ಗ್ರಾಪಂ ಅಧ್ಯಕ್ಷರಾಗಿ ಪೂರ್ಣೇಶ್ ಆಯ್ಕೆ
ಚಿಕ್ಕಮಗಳೂರು: ತಾಲೂಕಿನ ಕೆ.ಆರ್. ಪೇಟೆ ಗ್ರಾಪಂ ನೂತನ ಅಧ್ಯಕ್ಷರಾಗಿ ಟಿ.ಪಿ. ಪೂರ್ಣೇಶ್ ಅವಿರೋಧ ಆಯ್ಕೆಯಾಗಿದ್ದಾರೆ. ಕೆ.ಆರ್. ಪೇಟೆ ಗ್ರಾಪಂ ಅಧ್ಯಕ್ಷರಾಗಿದ್ದ ಬಿ.ಸಿ. ಶಿವೇಗೌಡ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಇತ್ತೀಚೆಗೆ ಚುನಾವಣೆ ನಡೆಯಿತು. ಟಿ.ಪಿ. ಪೂರ್ಣೇಶ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಬಸವರಾಜ್ ಘೋಷಿಸಿದರು. ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರಿಗೆ ಗ್ರಾಪಂ ಸದಸ್ಯರು ಅಭಿನಂದನೆ ಸಲ್ಲಿಸಿದರು.
ಶಿಕ್ಷಕರ ವರ್ಗಾವಣೆಖಂಡಿಸಿ ಗ್ರಾಮಸ್ಥರ ಪ್ರತಿಭಟನೆ
ಮೂಡಿಗೆರೆ: ತಾಲೂಕಿನ ಜಾವಳಿ ಕೆಳಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 60ಜನ ಮಕ್ಕಳಿದ್ದು, ಶಾಲೆಯ ಕ್ರಿಯಾಶೀಲ ಶಿಕ್ಷಕರೊಬ್ಬರನ್ನು ತಾತ್ಕಾಲಿಕ ವರ್ಗಾವಣೆ ಮಾಡಿದೆ. ಇದರಿಂದ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದು, 20 ರಿಂದ ಶಾಲೆಗೆ ಬೀಗ ಹಾಕುವ ಮೂಲಕ ಪ್ರತಿಭಟನೆ ನಡೆಸುವುದಾಗಿ ಎಸ್ಡಿಎಂಸಿ ಅಧ್ಯಕ್ಷ ಆನಂದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಶಿಕ್ಷಕರ ಏಕಾಏಕಿ ವರ್ಗಾವಣೆ ಬಗ್ಗೆ ಎಸ್ಡಿಎಂಸಿ ಸಬೆ ಕರೆದು ಚರ್ಚಿಸಿದ್ದು ಎಲ್ಲ ಸದಸ್ಯರು ಶಿಕ್ಷಣ ಇಲಾಖೆಯ ಅಧಿಕಾರಿಗಳ ನಿರ್ಧಾರವನ್ನು ಕಟುವಾಗಿ ಟೀಕಿಸಿದರು. ಸದಸ್ಯರ ತೀರ್ಮಾನದಂತೆ 19 ರವರೆಗೆ ಸಮಯವಕಾಶ ಕೊಟ್ಟು 20ರಿಂದ ಶಾಲೆಗೆ ಬೀಗ ಹಾಕಿ ಶಿಕ್ಷಕರು ವಾಪಾಸ್ಸಾಗುವವರೆಗೂ ಪ್ರತಿಭಟನೆ ನಡೆಸಲಾಗುವುದು. ಎಸ್ಡಿಎಂಸಿ ಮಾತ್ರವಲ್ಲದೆ ಗ್ರಾಮಸ್ಥರು ಸಂಘ ಸಂಸ್ಥೆಗಳು ಈ ಪ್ರತಿಭಟನೆಗೆ ಬೆಂಬಲ ವ್ಯಕ್ತ ಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಉಚಿತ ಆರೋಗ್ಯ ತಪಾಸಣಾ ಶಿಬಿರ
ಸೊರಬ: ಸುವರ್ಣ ಆರೋಗ್ಯ ಟ್ರಸ್ಟ್ ಯೋಜನೆಯಡಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ಬೆಂಗಳೂರಿನ ವೈದೇಹಿ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು. 100 ರೋಗಿಗಳ ತಪಾಸಣೆ ನಡೆಸಿ, ಹೃದಯ ಬೇನೆ 6, ನರರೋಗ 5, ಮೂತ್ರಪಿಂಡ 4, ಕ್ಯಾನ್ಸರ್ 4, ಮತ್ತು ಒಂದು ಪ್ಲಾಸ್ಟಿಕ್ ಸರ್ಜರಿ ಸೇರಿ ಒಟ್ಟು 20 ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಗುರುತಿಸಲಾಯಿತು. ವೈದೇಹಿ ಆಸ್ಪತ್ರೆಯ ವೈದ್ಯರಾದ ಡಾ. ಮಂಜುನಾಥ ಬಾಬು, ಡಾ. ಕ್ರಿಸ್ಟೋಫರ್, ಡಾ. ಪವನ್ ಪ್ರದೀಪ್ ಹಾಗೂ ಕೋ ಆರ್ಡಿನೇಟರ್ ಅನಿಲ್ ಕುಮಾರ್, ಆರೋಗ್ಯ ಮಿತ್ರರಾದ ಮೇಘರಾಜ ಸೊರಬ, ಕೃಷ್ಣಪ್ಪ ಇಂಗಳಕಿ ಆನವಟ್ಟಿ ಪಾಲ್ಗೊಂಡಿದ್ದರು.
