ವಿಪಕ್ಷಗಳು ಹೊಟ್ಟೆಕಿಚ್ಚಿನಿಂದ ಷಡ್ಯಂತ್ರ
ಕಪ್ರ ವಾರ್ತೆ,ಚಿಕ್ಕಮಗಳೂರು,ಏ.29
ರವಿಯವರ ನಾಯಕತ್ವದ ಗುಣವನ್ನು ಸಹಿಸಿಕೊಳ್ಳಲಾಗದ ವಿರೋಧ ಪಕ್ಷಗಳು ಹೊಟ್ಟೆಕಿಚ್ಚಿನಿಂದ ಅಪಪ್ರಚಾರದ ಷಡ್ಯಂತ್ರ ನಡೆಸಿ ವಿರೋಧಿಸುತ್ತಿವೆ ಎಂದು ಪಲ್ಲವಿ ಸಿ.ಟಿ. ರವಿ ಆರೋಪಿಸಿದ್ದಾರೆ.
ಸಖರಾಯಪಟ್ಟಣ ಸಮೀಪದ ಹುಲಿಕೆರೆ ಗ್ರಾಮದಲ್ಲಿ ಪತಿ ಸಿ.ಟಿ. ರವಿ ಪರ ಮತಯಾಚನೆ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸುದೀರ್ಘ 5 ದಶಕಗಳ ಕಾಲ ಅಧಿಕಾರ ನಡೆಸಿ ಜನರಿಗೆ ಪೊಳ್ಳು ಆಶ್ವಾಸನೆ ನೀಡುವ ಮೂಲಕ ಮಂಕು ಬೂದಿ ಎರಚುತ್ತಾ ಬಂದು, ಅಭಿವೃದ್ಧಿ ಶೂನ್ಯರಾಗಿದ್ದಾರೆ. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಕ್ಷೇತ್ರದಲ್ಲಿ ರವಿ ಶಾಸಕರಾದ ಮೇಲೆ ಗ್ರಾಮಾಂತರ ಪ್ರದೇಶ ಸೇರಿದಂತೆ ನಗರ ಬಹುತೇಕ ಅಭಿವೃದ್ಧಿ ಕಂಡಿದೆ. ಇದಕ್ಕಾಗಿ ಹೊಟ್ಟೆಕಿಚ್ಚು ತಾಳಲಾರದ ಪ್ರತಿಪಕ್ಷಗಳು ಸುಳ್ಳು ಹೇಳಿಕೆ ನೀಡುತ್ತಿವೆ ಎಂದರು.
ಅಭಿವೃದ್ಧಿಗೆ ಮತ ನೀಡಿ: ಕ್ಷೇತ್ರದ ಜನತೆ ಪ್ರಜ್ಞಾವಂತರಿದ್ದಾರೆ, ವಿರೋಧ ಪಕ್ಷಗಳ ವ್ಯಾಮೋಹ ಮತ್ತು ಪೂರ್ವಾಗ್ರಹಕ್ಕೆ ಒಳಗಾಗಿ ಮತ ಹಾಕಬೇಕೆ ಎಂಬುದನ್ನು ಜನತೆ ಯೋಚಿಸುತ್ತಾರೆ. ಜಾತಿ ಭೇದ ಮರೆತು ಎಲ್ಲರನ್ನು ಸಮಾನತೆಯಿಂದ ಕಂಡು ಸಾಮರಸ್ಯಕ್ಕೆ ಇಂಬು ನೀಡಿರುವ ರವಿಯ ಗುಣ ನಡತೆಗೆ ನಿಮ್ಮ ಮತ ನೀಡುವ ಮೂಲಕ ಕ್ಷೇತ್ರದ ಅಭಿವೃದ್ಧಿಯನ್ನು ಮತ್ತಷ್ಟು ಉನ್ನತಿಗೆ ಕೊಂಡೊಯ್ಯಲು ಸಹಕರಿಸುವಂತೆ ಮನವಿ ಮಾಡಿದರು.
ಗ್ರಾಪಂ ಮಾಜಿ ಅಧ್ಯಕ್ಷೆ ಬಲ್ಕಿಷ್ ಬಾನು ಮಾತನಾಡಿ, ಬಿಜೆಪಿ ಪಕ್ಷ ನೋಡಿ ಬೆಂಬಲಿಸುತ್ತಿಲ್ಲ ರವಿಯವರು ಶಾಸಕರಾದ ಮೇಲೆ ಜಾತಿ ನೋಡದೆ, ಯಾವುದೇ ವರ್ಗಕ್ಕೂ ಸೀಮಿತ ಮಾಡದೆ ಎಲ್ಲಾ ಗ್ರಾಮಗಳ ರಸ್ತೆ ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಆದ್ಯತೆ ಕೊಟ್ಟು ಕೆಲಸ ಮಾಡಿದ್ದಾರೆ ಎಂದರು.
