ವಕೀಲರು ವೃತ್ತಿ ನೈಪುಣ್ಯತೆಯಿಂದ ನ್ಯಾಯ ಒದಗಿಸಿ
ಚಿಕ್ಕಮಗಳೂರು: ವಕೀಲ ವೃತ್ತಿ ಜವಬ್ದಾರಿ ಮತ್ತು ಗೌರವಾನ್ವಿತ ಹುದ್ದೆಯಾಗಿದ್ದು, ವಕೀಲರು ತಮ್ಮ ನೈಪುಣ್ಯತೆ ಮತ್ತು ಚತುರತೆ ಉಪಯೋಗಿಸಿ ಜನರಿಗೆ ನ್ಯಾಯ ಒದಗಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಸವರಾಜ್ ಎ. ಪಾಟೀಲ್ ಹೇಳಿದ್ದಾರೆ.
ಜಿಲ್ಲಾ ನ್ಯಾಯಾಲಯದ ಪೂರಕ ಕಟ್ಟಡದಲ್ಲಿ ವಕೀಲರ ಸಂಘ ಹಿರಿಯ ವಕೀಲ ನಾಗಭೂಷಣ್ರವರು ತಮ್ಮ 50 ವರ್ಷಗಳ ವೃತ್ತಿ ಜೀವನ ಪೂರೈಸಿದ ಹಿನ್ನಲೆಯಲ್ಲಿ ಅವರ ಶಿಷ್ಯವೃಂದ ಶನಿವಾರ ಸಂಜೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ನಾಗಭೂಷಣ್ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.
ಸ್ವತಂತ್ರ ಹೋರಾಟಗಾರ: ಹಿರಿಯ ವಕೀಲರ ಸಾಧನೆಯನ್ನು ಅವರ ಶಿಷ್ಯರಲ್ಲಿ ಇಂದು ಕಾಣಬಹುದು. 50 ವರ್ಷಗಳನ್ನು ತಮ್ಮ ವೃತ್ತಿ ಜೀವನದಲ್ಲಿ ಯಶಸ್ವಿಯಾಗಿ ಪೂರೈಸುವುದು ಸಾಮಾನ್ಯವಾದ ಸಂಗತಿಯಲ್ಲ. ಇಂತಹ ಸರಳ ಹಾಗೂ ನೇರ ವ್ಯಕ್ತಿತ್ವದ ನಾಗಭೂಷಣ್ರನ್ನು ಸನ್ಮಾನಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು. ಹಿರಿಯ ವಕೀಲ ಎಸ್. ದಿನಕರ್ ರಾವ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾಗಭೂಷಣ್ರವರ ತಂದೆ ಸ್ವತಂತ್ರ ಹೋರಾಟಗಾರರು ಹಾಗೂ ಖ್ಯಾತ ವಕೀಲರಾಗಿ ಸೇವೆ ಸಲ್ಲಿಸಿದ್ದರು. ತಂದೆಯ ಆದರ್ಶಗಳನ್ನು ಮೈಗೂಸಿಕೊಂಡು ಅನೇಕರಿಗೆ ಉತ್ತಮ ಮಾರ್ಗದರ್ಶಕರಾಗಿ ಅತ್ಯಂತ ಯಶ್ವಸ್ವಿ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು.
ವೃತ್ತಿ ಗೌರವ ಹೆಚ್ಚಿಸಿ: ಭಾರತೀಯ ವಕೀಲರ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ, ವಕೀಲ ವೃತ್ತಿಯನ್ನು ಅತ್ಯಂತ ಪ್ರಾಮಾಣಿಕತೆ ಮತ್ತು ಶ್ರದ್ಧೆಯಿಂದ ನಿರ್ವಹಿಸಿ ವೃತ್ತಿ ಗೌರವ ಹೆಚ್ಚಿಸಿದ್ದಾರೆ. ಈ ವೃತ್ತಿಯಲ್ಲಿ ಚಾಣಾಕ್ಷತೆ ಇದ್ದಲ್ಲಿ ಮಾತ್ರ ಹೆಸರು ಮಾಡಲು ಸಾಧ್ಯ. ಸಿವಿಲ್ ಮತ್ತು ಕ್ರಿಮಿನಲ್ ಎರಡೂ ಪ್ರಕರಣಗಳಲ್ಲಿ ಯುವಕರು ಜ್ಞಾನ ಸಂಪಾದಿಸಿ ಜನರ ಸೇವೆ ಮಾಡಬೇಕು. ರಾಜ್ಯದಲ್ಲಿ ಚಿಕ್ಕಮಗಳೂರು ವಕೀಲರ ಸಂಘಕ್ಕೆ ಉತ್ತಮ ಹೆಸರಿದ್ದು, ಅದನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಸನ್ಮಾನಿತರಾದ ಬಿ.ಎನ್. ನಾಗಭೂಷಣ್ ಮಾತನಾಡಿ, ಪ್ರತಿಯೊಬ್ಬರು ಜೀವನದಲ್ಲಿ ಗುರಿಯಿಟ್ಟುಕೊಂಡು ಸಾಧಿಸುವ ಛಲದೊಂದಿಗೆ ಕರ್ತವ್ಯ ನಿರ್ವಹಿಸಬೇಕು. ಪ್ರತಿಯೊಬ್ಬರ ಯಶಸ್ಸಿಗೆ ಗುರುಗಳ ಮಾರ್ಗದರ್ಶನ ಮುಖ್ಯ. ಗುರುಶಿಷ್ಯರ ನಡುವೆ ಸ್ನೇಹಮಯ ವಾತಾವರಣ ನಿರ್ಮಿಸಿಕೊಂಡು ಸಮಸ್ಯೆಗಳ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.
ಯುವ ವಕೀಲರಿಗೆ ಪ್ರತಿ ತಿಂಗಳು ಹಳೆ ಮತ್ತು ಹೊಸ ಕಾನೂನುಗಳ ಬಗ್ಗೆ ಚರ್ಚೆ ನಡೆಸುವುದರ ಜೊತೆಗೆ ನ್ಯಾಯಾಲಯದ ಆವರಣದಲ್ಲಿ ದತ್ತಿ ಉಪನ್ಯಾಸ ನಡೆಸಲು 25 ಸಾವಿರ ರೂಪಾಯಿ ನೀಡುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನ್ಯಾಯಾಧೀಶರಾದ ಎಸ್.ಬಿ. ವಸ್ತ್ರಮಠ್, ತಿಮ್ಮಣ್ಣಾಚಾರ್, ಮಂಜುನಾಥ್ ನಾಯಕ್, ದಯಾನಂದ್ ಹಿರೇಮಠ್, ಸುಬ್ರಹ್ಮಣ್ಯ, ರೂಪ, ಲಕ್ಷ್ಮಣ್ ಗೌಡ, ಧೃವನಾರಾಯಣ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

