ಚಿಕ್ಕಮಗಳೂರು

ಗ್ರಾಮ ಪಂಚಾಯಿತಿ ಅಧ್ಯಕ್ಷರ ಅವಿರೋಧ ಆಯ್ಕೆ

Published On :

ಚಿಕ್ಕಮಗಳೂರು: ತಾಲೂಕಿನ ಕೆ.ಆರ್. ಪೇಟೆ ಗ್ರಾಮ ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ಟಿ.ಪಿ. ಪೂರ್ಣೇಶ್ ಅವಿರೋಧ ಆಯ್ಕೆಯಾಗಿದ್ದಾರೆ.
ಕೆ.ಆರ್. ಪೇಟೆ ಗ್ರಾಮ ಪಂಚಾಯ್ತಿಯ ಅಧ್ಯಕ್ಷರಾಗಿದ್ದ ಬಿ.ಸಿ. ಶಿವೇಗೌಡ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಇತ್ತೀಚೆಗೆ ಚುನಾವಣೆ ನಡೆಯಿತು.
ಟಿ.ಪಿ. ಪೂರ್ಣೇಶ್ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಬಸವರಾಜ್ ಘೋಷಿಸಿದರು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರಿಗೆ ಗ್ರಾಮ ಪಂಚಾಯ್ತಿ ಸದಸ್ಯರು ಅಭಿನಂದನೆ ಸಲ್ಲಿಸಿದರು.

ಹದಗೆಟ್ಟ ರಸ್ತೆ: ಸಂಚಾರ ಸ್ಥಗಿತ
ಚಿಕ್ಕಮಗಳೂರು: ಕೊಪ್ಪ ತಾಲೂಕಿನ ಜಯಪುರ- ಬಸರೀಕಟ್ಟೆ ರಸ್ತೆಯು ಇತ್ತೀಚಿಗೆ ಸುರಿದ ಭಾರಿ ಮಳೆಯಿಂದಾಗಿ ಹದಗೆಟ್ಟಿದ್ದು, ಈ ರಸ್ತೆಯಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಸಾರ್ವಜನಿಕ ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲದ ಕಾರಣ ಅಪಘಾತಗಳಾಗುವ ಸಂಭವ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಠಿಯಿಂದ ಜಿಲ್ಲಾ ದಂಡಾಧಿಕಾರಿಗಳು ಹಾಗೂ ಪ್ರಭಾರಿ ಜಿಲ್ಲಾಧಿಕಾರಿ ಎಸ್.ಎನ್. ಬಾಲಚಂದ್ರರವರು ಜಯಪುರ- ಬಸರೀಕಟ್ಟೆ ರಸ್ತೆಯಲ್ಲಿ ಸಂಚರಿಸುವ ಎಲ್ಲಾ ರೀತಿಯ ವಾಹನ ಸಂಚಾರವನ್ನು ನಿರ್ಭಂಧಿಸಿ ಆದೇಶಿಸಿದ್ದಾರೆ.
ಸದರೀ ರಸ್ತೆಯಲ್ಲಿ ಸಂಚರಿಸುವ ಎಲ್ಲಾ ರೀತಿಯ ವಾಹನಗಳು ಹೇರೂರು- ಬಸರೀಕಟ್ಟೆ ಮಾರ್ಗದಲ್ಲಿ ಸಂಚರಿಸಲು ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ರಂಜಾನ್ ಆಚರಣೆ
ಬಾಳೆಹೊನ್ನೂರು: ಹೋಬಳಿಯಾದ್ಯಂತ ಗುರುವಾರ ಮುಸ್ಲಿಮರು ರಂಜಾನ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.
ದಕ್ಷಿಣ ಕನ್ನಡದಲ್ಲಿ ಬುಧವಾರ ರಾತ್ರಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಗುರುವಾರ ಹಬ್ಬ ಆಚರಿಸಲಾಯಿತು. ಮುಸ್ಲಿಂ ಪಂಗಡದ ಕೆಲವರು ಶುಕ್ರವಾರ ಹಬ್ಬ ಆಚರಿಸಲಿದ್ದಾರೆ.  ರಂಜಾನ್ ಅಂಗವಾಗಿ ಮುಸ್ಲಿಮರು ಸಮೀಪದ ಮಸೀದಿಗಳಿಗೆ ಹಾಗೂ ಈದ್ಗಾ ಮೈದಾನಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ
ನರಸಿಂಹರಾಜಪುರ: ತಾಲೂಕು ಪಂಚಾಯ್ತಿ ಆವರಣದಲ್ಲಿರುವ ಸೌಮರ್ಥ್ಯ ಸೌಧದಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಯೋಜನಾಧಿಕಾರಿ  ಸುಬ್ಬರಾವ್ ಅವರು ಗುರುವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.
ಸಭೆಯಲ್ಲಿ ತಾಲೂಕು ಪಂಚಾಯ್ತಿ ಪ್ರಭಾರಿ ಕಾರ್ಯನಿರ್ವಹಣಾಧಿಕಾರಿ ಸೀಮಾ, ಲೆಕ್ಕ ಅಧೀಕ್ಷಕ ಬಿ.ಜಿ. ಮಾಳಮ್ಮನವರ್ ಉಪಸ್ಥಿತರಿದ್ದರು.
ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯ್ತಿಗಳ ಪಿ.ಡಿ.ಓ ಗಳು ಭಾಗವಹಿಸಿದ್ದರು.

