ತಾಲೂಕಿನಲ್ಲಿ ಉತ್ತಮ ಮಳೆ; ರೈತರಲ್ಲಿ ಸಂತಸ
ಕಡೂರು: ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ರೈತರ ಬೆಳೆಗಳು ಕೈಗೆ ಸಿಗುವುದೆಂಬ ಅಪಾರ ನಿರೀಕ್ಷೆಯ ಜೊತೆಗೆ ಕೆಲವೆಡೆ ಸೂರ್ಯಕಾಂತಿ ಮತ್ತು ಮೆಕ್ಕೆಜೋಳಕ್ಕೆ ಗರಿರೋಗ ಬಂದಿರುವುದರಿಂದ ರೈತರಲ್ಲಿ ಆತಂಕ ಮನೆ ಮಾಡಿದೆ.
ತಾಲೂಕಿನ ರೈತರು ಬಯಲು ಪ್ರದೇಶದ ಸಾಂಪ್ರದಾಯಿಕ ಬೆಳೆಗಳಾದ ರಾಗಿ ಮತ್ತು ಜೋಳ ಕೈಬಿಟ್ಟು ಪರ್ಯಾಯ ಬೆಳೆಗಳತ್ತ ವಾಲಿದ್ದಾರೆ. ಸುಧಾರಿತ ಕೃಷಿ ಪದ್ಧತಿ ಅಳವಡಿಕೆ ಮಾಡುತ್ತಿದ್ದಾರೆ. ಆದರೆ ಅಪರೂಪವಾಗಿದ್ದ ಮೆಕ್ಕೆಜೋಳ ಹಿರೇನಲ್ಲೂರು, ಬೀರೂರು, ಕಸಬಾ, ಯಗಟಿ ಮತ್ತು ಸಿಂಗಟಗೆರೆ ಹೋಬಳಿಗಳಲ್ಲಿ ಬೆಳೆಯಲಾಗುತ್ತಿದೆ.
ಬೀಜದ ದೋಷ: ಆಯಾ ಪ್ರದೇಶದ ಹವಾಮಾನ ಅಥವಾ ಬೀಜದ ದೋಷದಿಂದಾಗಿ ಕೆಲವೆಡೆ ಬೆಳೆ ಎತ್ತರಕ್ಕೆ ಬಂದಂತೆ ಗರಿಕೆ ರೋಗ ಆವರಿಸಿ ರೈತರನ್ನು ಆತಂಕಕ್ಕೀಡು ಮಾಡಿದೆ. ಈ ಬಗ್ಗೆ ಹಿರೇನಲ್ಲೂರಿನ ರೈತ ಪರಮೇಶ್ವರಪ್ಪ ಮಾತನಾಡಿ,ನಾಲ್ಕು ಎಕರೆಯಲ್ಲಿ ಹಾಕಿರುವ ಮೆಕ್ಕೆಜೋಳ ಉತ್ತಮವಾಗಿ ಬಂದಿದ್ದರೂ ಗರಿಕೆ ರೋಗ ಆವರಿಸಿ ಬೆಳೆ ಕೈಗೆ ಬಾರದ ಸ್ಥಿತಿ ಉಂಟಾಗಿದೆ. ಕಳಪೆ ಗುಣಮಟ್ಟದ ಬೀಜದಿಂದಾಗಿ ಬೆಳೆ ಹಾಳಾಗುವ ಹಂತ ತಲುಪಿದೆ ಎಂದು ನೋವಿನಿಂದ ನುಡಿದರು. ಇನ್ನು ಸೂರ್ಯಕಾಂತಿಗೂ ಅಲ್ಲಲ್ಲಿ ಗರಿಕೆ ರೋಗ ಆವರಿಸಿರುವುದರಿಂದ ಸಹಜವಾಗಿಯೇ ರೈತರು ಆತಂಕದಲ್ಲಿದ್ದು ಕೈಗೆ ಬಂದ ಬೆಳೆ ಬಾಯಿಗೆ ಬರದಂತಾಗಿದೆ.
ಅಂಗಮಾರಿ ರೋಗ: ಆಲೂಗಡ್ಡೆಯನ್ನು ಹಿರೇನಲ್ಲೂರು ಹೋಬಳಿಯ ಕೆಲ ಭಾಗ ಮತ್ತು ಎಮ್ಮೇದೊಡಿ ಭಾಗದಲ್ಲಿ ಹೆಚ್ಚಾಗಿ ಬೆಳೆದಿದ್ದು, ಅಂಗಮಾರಿ ರೋಗ ಹರಡುತ್ತಿರುವುದರಿಂದ ನಿರೀಕ್ಷೆಯನ್ನಿಟ್ಟುಕೊಂಡಿರುವ ರೈತರು ಆತಂಕದಲ್ಲಿದ್ದಾರೆ.
