ಕ್ಷೀರಭಾಗ್ಯ ಯೋಜನೆ: ಸ್ವಾಗತಾರ್ಹ
ಕಡೂರು: ಮಕ್ಕಳಲ್ಲಿ ಅಪೌಷ್ಟಿಕತೆ ಹೋಗಲಾಡಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಶಾಲಾಮಕ್ಕಳಿಗೆ ಹಾಲು ವಿತರಿಸುವ ಯೋಜನೆಯಿಂದ ಮಕ್ಕಳು ದೈಹಿಕ ಮತ್ತು ಮಾನಸಿಕವಾಗಿ ಸದೃಢಗೊಳ್ಳಲು ಅನುಕೂಲವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಂಗನಾಥ್ ಹೇಳಿದರು.
ಪಟ್ಟಣದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ನಡೆದ ಶಾಲಾ ಮಕ್ಕಳಿಗೆ ಹಾಲು ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರ 1ರಿಂದ 10ನೇ ತರಗತಿವರೆಗೆ ಹಾಲು ವಿತರಿಸುವ ಕಾರ್ಯಕ್ರಮ ಜಾರಿಗೆ ತಂದಿದ್ದು, ಮಕ್ಕಳ ನಡುವಿನ ತಾರತಮ್ಯ ಹೋಗಲಾಡಿಸಿ ಮಕ್ಕಳು ಪೌಷ್ಟಿಕ ಆಹಾರ ಸೇವಿಸಬೇಕೆಂಬ ದೃಷ್ಟಿಯಿಂದ ಅನುದಾನಿತ ಶಾಲೆಗಳು ಸೇರಿದಂತೆ ಎಲ್ಲ ಶಾಲೆಗಳಲ್ಲಿ ಹಾಲು ವಿತರಿಸುವ ಕಾರ್ಯಕ್ರಮ ಜಾರಿಗೆ ತಂದಿದೆ. 150ಮಿ. ಲೀಟರ್ ಹಾಲನ್ನು ಒಬ್ಬ ವಿದ್ಯಾರ್ಥಿಗೆ ವಾರದಲ್ಲಿ ಮೂರು ದಿನ ವಿತರಿಸಲಾಗುತ್ತಿದೆ ಎಂದರು.
ಹಾಲು ವಿತರಿಸುವ ಮೂಲಕ ಕಾರ್ಯಕ್ರಮ ಉಧ್ಘಾಟಿಸಿದ ಜಿಪ ಸದಸ್ಯೆ ಕವಿತಾ ಬೆಳ್ಳಿ ಪ್ರಕಾಶ್ ಮಾತನಾಡಿ, ಸರ್ಕಾರ ಯೋಜನೆ ಜಾರಿಗೆ ಮುನ್ನ ಅದರ ಸಾಧಕ ಭಾಧಕಗಳನ್ನು ಪರಿಶೀಲಿಸಿ ಜಾರಿಗೆ ತರುವುದು ಉತ್ತಮ. ಹಾಲು ಬಹು ಸೂಕ್ಷ್ಮವಾದ ಪದಾರ್ಥವಾಗಿದ್ದು ಸ್ವಲ್ಪಮಟ್ಟಿಗೆ ವ್ಯತ್ಯಾಸವಾದರೂ ಕೆಟ್ಟು ಹೋಗುವ ಸಂಭವ ಇದೆ. ಈ ಬಗ್ಗೆ ಅಡುಗೆಯರು ಬಹಳಷ್ಟು ಜಾಗ್ರತೆ ವಹಿಸಬೇಕು. ಅಲ್ಲದೆ ಸರ್ಕಾರ ಮಕ್ಕಳಿಗೆ ಕಬ್ಬಿಣಾಂಶ ಮಾತ್ರೆಗಳನ್ನು ನೀಡಲು ನಿರ್ಧರಿಸಿದ್ದು ಈ ಮಾತ್ರೆ ಕೆಲ ಮಕ್ಕಳಿಗೆ ಆಗುವುದಿಲ್ಲ ಎಂದು ಸ್ವತಹ ವೈದ್ಯರೇ ಹೇಳಿದ್ದಾರೆ. ಅವಸರದ ತೀರ್ಮಾನಗಳಿಂದ ಅನಾಹುತಗಳು ಹೆಚ್ಚುವುದರಿಂದ ಎಚ್ಚರಿಕೆ ಅಗತ್ಯ. ಸರ್ಕಾರ ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿವೇತನ ನೀಡುವಿಕೆ ಹಾಗೂ ಶುದ್ಧ ಕುಡಿಯುವ ನೀರು ಪೂರೈಕೆಯಂತಹ ಕ್ರಮ ಕೈಗೊಂಡಲ್ಲಿ ಅನುಕೂಲ. ಹಿಂದೆ ಬಿಸಿ ಊಟ ಇಲದೆಯೂ ನಮ್ಮ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ ಎಂಬುದನ್ನು ತಿಳಿಯಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್.ಕೆ. ಪ್ರಭು ಮಾತನಾಡಿ, ಸರ್ಕಾರದ ಆದೇಶದಂತೆ ಮಕ್ಕಳ ಆರೋಗ್ಯ ಪರಿಶೀಲನೆಗಾಗಿ ಪ್ರತೀ ತಾಲೂಕಿಗೆ ಇಬ್ಬರು ವೈದ್ಯರು ಮತ್ತು ಸಿಬ್ಬಂದಿ ನೇಮಕ ಮಾಡಲಾಗಿದೆ. ಕಳೆದ ವರ್ಷ ಮಕ್ಕಳ ಆರೋಗ್ಯ ಪರೀಕ್ಷೆಯಲ್ಲಿ 9 ಗಂಭೀರ ಪ್ರಕರಣಗಳು ಪತ್ತೆಯಾಗಿದ್ದು ಅಗತ್ಯ ಚಿಕಿತ್ಸೆ ನೀಡಲಾಗಿದೆ. ಶಾಲೆಗಳಲ್ಲಿ ಪ್ರತೀ ಸೋಮವಾರ ಉಚಿತ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಎಂದರು. ತಾಪಂ ಅಧ್ಯಕ್ಷ ಓಂಕಾರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಿಸಿ ಊಟದ ಅಧಿಕಾರಿ ರಾಮು, ಬಿಆರ್ಸಿ ಲೋಕೇಶ್, ಪುರಸಭಾ ಸದಸ್ಯ ರೇಣುಕಾರಾಧ್ಯ, ಎನ್.ಎಸ್. ಚಂದ್ರಪ್ಪ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

