ತಡೆ ಇಲ್ಲದ ಕೆರೆ, ಅಪಾಯಕ್ಕೆ ಕರೆ
ಕ.ಪ್ರ.ವಾರ್ತೆ, ಶೃಂಗೇರಿ, ಆ.13
ಪಟ್ಟಣದ ಹೊರವಲಯದಲ್ಲಿರುವ ಶಿವಮೊಗ್ಗ ಮಂಗಳೂರು ರಾ.ಹೆ. 13 ರ ಭಕ್ತಂಪುರ ಬಳಿಯಿರುವ ಪುರಾತನ ಕೆರೆ ಏರಿ ಮೇಲಿನ ಪಯಣ ನಿಜಕ್ಕೂ ಅಪಾಯಕಾರಿ ಎನಿಸಿದೆ.
ರಸ್ತೆಯ ಒಂದು ಬದಿಯಲ್ಲಿ ಕೆರೆಯಿದ್ದು, ಇನ್ನೊಂದು ಬದಿಯಲ್ಲಿ ಗುಡ್ಡವಿದೆ. ರಸ್ತೆಯೂ ತೀರಾ ಕಿರಿದಾಗಿದ್ದು, ಸಂಚರಿಸಲು ಅನನುಕೂಲವಾಗುತ್ತಿದೆ. ಎರಡು ವಾಹನಗಳು ಎದುರುಬದುರಾದರೆ, ಅಥವಾ ನಿಯಂತ್ರಣ ತಪ್ಪಿದರೆ ಕೆರೆಗುರುಳುವುದರಲ್ಲಿ ಸಂಶಯವಿಲ್ಲ. ದಡದಲ್ಲಂತೂ ಯಾವುದೇ ಆಧಾರಗಳಿಲ್ಲದೆ ಮಣ್ಣೂ ಕುಸಿಯುತ್ತಿದೆ.
ಮೃತ್ಯುಕೂಪ: ಇಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಶಾಲಾ, ಕಾಲೇಜು, ಕೋರ್ಟ್, ಕಚೇರಿಗಳಿಗೆ ಸೇರಿದಂತೆ ಪಾದಾಚಾರಿಗಳು ಇದೇ ಮಾರ್ಗದಲ್ಲಿ ಓಡಾಡುತ್ತಾರೆ. ಇದು ಸದಾ ಜನನಿಬಿಡ ಪ್ರದೇಶವೂ ಆಗಿದೆ.
ರಸ್ತೆಯ ಮೇಲ್ಭಾಗದಲ್ಲಿ ಬೃಹತ್ ಗುಡ್ಡವಿದ್ದು, ಅಪಾಯಕಾರಿ ತಿರುವೂ ಇದೆ. ಇಲ್ಲಿ ಯಾವುದೇ ತಡೆಗೋಡೆ ಅಥವಾ ತಡೆಬೇಲಿಯೇ ಇಲ್ಲವಾಗಿದ್ದು, ಸಂಚಾರಿಗಳ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸುತ್ತಿದೆ.
ಈ ಕೆರೆಯ ಹೊಳೆತ್ತದೆ ಅದೆಷ್ಟೋ ವರ್ಷಗಳು ಕಳೆದಿವೆ. ನಿಯಂತ್ರಣ ತಪ್ಪಿ ವಾಹನ ಕೆರೆಗುರುಳಿದರೆ ದೊಡ್ಡ ಅನಾಹುತ ತಪ್ಪಿದ್ದಲ್ಲ. ಅಲ್ಲದೇ ಇದು ಮುಖ್ಯರಸ್ತೆಯಾಗಿರುವುದರಿಂದ ನಿತ್ಯ ಸಾವಿರಾರು ವಾಹನ ಸಂಚರಿಸುತ್ತದೆ.
ಬಿಡುವಿಲ್ಲದ ಸಂಚಾರ: ಶಿವಮೊಗ್ಗ, ತೀರ್ಥಹಳ್ಳಿ, ಮಂಗಳೂರು, ಉಡುಪಿ, ಚಿಕ್ಕಮಗಳೂರುಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿರುವುದರಿಂದ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಬಿಡುವೇ ಇಲ್ಲ.
ದಿನೇದಿನೇ ಕೆರೆ ದಡ ಕುಸಿಯುತ್ತಿದೆ. ಕೆರೆಯಲ್ಲಿ ಹೂಳು ತುಂಬಿದ್ದು, ಮಳೆಗಾಲ, ಬೇಸಿಗೆಯಲ್ಲಿಯೂ ಸದಾ ನೀರು ತುಂಬಿರುವದರಿಂದ ಸದಾ ಅಪಾಯವಾಗಿದೆ.
ಆದರೆ ಹೆದ್ದಾರಿ ಇಲಾಖೆ ಮಾತ್ರ ಇನ್ನೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಅಪಘಾತಗಳು ಸಂಭವಿಸುತ್ತಿದ್ದರೂ ಇನ್ನೂ ಎಚ್ಚೆತ್ತುಕೊಂಡಿಲ್ಲ. ಇನ್ನಾದರೂ ಹೆದ್ದಾರಿ ಇಲಾಖೆ ಇತ್ತ ಗಮನಹರಿಸಿ, ಕೂಡಲೇ ಈ ಕೆರೆಯ ದಡಕ್ಕೆ ತಡೆಗೋಡೆ ಅಥವಾ ತಡೆಬೇಲಿ ನಿರ್ಮಿಸಲು ಮುಂದಾಗಬೇಕಿದೆ. ಮುಂದೆ ಸಂಭವಿಸಬಹುದಾದ ಅನಾಹುತಗಳನ್ನು ತಪ್ಪಿಸಿ ಅತ್ಯಮೂಲ್ಯ ಜೀವಗಳನ್ನು ರಕ್ಷಿಸಬೇಕಿದೆ.
-ನೆಮ್ಮಾರ್ ಅಬೂಬಕರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