ಇನ್ನು ಹಿರೇನಲ್ಲೂರು ಹೋಬಳಿ ಪ್ರಮುಖವಾಗಿ ಈರುಳ್ಳಿ ಬೆಳೆಗೆ ಪ್ರಸಿದ್ಧಿಯಾಗಿದ್ದು ಉತ್ತಮ ಧಾರಣೆ ಇರುವ ಬೆನ್ನಲ್ಲೇ ಈ ಭಾರಿ ಹಿರೇನಲ್ಲೂರು, ಗಿರಿಯಾಪುರ, ಆಸಂದಿ, ಕೆದಿಗೆರೆ, ಮೇಲನಹಳ್ಳಿ ಸೇರಿದಂತೆ ಸಾವಿರಾರು ಹೆಕ್ಟೇರ್ ಜಮೀನಿನಲ್ಲಿ ಉತ್ತಮ ಈರುಳ್ಳಿ ಬೆಳೆ ಬರುತ್ತಿದ್ದು ಒಂದೂವರೆ ತಿಂಗಳಲ್ಲಿ ಉತ್ತಮ ಫಸಲು ಬರುವ ನಿರೀಕ್ಷೆಯಲ್ಲಿರುವ ರೈತರು ಉತ್ಸಾಹದಲ್ಲಿದ್ದಾರೆ.
ಈರುಳ್ಳಿ ರೈತರ ಸಂತಸ: ಅಲ್ಲಲ್ಲಿ ಮೆಣೆಸಿನಕಾಯಿ ಚೆನ್ನಾಗಿದೆ. ಮಾರುಕಟ್ಟೆಯಲ್ಲಿ ಕಳೆದ ತಿಂಗಳು 1ಕೆ.ಜಿ. ಈರುಳ್ಳಿಗೆ 40 ರಿಂದ 50ರು.ಗೆ ಏರಿದ್ದು ಇದೀಗ 35 ರು.ನಿಂದ 40ರು.ಗೆ ಮಾರಾಟವಾಗುತ್ತಿರುವುದರಿಂದ ಈರುಳ್ಳಿ ಬೆಳೆದಿರುವ ರೈತರಲ್ಲಿ ಸಂತಸ ಹೆಚ್ಚಿದೆ.
ಕಡೂರು ತಾಲೂಕಿನ ಕಸಬಾ, ಬೀರೂರು, ಹಿರೇನಲ್ಲೂರು, ಯಗಟಿ, ಸಿಂಗಟಗೆರೆ, ಸಖರಾಯಪಟ್ಟಣ, ಪಂಚನಹಳ್ಳಿ, ಚೌಳಹಿರಿಯೂರು ಸೇರಿದಂತೆ ಎಂಟು ಹೋಬಳಿಗಳಲ್ಲಿ 1,850 ಎಕರೆಯಲ್ಲಿ ನೆಲಗಡಲೆ, 3170 ಹೆಕ್ಟೇರ್ನಲ್ಲಿ ಎಳ್ಳು, 3,500 ಎಕರೆ ಪ್ರದೇಶದಲ್ಲಿ ಸೂರ್ಯಕಾಂತಿ, 45 ಹೆಕ್ಟೇರ್ನಲ್ಲಿ ಹರಳು ಸೇರಿದಂತೆ 11,750 ಹೆಕ್ಟೇರ್ನಲ್ಲಿ ಮೆಕ್ಕೆಜೋಳ ಮತ್ತಿತರ ಬೆಳೆಗಳನ್ನು ಬೆಳೆಲಾಗಿದೆ.
ಮುಖ್ಯವಾಗಿ ಈರುಳ್ಳಿ, ಮುಸುಕಿನ ಜೋಳ, ಸೂರ್ಯಕಾಂತಿ ಮತ್ತು ಎಳ್ಳಿನ ಬೆಳೆಗಳ ಮೇಲೆ ರೈತರ ಚಿತ್ತ ಹೆಚ್ಚಾಗಿದ್ದು, ಆಗಾಗ ಮೋಡದ ಆಟದಿಂದಾಗಿ ಆಲೂಗಡ್ಡೆ ಬೆಳೆಗೆ ಬಂದಿರುವ ಅಂಗಮಾರಿ ರೋಗದ ಬಗ್ಗೆ ತೋಟಗಾರಿಕೆ ಮತ್ತು ಕೃಷಿ ಇಲಾಖೆ ನಿಯಂತ್ರಣಕ್ಕೆ ಈಗಾಗಾಲೇ ಸೂಚನೆ ನೀಡಿದರೂ ಅಲ್ಲಿ ಅಂಗಮಾರಿ ಮತ್ತು ಗರಿಕೆ ರೋಗದಿಂದಾಗಿ ರೈತರು ಆತಂಕ ಎದುರಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