ಗಾ.ಪಂ. ಮಾಜಿ ಅಧ್ಯಕ್ಷೆ ಜರೀನಾ ಬಾನು, ಲೋಕೇಶ್, ಸಲೀಮ್, ಶಿವಮೂರ್ತಿ, ಪಟೇಲ್ ಕುಮಾರ್, ಕವಿತಾ ಶೇಖರ್ ಹಾಜರಿದ್ದರು.
ಅಭಿವೃದ್ಧಿ ಪೂರಕ ವ್ಯಕ್ತಿತ್ವ ಅಗತ
ಮಾತಿನ ಮನೆಯಾದ ವಿಧಾನಸೌಧಕ್ಕೆ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ವ್ಯಕ್ತಿತ್ವ ಇರುವವರನ್ನು ನಿಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡಬೇಕು ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಅವರು ಹೇಳಿದರು.
ಸಾವು ನೋವಿಗೆ ಹೆಗಲು ಕೊಡುವ ಮೂಲಕ ಜನರ ನಡುವೆ ಸಲಿಗೆ, ಸಂಬಂಧ ಇಟ್ಟುಕೊಂಡಿದ್ದೇನೆ. ಮತದಾರರು ಅಭಿವೃದ್ಧಿ ಮತ್ತು ಒಳ್ಳೆ ನಡವಳಿಕೆಯನ್ನು ಅಪೇಕ್ಷೆ ಪಡುತ್ತಾರೆ. ಅದಕ್ಕನುಗುಣವಾಗಿ ನಡೆದುಕೊಂಡಿದ್ದರೆ ನನಗೆ ಆಶೀರ್ವಾದ ಮಾಡಿ ಎಂದರು.
ನನ್ನ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ರವಿ ಗೆದ್ದರೆ ಕೋಮುಗಲಭೆಯಾಗಿ ಊರು ನಾಶವಾಗುತ್ತದೆ ಎಂಬ ಗೊಡ್ಡು ಅಸ್ತ್ರ ಉಪಯೋಗಿಸಿದ್ದರು. ಅದಕ್ಕೆ ಜನ ಸೊಪ್ಪು ಹಾಕಲಿಲ್ಲ ಎಂಬುದನ್ನು ತಿಳಿದು ಈ ಬಾರಿ ನನ್ನ ವಿರುದ್ಧ ಸುಳ್ಳು ಆರೋಪಗಳ ಮೂಲಕ ಅಪಪ್ರಚಾರವನ್ನು ಬಂಡವಾಳವನ್ನಾಗಿ ಮಾಡಿಕೊಂಡಿದ್ದಾರೆ. ನಾನು ಶಾಸಕನಾದಾಗಿನಿಂದ ಎಲ್ಲರ ಮನೆಯಲ್ಲೂ ಅಡುಗೆ ತಯಾರಿಕೆಗೆ ಒಲೆ ಹತ್ತಿದೆ ಹೊರತು ಯಾವುದೇ ಊರಲ್ಲಿ ಬೇರೇನೂ ಹತ್ತಿಲ್ಲ ಎಂಬುದು ನಗ್ನ ಸತ್ಯ ಎಂದರು.
ಹಿರೇಮಗಳೂರು ಜಗದೀಶ್ ಮಾತನಾಡಿದರು. ನಗರಸಭೆ ಸದಸ್ಯರಾದ ಕವಿತಾ ಶೇಖರ್, ಎಚ್.ಡಿ. ತಮ್ಮಯ್ಯ, ತಾಪಂ ಉಪಾಧ್ಯಕ್ಷ ಎಂ.ಎಸ್. ಪುಟ್ಟೇಗೌಡ, ಸದಸ್ಯ ಕನಕರಾಜ್ ಅರಸ್, ಡಿ.ಕೆ. ನಿಂಗೇಗೌಡ, ಜಗದೀಶ್, ವರಸಿದ್ದಿ ವೇಣುಗೋಪಾಲ್, ಸೋಮಶೇಖರ್, ಮೋಹನ, ದೊಡ್ಡಪ್ಪಗೌಡ, ನಿರಂಜನಮೂರ್ತಿ, ಉಮೇಶ್, ವಿರೂಪಾಕ್ಷ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