ಕೃಷಿ ಚಟುವಟಿಕೆ ಚುರುಕು
ಶೃಂಗೇರಿ: ಕಳೆದೆರೆಡು ದಿನಗಳಿಂದ ಗಾಳಿ ಮಳೆಯ ಆರ್ಭಟ ಕಡಿಮೆಯಾಗಿದ್ದು ಕೃಷಿ ಚಟುವಟಿಕೆಗಳು ಚುರುಕುಗೊಂಡಿದೆ. ಕೆಲವೆಡೆ ಈಗಾಗಲೇ ಕೆಲವೆಡೆ ಬತ್ತದ ನಾಟಿ ಕೆಲಸ ಮುಗಿದಿದ್ದು, ಉಳಿದೆಡೆ ನಾಟಿ ಕೆಲಸ ಚುರುಕುಗೊಂಡಿದೆ. ಮಳೆ ಕಡಿಮೆಯಾಗಿರುವುದರಿಂದ ಬಹುತೇಕ ಅಡಕೆ ತೋಟಗಳಿಗೆ ಕೊಳೆರೋಗ ತಗುಲಿದ್ದು, ಅಡಕೆ ಉದುರುವಿಕೆ ಆರಂಭವಾಗಿದೆ. ಔಷದ ಸಿಂಪಡಣೆ ಕೆಲಸವೂ ಭರದಿಂದ ಸಾಗಿದೆ.

ಪದಾಧಿಕಾರಿಗಳ ಆಯ್ಕೆ
ಶೃಂಗೇರಿ: ಇಲ್ಲಿನ ಶ್ರೀ ಜೆಸಿಬಿಎಂ ಕಾಲೇಜಿನ 2013-14 ನೇ ಸಾಲಿನ ಅಧ್ಯಾಪಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕಿಯೆ ಕಾಲೇಜಿನಲ್ಲಿ ಸರ್ವ ಸದಸ್ಯರ ಸಮ್ಮುಖದಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಯಶವಂತಿ ಎಸ್. ಸಾಲಿಯನ್, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎಸ್. ವೆಂಕಪ್ಪ, ಸಹಕಾರ್ಯದರ್ಶಿಯಾಗಿ ರಾಘವೇಂದ್ರ. ಪಿ, ಖಜಾಂಚಿಯಾಗಿ ವಿಜಿತ್. ಕೆ ಆಯ್ಕೆಯಾಗಿದ್ದಾರೆ.

