ಚಿಕ್ಕಮಗಳೂರು

ಕಾನೂನು ಉಲ್ಲಂಘಿಸಿ ಅರಣ್ಯ ಹಕ್ಕು ಸಮಿತಿ ರಚನೆ: ಆರೋಪ

Published On :

ಬಾಳೆಹೊನ್ನೂರು: ಇಲ್ಲಿಗೆ ಸಮೀಪದ ಹುಯಿಗೆರೆ ಗ್ರಾಮ ಪಂಚಾಯಿತಿಯಲ್ಲಿ ಕಾನೂನು ಉಲ್ಲಂಘಿಸಿ ಅರಣ್ಯ ಹಕ್ಕು ಸಮಿತಿ ರಚಿಸಲಾಗಿದೆ ಎಂದು ಜಿಲ್ಲಾ ಬುಡಕಟ್ಟು ಕೃಷಿಕರ ಸಂಘ ಆರೋಪಿಸಿದೆ.
ಕಳೆದ ಜುಲೈ 22 ರಂದು ಹುಯಿಗೆರೆ ಗ್ರಾ.ಪಂ.ನಲ್ಲಿ ಕಾರ್ಯದರ್ಶಿ, ಅಭಿವೃದ್ಧಿ ಅಧಿಕಾರಿ ಹಾಗೂ ಸದಸ್ಯರು ಸೇರಿ ಬುಡಕಟ್ಟು ಜನಾಂಗದವರಿಗೆ ಮಾಹಿತಿ ನೀಡದೆ ಸಮಿತಿ ರಚಿಸಿದ್ದಾರೆ ಎಂದು ದೂರಿದ್ದಾರೆ.
ಕಾನೂನು ಪ್ರಕಾರ ಅನುಸೂಚಿತ ಬುಡಕಟ್ಟು ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳ ಅಧಿನಿಯಮ 2006 ಮತ್ತು 2008 ರ ಅಡಿಯಲ್ಲಿ ಅರಣ್ಯ ಹಕ್ಕು ಸಮಿತಿಯನ್ನು ಆದಿವಾಸಿಗಳು ವಾಸಿಸುವ ಪ್ರದೇಶದಲ್ಲಿ ಆದಿವಾಸಿಗಳು ಮತ್ತು ಆ ಗ್ರಾಮದಲ್ಲಿ ವಾಸಿಸುವ ಇತರೆ ಅರಣ್ಯ ವಾಸಿಗಳನ್ನೊಳಗೊಂಡಂತೆ ಅಲ್ಲಿಯೇ ವಿಶೇಷ ಗ್ರಾಮಸಭೆ ಮಾಡಿ ಅರಣ್ಯ ಹಕ್ಕು ಸಮಿತಿ ರಚಿಸಬೇಕಿತ್ತು.
ಕಾನೂನು ಉಲ್ಲಂಘನೆ: ಆ ಪ್ರಕಾರ ಸಮಿತಿ ರಚಿಸದಿದ್ದನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದ ನಂತರ ಆ ಸಮಿತಿ ವಿಸರ್ಜನೆಯಾಗಿತ್ತು. ಪುನಃ ಕಾನೂನು ರೀತಿ ಸಮಿತಿ ರಚಿಸಲು ಸೂಚಿಸಿದ್ದರು. ಆದರೆ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಿರಿಯ ಅಧಿಕಾರಿಗಳ ಸೂಚನೆಗಳನ್ನು ಪಾಲಿಸದೇ ಹಿಂದೆ ಮಾಡಿದ್ದ ಸಮಿತಿಯನ್ನೇ ತಿದ್ದುಪಡಿ ಮಾಡಿ ಕಾನೂನು ಉಲ್ಲಂಘಿಸಿದ್ದಲ್ಲದೆ, ಅನುಮತಿ ಪಡೆಯದೇ ಆದಿವಾಸಿಗಳ ಹೆಸರನ್ನು ಸೇರಿಸಲಾಗಿದೆ ಎಂದು ಆರೋಪಿಸಿದರು.
ಈ ಕುರಿತು ಮಾಹಿತಿ ಕೇಳಲು ಹುಯಿಗೆರೆ ಗ್ರಾ.ಪಂ. ಕಚೇರಿಗೆ ಹುಯಿಗೆರೆ ಮತ್ತು ಮಣಬೂರು ಹಾಡಿಯ ಜನರು ತೆರಳಿದರೆ, ಗ್ರಾ.ಪಂ. ಅಧಿಕಾರಿಗಳು ಸಮರ್ಪಕವಾಗಿ ಉತ್ತರ ನೀಡಿಲ್ಲ ಬುಡಕಟ್ಟು ಸಂಘ ದೂರಿದೆ.
ಡಿಸಿಗೆ ಮನವಿ: ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡದ ಗ್ರಾ.ಪಂ.ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳಿಗೆ ಮಣಬೂರು ಹಾಗೂ ಹುಯಿಗೆರೆಯ ಗ್ರಾಮಸ್ಥರು ಆದಿವಾಸಿ ಸಾಂಪ್ರದಾಯಿಕ ಗ್ರಾಮಸಭೆ ನಡೆಸಿ ಮನವಿ ಸಲ್ಲಿಸಿದ್ದಾರೆ.
ಗ್ರಾ.ಪಂ. ಭೇಟಿ ವೇಳೆ ರಾಷ್ಟ್ರೀಯ ಆದಿವಾಸಿ ಆಂದೋಲನದ ಸದಸ್ಯೆ ಎಚ್.ಎನ್. ಜ್ಯೋತಿ, ತಾಲೂಕು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕೃಷ್ಣಪ್ಪ, ಕಾರ್ಯದರ್ಶಿ ಸುಂದರ್, ಮುಖಂಡರಾದ ಎಂ.ಸಿ. ರವಿ, ಎಂ.ಕೆ. ಶ್ರೀನಿವಾಸ್, ಬೊಗ್ಗು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.