ಚಿಕ್ಕಮಗಳೂರು

8 ಲಕ್ಷ ವೆಚ್ಚದಲ್ಲಿ ನೀರ್ಗಾಲುವೆ ನಿರ್ಮಾಣ

Published On :

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಆ.2
ಎಂಟು ಲಕ್ಷ ರೂ. ವೆಚ್ಚದಲ್ಲಿ ನಾಲ್ಕು ನೀರ್ಗಾಲುವೆ ನಿರ್ಮಿಸುವ ಮೂಲಕ ರಸ್ತೆಯ ಮೇಲೆ ನೀರು ಹರಿದು ರಸ್ತೆ ಹಾಳಾಗುವುದನ್ನು ತಡೆಗಟ್ಟಲಾಗುವುದೆಂದು ಮೈಲಿಮನೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಸಿ. ಕಿಶನ್ ಹೇಳಿದ್ದಾರೆ.
ಮೈಲಿಮನೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಶುಕ್ರವಾರ ನಡೆದ ಗ್ರಾಮಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗಡಬನಹಳ್ಳಿ, ಹೊಸಪೇಟೆ, ಜೋಳದಾಳು ಮತ್ತು ಮೈಲಿಮನೆಯ ನಾಲ್ಕು ಸ್ಥಳಗಳಲ್ಲಿ ಬಾಕ್ಸ್ ಚರಂಡಿ ನಿರ್ಮಿಸಿ ರಸ್ತೆಯಲ್ಲಿ ನೀರು ಹರಿಯುವುದನ್ನು ತಪ್ಪಿಸುವ ಮೂಲಕ ರಸ್ತೆ ಉಳಿಸಿಕೊಳ್ಳುವ ಯೋಜನೆ ರೂಪಿಸಲಾಗಿದೆ.  ಇದಕ್ಕೆ ತಾಪಂನಿಂದ ಅನುಮೋದನೆಯೂ ದೊರಕಿದ್ದು, ಮಳೆ ಸ್ವಲ್ಪ ನಿಂತ ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎಂದರು.
4 ಲಕ್ಷ ಮೀಸಲು: ಮೈಲಿಮನೆ ಮತ್ತು ಹೊಸಪೇಟೆ ಬಸ್ ನಿಲ್ದಾಣ ನಿರ್ಮಿಸಲು 4 ಲಕ್ಷ ಕಾಯ್ದಿಟ್ಟಿರುವುದಾಗಿ ಉತ್ತರಿಸಿದ ಅವರು, ಇಂದಿರಾ ಆವಾಸ್ ಯೋಜನೆಯಡಿ ಬಂದಿರುವ 15 ಅರ್ಜಿಗಳ ಜೊತೆ ಹಿಂದಿನ 5 ಅರ್ಜಿಗಳನ್ನು ಪರಿಗಣಿಸುತ್ತಿರುವುದಾಗಿ ಹೇಳಿದ ಅವರು, ಶೇ.50 ರಷ್ಟು ಪರಿಶಿಷ್ಟರನ್ನು ಫಲಾನುಭವಿಗಳಾಗಿ ಆರಿಸಬೇಕಿದ್ದು, 1.2 ಲಕ್ಷ ನೀಡಲಾಗುವುದು ಎಂದು ತಿಳಿಸಿದರು.
ಪಡಿತರ ತಾತ್ಕಾಲಿಕ ಚೀಟಿ ಲಾಕ್ ಆಗಿದ್ದು, 10ಕ್ಕೂ ಹೆಚ್ಚು ಕುಟುಂಬಗಳು ಪಡಿತರದಿಂದ ವಂಚನೆಗೊಳಗಾಗಿವೆ. ಆಹಾರ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಇಲ್ಲ ಎಂದು ಪುಟ್ಟಸ್ವಾಮಿ ಹಾಗೂ ಕೃಷ್ಣಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು. ಆಹಾರ ಇಲಾಖೆಗೂ ಸಭಾ ಸೂಚನೆ ಕಳುಹಿಸಿರುವುದನ್ನು ಪರಿಶೀಲಿಸಿದ ಅಧ್ಯಕ್ಷರು, ಅವರನ್ನು ಕರೆಯಿಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.
ಗ್ರಾಮಸ್ಥರ ಆಕ್ರೋಶ: ಕೆಇಬಿ ಅಧಿಕಾರಿಗಳು ಬಾರದಿರುವುದು ಬಹಳಷ್ಟು ಗ್ರಾಮಸ್ಥರನ್ನು ಕೆರಳಿಸಿತು. ಸುಮಾರು 15 ದಿನಗಳಿಂದ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತವಾಗಿದೆ. ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಎಂದು ಪೂರ್ಣೇಶ್ ಮತ್ತಿತರರು ಆಕ್ಷೇಪಿಸಿದರು. ಈ ಬಗ್ಗೆ ಕೆಪಿಟಿಸಿಎಲ್ ಅಧಿಕಾರಿಗಳಿಗೆ ಈಗಾಗಲೇ ಈ ವಿಚಾರ ತಿಳಿಸಲಾಗಿದೆ ಎಂದ ಕಿಷನ್, ಈ ವರ್ಷ ವಿಪರೀತ ಮಳೆ ಗಾಳಿಯಿಂದ 8 ವಿದುತ್ ಕಂಬಗಳು ಮುರಿದುಬಿದ್ದಿವೆ. ಕಂಪನಿ ಎಸ್ಟೇಟ್ ಕೆಳಭಾಗದ ಗದ್ದೆಯ ಸಿಮೆಂಟ್ ಕಂಬ ಹತ್ತಿ ಲ್ಯೆನ್ ದುರಸ್ತಿ ಮಾಡುತ್ತಿದ್ದಾಗಲೇ ಕಂಬ ತುಂಡಾಗಿ ಓರ್ವನ ಕಾಲು ಮುರಿದಿದೆ. ಗ್ರಾಮಸಭೆಗೂ ಅಧಿಕಾರಿಗಳು ಬಂದಿಲ್ಲ.  ಖಾಸಗಿ ಗುತ್ತಿಗೆದಾರರಿಂದ ಸಾಧ್ಯವಾದಷ್ಟು ದುರಸ್ತಿ ಕೈಗೊಂಡು ವಿದ್ಯುತ್ ಪೂರೈಕೆ ಸುಧಾರಿಸಲು ಕ್ರಮಕೈಗೊಳ್ಳಬೇಕೆಂಬ ಗ್ರಾಮಸ್ಥರ ಸಲಹೆ ಪರಿಗಣಿಸುವುದಾಗಿ ಭರವಸೆ ನೀಡಿದರು.  
ನೋಡೆಲ್ ಅಧಿಕಾರಿ ಪುನೀತ್, ಉಪಾಧ್ಯಕ್ಷ ಶ್ರೀಧರ್, ಸದಸ್ಯರುಗಳಾದ ಸಿದ್ದಯ್ಯ, ಪ್ರದೀಪ್, ದೇವಯ್ಯ, ಸೌಮ್ಯ, ನಂದಿನಿ ಮತ್ತು ಅಸ್ಗರಿಭಾನು ಮತ್ತಿತರರು ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.