ಯುವಕರಿಗೆ ಮಾರ್ಗದರ್ಶನ ಆಗತ್ಯ
ಶೃಂಗೇರಿ: ಯುವ ಮನಸ್ಸುಗಳಿಗೆ ಸೂಕ್ತ ಮಾರ್ಗದರ್ಶನದ ಅವಶ್ಯಕತೆ ಇದೆ ಎಂದು ಮೈಸೂರಿನ ಖ್ಯಾತ ವೈದ್ಯ ಡಾ. ಮಣಿಕರ್ಣಿಕಾ ತಿಳಿಸಿದರು. ತಾಲೂಕಿನ ಮರ್ಕಲ್ ಪಂಚಾಯಿತಿ ಕಿಗ್ಗಾ ಶ್ರೀ ಅಭಿನವ ರಮಾನಂದ ಪ್ರೌಢಶಾಲಾವರಣದಲ್ಲಿ ವಿದ್ಯಾರ್ಥಿ ಸಂಘ ಹಾಗೂ ಪರಿಸರ ಸಂಘಗಳ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಹದಿಹರೆಯದ ವಯಸ್ಸಿನ ಸಮಸ್ಯೆಗಳು ಮತ್ತು ಸವಾಲುಗಳು ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಹದಿಹರೆಯದಲ್ಲಿ ಮಕ್ಕಳು ಚಂಚಲತೆ, ಮುಂಗೋಪ, ಹಠಮಾರಿತನ,ದುಶ್ಚಟಗಳಿಗೆ ಬಲಿಯಾಗುಯುವಿಕೆ ಮುಂತಾದ ಸಮಸ್ಯೆಗಳಿಗೆ ಬಲಿಯಾಗುತ್ತಾರೆ. ಆತ್ಮವಿಶ್ವಾಸ ಕಳೆದುಕೊಳ್ಳುವ ಸ್ಥಿತಿಯನ್ನು ತಲುಪುತ್ತಾರೆ. ಆದ್ದರಿಂದ ಈ ವಯಸ್ಸಿನಲ್ಲಿ ಸೂಕ್ತ ಸಲಹೆ ಮಾರ್ಗದರ್ಶನ ನೀಡಬೇಕು ಎಂದರು. ಅಮೆರಿಕದ ವೈದ್ಯೆ ಡಾ. ಪದ್ಮಪ್ರಶಾಂತಿ ಪರಿಸರ ಮಾಲಿನ್ಯ ಮತ್ತು ಸಮಸ್ಯೆಗಳು ಎಂಬ ವಿಷಯದ ಕುರಿತು ಮಾತನಾಡಿದರು.

ಅವಧಿ ವಿಸ್ತರಣೆ
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾನಿಲಯವು ಪ್ರಸಕ್ತ ಶೈಕ್ಷಣಿಕ ಸಾಲಿಗೆ ಸಾಮಾನ್ಯ ಸ್ನಾತಕ ಪದವಿ ಕೋರ್ಸ್ಗಳ ಪ್ರಥಮ, ತೃತೀಯ ಹಾಗೂ ಐದನೇ ಸೆಮಿಸ್ಟರ್ಗೆ ಪ್ರವೇಶ ಪಡೆಯಲು 300 ದಂಡಶುಲ್ಕದೊಂದಿಗೆ ಪ್ರವೇಶ ಪಡೆಯಲು ಆಗಸ್ಟ್ 3ರ ವರೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಿಶೇಷ ತರಗತಿ ತೆಗೆದುಕೊಂಡು ಹಾಜರಾತಿ ಕೊರತೆಯನ್ನು ಸರಿದೂಗಿಸಿಕೊಳ್ಳುವ ಷರತ್ತಿಗೊಳಪಟ್ಟು ಆಗಸ್ಟ್ 7ರವರೆಗೆ ಅವಧಿ ವಿಸ್ತರಿಸಲಾಗಿದೆ.
ರೆಗ್ಯೂಲಲ್ ಪಿಯುಸಿ ಉತ್ತೀರ್ಣರಾಗಿದ್ದು, ತಡವಾಗಿ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ದಂಡಶುಲ್ಕ 500 ರುಪಾಯಿ ಹಾಗೂ ತೃತೀಯ ಮತ್ತು ಐದನೇ ಸೆಮಿಸ್ಟರ್ಗಳ ಪದವಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ದಂಡಶುಲ್ಕ 300 ರುಪಾಯಿ ನಿಗದಿಗೊಳಿಸಲಾಗಿದೆ. ಜುಲೈ 30ರಂದು ಫಲಿತಾಂಶ ಪ್ರಕಟವಾಗಿರುವ ಕೋರ್ಸ್ಗಳಿಗೆ ತೃತೀಯ ಮತ್ತು ಐದನೇ ಸೆಮಿಸ್ಟರ್ ಪ್ರವೇಶಕ್ಕೆ ದಂಡಶುಲ್ಕ ಅನ್ವಯವಾಗುವುದಿಲ್ಲ ಎಂದು ಕುವಿವಿ ಶೈಕ್ಷಣಿಕ ಕುಲಸಚಿವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.