15ರಂದು ಶ್ರೀಗಳ ಪಾದ ಪೂಜೆ
ಶಿವಮೊಗ್ಗ: ಸೋಂದಾ ಶ್ರೀ ಸ್ವರ್ಣವಲ್ಲಿ ಮಹಾಸಂಸ್ಥಾನದ ಶಿವಮೊಗ್ಗ ಸೀಮಾ ಸೇವಾ ಪರಿಷತ್ನಿಂದ ಆ.15ರಂದು ಶ್ರೀ ಮಠದ ಭಕ್ತರು ಸ್ವರ್ಣವಲ್ಲಿಗೆ ತೆರಳಿ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರ ಪಾದ ಪೂಜೆ ಹಮ್ಮಿಕೊಂಡಿದ್ದಾರೆ.
ಶ್ರೀಗಳು ಹಾಲಿ ಸ್ವರ್ಣವಲ್ಲಿಯಲ್ಲೇ ತಮ್ಮ ಚಾತುರ್ಮಾಸ್ಯ ವ್ರತ ಕೈಗೊಂಡಿದ್ದು, ಈ ಸಂದರ್ಭದಲ್ಲಿ ಶಿವಮೊಗ್ಗ ಭಕ್ತರು ಅಂದು ಬೆಳಿಗ್ಗೆ 7 ಗಂಟೆಗೆ ಇಲ್ಲಿಂದ ಶ್ರೀ ಮಠಕ್ಕೆ ತೆರಳಲಿದ್ದಾರೆ. ಸ್ವರ್ಣವಲ್ಲಿಗೆ ಶ್ರೀಗಳ ಪಾದಪೂಜೆಗಾಗಿ ಆಗಮಿಸಲು ಆಸಕ್ತಿ ಇರುವವರು ಮೊ-9449897126ನ್ನು ಸಂಪರ್ಕಿಸಬಹುದು ಎಂದು ಸೀಮಾ ಸೇವಾ ಪರಿಷತ್ ಸಂಚಾಲಕ ವೇ.ಮೂ.ಲಕ್ಷ್ಮೀನಾರಾಯಣ ಜೋಷಿ ತಿಳಿಸಿದ್ದಾರೆ.
ಆರಾಧನೋತ್ಸವ
ಸಾಗರ: ಇಲ್ಲಿನ ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಟ್ರಸ್ಟ್ನಿಂದ ಶ್ರೀ ಗುರುರಾಯರ ಆರಾಧನಾ ಮಹೋತ್ಸವ ಆ.21ರಿಂದ 23ರ ವರೆಗೆ ನಡೆಯಲಿದೆ ಎಂದು ವಿಶ್ವಸ್ಥ ಮಂಡಳಿಯ ವ್ಯವಸ್ಥಾಪಕ ಎನ್.ಎಸ್. ಮಹಾಬಲಗಿರಿ ರಾವ್ ತಿಳಿಸಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಆ.21ರ ಪೂರ್ವಾರಾಧನಾ, ಆ.22ರ ಪುಣ್ಯದಿನ ಹಾಗೂ ಆ. 23ರಂದು ಉತ್ತರಾರಾಧನೆ ನಡೆಯಲಿದೆ. ಪ್ರತಿದಿನ ಪ್ರಾತಃಕಾಲದಿಂದ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ವಾಯುಸ್ತುತಿ ಮತ್ತು ಅಷ್ಟೋತ್ತರ ಶತಸ್ತೋತ್ರ ಪಠಣ ಸಹಿತ ಅಭಿಷೇಕ, ಪಂಚಾಮೃತ, ಕಲಶಾಭಿಷೇಕ, 9.30ರಿಂದ 11ರವರೆಗೆ ಅರ್ಚನೆಗಳು, ಪಾದಪೂಜೆ ಇತ್ಯಾದಿ ನಂತರ ಮಹಾ ನೈವೇದ್ಯ, ಹಸ್ತೋದಕ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ. ಎಂದು ಅವರು ತಿಳಿಸಿದ್ದಾರೆ.
ತರಬೇತಿ ಶಿಬಿರ
ಶಿವಮೊಗ್ಗ: ಶ್ರೀ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ಸಂಸ್ಥೆಯು ಆಗಸ್ಟ್ 17 ಮತ್ತು 18ರಂದು ವಿವಿಧ ತರಬೇತಿ ನೀಡುವ ಶಿಬಿರ ಹಮ್ಮಿಕೊಂಡಿದೆ. ನಿರುದ್ಯೋಗಿಗಳು ಮನೆಯಲ್ಲೇ ತಯಾರಿಸುವಂತಹ ಕ್ಯಾಂಡಲ್ಸ್, ಪೆನಾಯಿಲ್, ಲಿಕ್ವಿಡ್ ಸೋಪ್, ಪೇಪರ್ ಬ್ಯಾಗ್ ತಯಾರಿಕಾ ತರಬೇತಿ ನೀಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ. ಮೊ-8880006003.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

