿನಲ್ಲಿ ನಿರಾಸೆಯ ಕಾರ್ಮೋಡ ಸಹಜ. ಸಮಸ್ಯೆಗಳು ಬಂದಾಗ ಗೊಣಗಬಾರದು. ಜಗತ್ತಿನಲ್ಲಿ ಬರುವ ಕಷ್ಟಗಳೆಲ್ಲಾ ನನಗೇ ಬರುತ್ತದೆ ಎಂದು ತಿಳಿಯಬಾರದು. ಬದುಕು ಸುಂದರವಾಗಿದೆ ಎಂದೆನ್ನಬೇಕು.
ಯಾರು ತಂದೆ, ತಾಯಿ, ಗುರು, ಹಿರಿಯರಿಗೆ ಗೌರವಿಸುತ್ತಾರೋ ಬಿದ್ದಿರುವರನ್ನು ಮೇಲಕ್ಕೆತ್ತುತ್ತಾರೋ ಅವರಿಗೆ ಆಯಸ್ಸು, ಯಶಸ್ಸು, ಬಲ ಮತ್ತು ಕೀರ್ತಿ ತಂತಾನೇ ಲಭಿಸುತ್ತದೆ. ಒಳ್ಳೆಯ ಕೆಲಸಗಳನ್ನು ಮಾಡುವರು ಎಂದೂ ಬೀಳುವುದಿಲ್ಲ ಹಾಗೂ ಯಾವ ಕೆಟ್ಟ ಗಳಿಗೆ ಬಂದರೂ ಮುಳುಗುವುದಿಲ್ಲ. ಇಂತಥ ಪ್ರಕೃತಿಯ ಮಡಿಲಲ್ಲಿ ಯಾರು ಇರುತ್ತಾರೋ ಅವರು ತಾಯಿಯ ಮಡಿಲಲ್ಲಿ ಇದ್ದ ಹಾಗೆ ಎಂದು ನುಡಿಗಟ್ಟುಗಳನ್ನು ಹೇಳಿದರು.
ಪ್ರತಿಯೊಬ್ಬ ಸ್ನೇಹಿತನೂ ಬೇಕು: ಬೆಂಗಳೂರಿನ ಐಐಎಸ್ಸಿಯ, ಏರೋಸ್ಟೇಸ್ ವಿಭಾಗದ ಪ್ರಾಧ್ಯಾಪಕ ಡಾ.ಕೆ.ಪಿ.ಜೆ. ರೆಡ್ಡಿ ಮಾತನಾಡಿ, ಪ್ರತಿಯೊಬ್ಬ ಸ್ನೇಹಿತನೂ ಬೇಕು, ಸ್ನೇಹಿತರ ಜೊತೆ ಸುಮಧುರ ಬಾಂಧವ್ಯಗಳನ್ನು ಹೊಂದಿರಬೇಕು.
ಇದೇ ನಿಮ್ಮ ಆಸ್ತಿ. ನಿಮ್ಮ ಜೊತೆ ಇದ್ದ ಸ್ನೇಹಿತ ಒಂದು ದಿನ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದರೂ ಸಂಶಯವಿಲ್ಲ ಎಂದ ಶ್ರೀಗಳು ಯಾವಾಗಲೂ ರ್ಯಾಂಕ್ ಪಡೆದವರನ್ನು ಮಾತ್ರ ಓಲೈಸದೆ ಕೊನೆಯ ಬೆಂಚ್ ಸ್ನೇಹಿತನನ್ನೂ ಬಿಡದೆ ಗೆಳೆತನ ಸಂಪಾದಿಸಿರಬೇಕು. ಯಾವುದೇ ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ಫಲ ಹೆಚ್ಚು. ಸಾಧಾರಣ ಅಥವಾ ಸಾಮಾನ್ಯನಾಗಿರದೆ ವಿಶೇಷ ವ್ಯಕ್ತಿಯಾಗಿ ಬಾಳಬೇಕು ಎಂದು ತಿಳಿಸಿದರು.
ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿ, ಹಾಸನದ ಶಂಭುನಾಥ ಸ್ವಾಮೀಜಿ, ಶ್ರೀ ಶೈಲನಾಥ ಸ್ವಾಮೀಜಿ ಹಾಗೂ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಎಂ.ಆರ್. ಸಣ್ಣಸಿದ್ದೇಗೌಡ, ಐ.ಎಂ. ಸಣ್ಣತಮ್ಮೇಗೌಡ, ಎಚ್.ಡಿ. ರಾಮೇಗೌಡ, ರಾಜ್ಗೋಪಾಲ್ ಹಾಗೂ ಕೆ. ಮೋಹನ್ ಉಪಸ್ಥಿತರಿದ್ದರು.
ಎಐಟಿ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಕೆ. ಸುಬ್ರಾಯ, ಕಳೆದ ಬಾರಿ ರ್ಯಾಂಕ್ ಪಡೆದವರನ್ನು ಅಭಿನಂದಿಸಿ, ಸ್ವಾಗತಿಸಿದರು. ಡಾ. ಸಿ.ಟಿ. ಜಯದೇವ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

